• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಅನ್ನಭಾಗ್ಯದಡಿ ನೀಡುವ ಇಂದಿರಾ ಆಹಾರ ಕಿಟ್​​ನಲ್ಲಿ ಹೆಸರುಕಾಳು ಬದಲು ಹೆಚ್ಚುವರಿ ತೊಗರಿಬೇಳೆ ವಿತರಿಸಲು ತೀರ್ಮಾನ

Sambrama Prabha News by Sambrama Prabha News
November 7, 2025
in Home, Politics
0
ಅನ್ನಭಾಗ್ಯದಡಿ ನೀಡುವ ಇಂದಿರಾ ಆಹಾರ ಕಿಟ್​​ನಲ್ಲಿ ಹೆಸರುಕಾಳು ಬದಲು ಹೆಚ್ಚುವರಿ ತೊಗರಿಬೇಳೆ ವಿತರಿಸಲು ತೀರ್ಮಾನ

Updated By: Priyalachhi

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯಡಿ ನೀಡಲಾಗುವ ‘ಇಂದಿರಾ ಆಹಾರ ಕಿಟ್’ನಲ್ಲಿ (ಪೌಷ್ಟಿಕ ಆಹಾರ ಕಿಟ್) ಹೆಸರುಕಾಳು ಬದಲು ತೊಗರಿಬೇಳೆ ಹೆಚ್ಚುವರಿಯಾಗಿ ಕೊಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಪಡಿತರ ಚೀಟಿದಾರರಿಗೆ ವಿತರಿಸಲಾಗುವ ಕಿಟ್‌ನಲ್ಲಿದ್ದ 1 ಕೆ.ಜಿ. ಹೆಸರುಕಾಳನ್ನು ಕೈಬಿಟ್ಟು, ಅದರ ಬದಲಿಗೆ ತೊಗರಿಬೇಳೆಯನ್ನು ಹೆಚ್ಚುವರಿಯಾಗಿ ವಿತರಿಸಲು ತೀರ್ಮಾನಿಸಲಾಗಿದೆ. ರಾಜ್ಯದ ತೊಗರಿಬೇಳೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಮತ್ತು ಪಡಿತರದಾರರಿಗೆ ಮತ್ತಷ್ಟು ಪ್ರೋಟೀನ್‌ಯುಕ್ತ ಪೌಷ್ಟಿಕಾಂಶ ಒದಗಿಸುವ ಉದ್ದೇಶದೊಂದಿಗೆ ಈ ಬದಲಾವಣೆ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.

ಈ ಹಿಂದೆ ‘ಇಂದಿರಾ ಆಹಾರ ಕಿಟ್’ ನಲ್ಲಿ ತಲಾ 1 ಕೆ.ಜಿ. ತೊಗರಿಬೇಳೆ, ಹೆಸರುಕಾಳು, ಸಕ್ಕರೆ, ಉಪ್ಪು ಹಾಗೂ 1 ಲೀಟರ್ ಅಡುಗೆ ಎಣ್ಣೆಯನ್ನು ಸೇರಿಸಲಾಗಿತ್ತು. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಇತರೆ ಸಚಿವರು ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ಪ್ರಮುಖ ಬೆಳೆಯಾಗಿರುವುದರಿಂದ ರೈತರ ಹಿತ ಕಾಪಾಡಲು ಹೆಸರುಕಾಳಿನ ಬದಲಿಗೆ ತೊಗರಿಬೇಳೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.

ಹೆಸರುಕಾಳಿಗಾಗಿ ನಿಗದಿಪಡಿಸಿದ್ದ ವೆಚ್ಚದಲ್ಲೇ ತೊಗರಿಬೇಳೆಯನ್ನು ಖರೀದಿಸಿ ವಿತರಿಸಲಾಗುವುದು.‌ ಹಾಗಾಗಿ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಈ ಹಿಂದೆ ಅನುಮೋದಿಸಲಾದ 6119.52 ಕೋಟಿ ರೂ. ವೆಚ್ಚದಲ್ಲೇ ಪರಿಷ್ಕೃತ ಇಂದಿರಾ ಫುಡ್​​ಕಿಟ್ ನೀಡಲಾಗುವುದು. ಇಂದಿರಾ ಕಿಟ್‌ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಪದಾರ್ಥಗಳನ್ನು ಒಳಗೊಂಡಿರುತ್ತದೆ. ಆಹಾರ ಪದಾರ್ಥಗಳ ಖರೀದಿ ಪ್ರಕ್ರಿಯೆಯನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬದಲು, ಇನ್ಮುಂದೆ ಆಹಾರ ಇಲಾಖೆಯ ಆಯುಕ್ತರ ಮೂಲಕವೇ ಟೆಂಡರ್ ಕರೆದು ನಡೆಸಲು ಕೂಡ ಸಂಪುಟ ಸಭೆ ಅನುಮೋದನೆ ನೀಡಿದೆ.

ಪರಿಷ್ಕೃತ ಯೋಜನೆಯ ಪ್ರಕಾರ, ಆಹಾರ ಕಿಟ್‌ನಲ್ಲಿರುವ ಇತರ ವಸ್ತುಗಳ ಜೊತೆಗೆ, ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತೊಗರಿಬೇಳೆಯನ್ನು ವಿತರಿಸಲಾಗುತ್ತದೆ. 1 ಮತ್ತು 2 ಸದಸ್ಯರಿರುವ ಕುಟುಂಬಕ್ಕೆ ¼ ಕೆ.ಜಿ., 3 ಮತ್ತು 4 ಸದಸ್ಯರಿರುವ ಕುಟುಂಬಕ್ಕೆ ½ ಕೆ.ಜಿ., 5 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ¾ ಕೆ.ಜಿ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

ಬೆಳಗಾವಿ ಅಧಿವೇಶನ ಡಿ.8 ರಿಂದ ಡಿ.19?: ಈ ಬಾರಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದ ದಿನಾಂಕವನ್ನು ನಿಗದಿಗೊಳಿಸಲು ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿದೆ. ಡಿಸೆಂಬರ್‌ ತಿಂಗಳಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ಕೈಗೊಂಡಿದೆ. ಡಿ.8 ರಿಂದ 19ರವರೆಗೆ ನಡೆಸುವ ಸಾಧ್ಯತೆ ಇದೆ.

ಪೊಲೀಸ್ ಠಾಣೆ ಬಂಧಿತ ವ್ಯಕ್ತಿಗಳ ವಿವರ ನಿರ್ವಹಣೆ ಕಡ್ಡಾಯ: ವ್ಯಕ್ತಿ ಬಂಧನಕ್ಕೆ ಸಂಬಂಧಿಸಿದ ಮಾಹಿತಿಯ ದಾಖಲೆ ನಿರ್ವಹಣೆ ನಿಯಮಗಳು – 2025 ರಚಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಪ್ರತಿಯೊಂದು ಪೊಲೀಸ್ ಠಾಣೆಯು ಒಂದು ನಿಯಮಿತವಾದ ನಮೂನೆಯಲ್ಲಿ ಬಂಧಿತ ವ್ಯಕ್ತಿಗಳ ವಿವರಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ 48ನೇ ಪ್ರಕರಣದ 3ನೇ ಉಪಕಲಂನಲ್ಲಿ ವ್ಯಕ್ತಿಗಳ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸುವ ಸಲುವಾಗಿ ನಿಯಮಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಅದರನ್ವಯ ವ್ಯಕ್ತಿಗಳ ಬಂಧನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸುವ ಸಲುವಾಗಿ ಪಾರದರ್ಶಕ ಹಾಗೂ ಪರಿಣಾಮಕಾರಿ ಕ್ರಮವಿಧಾನವನ್ನು ರೂಪಿಸಲು ರಾಜ್ಯ ಸರ್ಕಾರದಿಂದ ವ್ಯಕ್ತಿ ಬಂಧನಕ್ಕೆ ಸಂಬಂಧಿಸಿದ ಮಾಹಿತಿಯ ದಾಖಲೆ ನಿರ್ವಹಣೆ ನಿಯಮಗಳು – 2025 ರಚಿಸಲು ತೀರ್ಮಾನಿಸಲಾಗಿದೆ.

ಸಂಪುಟದ ಇತರೆ ಪ್ರಮುಖ ತೀರ್ಮಾನ?:

  • “The Karnataka Submission of Final form by Police Officer Rules, 2025” ಅನುಮೋದನೆ
  • “The Karnataka Form and Manner of Information Rules, 2025ಕ್ಕೆ ಅನುಮೋದನೆ
  • ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಧೀನದಲ್ಲಿ ಬರುವ ಪಿಕೆಟಿಬಿ ಆಸ್ಪತ್ರೆಯ ಆವರಣದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ನಿರ್ಮಿಸಲು ಅವಶ್ಯವಿರುವ ಉಪಕರಣಗಳನ್ನು ರೂ.94.50 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ
  • ಮಂಗಳೂರಿನ ಬಜ್ಪೆ ಗ್ರಾಮದಲ್ಲಿ56 ಎಕರೆ ವಿಸ್ತೀರ್ಣದ ಜಮೀನಿನಲ್ಲಿ “ಹಜ್ ಭವನ” ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 20 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
  • ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಸಾರಕ್ಕಿಯ ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಾಗಾರ (ISPS) ಮತ್ತು ಅಗರಂನ ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಾಗಾರ (ISPS) ನಿಂದ ಕೆ&ಸಿ ವ್ಯಾಲಿಗೆ ಇರುವ ರೈಸಿಂಗ್ ಮೇನ್ ಸೇರಿ ಕೆ&ಸಿ ವ್ಯಾಲಿಯಲ್ಲಿ 60 MLD ತ್ಯಾಜ್ಯ ನೀರು ಶುದ್ದೀಕರಣ ಘಟಕ, ಅಗರಂನಲ್ಲಿ 120 MLD ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಾಗಾರ (ISPS) ಮತ್ತು ಸಾರಕ್ಕಿಯಲ್ಲಿ 18 MLD ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಾಗಾರ (ISPS) ಘಟಕಗಳ 05 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆ (O&M)ಯನ್ನು ರೂ.49.91 ಕೋಟಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ
  • ಶ್ರೀ ಚನ್ನಬಸವೇಶ್ವರ ಚಾರಿಟಬಲ್ ಟ್ರಸ್ಟ್, ದೊಡ್ಡ ಹುಣಸೆ ಕಲ್ಮಠ, ಸವಣೂರು, ಹಾವೇರಿ ಜಿಲ್ಲೆ ಇವರಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಹುಬ್ಬಳ್ಳಿ ತಾಲ್ಲೂಕು, ಉಣಕಲ್ ಗ್ರಾಮದ ರಿ.ಸ.ನಂ.537/1+2+3 ರಲ್ಲಿನ ನಿವೇಶನ ಸಂಖ್ಯೆ:22 ರಲ್ಲಿರುವ72 ಚ.ಮೀ ನಾಗರಿಕ ಸೌಲಭ್ಯ ನಿವೇಶನಕ್ಕೆ ನಿಗದಿಪಡಿಸಿರುವ ಗುತ್ತಿಗೆ ಮೊತ್ತಕ್ಕೆ ವಿನಾಯಿತಿ ನೀಡಲು ಒಪ್ಪಿಗೆ
  • 2021-223 ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಿರಿಸಲಾಗಿದ್ದ 67 ಉರ್ದು ಮಾಧ್ಯಮದ ಶಿಕ್ಷಕರ ಹುದ್ದೆಗಳನ್ನು ಸಾಮಾನ್ಯ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅವಕಾಶ ಕಲ್ಪಿಸಲು ಒಪ್ಪಿಗೆ
  • ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-2ಯನ್ನು ಅನುಷ್ಠಾನಗೊಳಿಸಲು ರಚಿಸಲಾಗಿರುವ ರಾಜ್ಯ ಮಟ್ಟದ ತಾಂತ್ರಿಕ ಸಮಿತಿ (SLTC) ಮತ್ತು ರಾಜ್ಯ ಉನ್ನತಾಧಿಕಾರಯುಕ್ತ ಸಮಿತಿ (SHPC)ಗಳ ಕಾರ್ಯಾವ್ಯಾಪ್ತಿಯನ್ನು ಪರಿಷ್ಕರಿಸಲು ಅನುನೋದನೆ
  • ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿ ಹೆಬ್ಬಾಳ ಗ್ರಾಮದಲ್ಲಿರುವ ಕೃಷಿ ಇಲಾಖೆಗೆ ಸೇರಿದ ಪ್ರಸ್ತುತ ಕರ್ನಾಟಕ ಪಶು ಹಾಗೂ ಪಶು ವೈದ್ಯಕೀಯ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಅನುಭೋಗದಲ್ಲಿರುವ 4-00 ಎಕರೆ/ ಗುಂಟೆ ಜಮೀನನ್ನು ನ್ಯಾಯಾಂಗ ಇಲಾಖೆಗೆ ಉಚ್ಚ ನ್ಯಾಯಾಲಯದ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಗೃಹ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಹಸ್ತಾಂತರಿಸಲು ಒಪ್ಪಿಗೆ
Tags: Indira Food Kits
Previous Post

ಬೆಂಗಳೂರಿನಲ್ಲಿ ಆರ್​ಟಿಒ ಭರ್ಜರಿ ಕಾರ್ಯಾಚರಣೆ

Next Post

ಏರದ ದರ, ನಿಲ್ಲದ ಕಬ್ಬು ಸಮರ

Next Post
ಏರದ ದರ, ನಿಲ್ಲದ ಕಬ್ಬು ಸಮರ

ಏರದ ದರ, ನಿಲ್ಲದ ಕಬ್ಬು ಸಮರ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.