ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಗೆ ಭೂಸ್ವಾಧೀನಕ್ಕಾಗಿ ಸರಕಾರ ಅಂತಿಮ ಅಧಿಸೂಚನೆ ಹಾಗೂ ಟೌನ್‌ಶಿಪ್‌ಗೆ ಪ್ರಧಾನಿ ಮೋದಿ ಮೇಲ್ವಿಚಾರಣಾ ಸಮಿತಿ ಪ್ರಸ್ತಾಪದ ಬಗ್ಗೆ ಬಿಜೆಪಿ, ಜೆಡಿಎಸ್‌ ಕಿಡಿಕಾರಿದ್ದು ಸರಕಾರದ ನಡೆಯನ್ನು ಖಂಡಿಸಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿವೆ.

ಸಿಎಂ ಡಿಕೆಶಿ ತಮ್ಮ ರಿಯಲ್‌ ಎಸ್ಟೇಟ್‌ ದಂಧೆಗೆ ಮೋದಿ ಹೆಸರು ಬಳಸಿ ರೈತರನ್ನು ವಂಚಿಸಲು ಮುಂದಾಗಿದ್ದಾರೆ. ಇದು ಖಂಡನೀಯವೆಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ರೈತ ವಿರೋಧಿ ನಿರ್ಧಾರ ಕೈಬಿಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಬೇಕೆಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪತ್ರ ಬರೆದಿದ್ದಾರೆ.

ರಾಹುಲ್ ಗಾಂಧಿಗೆ ವಿಜಯೇಂದ್ರ ಪತ್ರ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭಾನುವಾರ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ, ”ದೇಶದಾದ್ಯಂತ ರೈತರ ಭೂಮಿ ಉಳಿಸುವ ಹಾಗೂ ಕಾರ್ಪೊರೇಟ್ ಕಂಪನಿಗಳಿಂದ ದೇಶವನ್ನು ರಕ್ಷಿಸುವ ಘೋಷಣೆ ಕೂಗುತ್ತೀರಿ, ಯಾತ್ರೆ ನಡೆಸುತ್ತೀರಿ. ಆದರೆ ಕಾಂಗ್ರೆಸ್ ಸರಕಾರವಿರುವ ಕರ್ನಾಟಕದಲ್ಲಿ ನಿಮ್ಮ ಮುಖ್ಯಮಂತ್ರಿಗಳೇ ರೈತರ ಹಿತವನ್ನು ನಿರ್ಲಕ್ಷಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿರುವುದಾಗಿ ಭಾವಿಸುತ್ತೇನೆ. ಬಿಡದಿ ಸಮಗ್ರ ನಗರ (ಬಿಜಿಐಟಿ) ಯೋಜನೆ ಹೆಸರಿನಲ್ಲಿ ನಡೆಯುತ್ತಿರುವ ‘ಸರಕಾರಿ ಭೂಕಬಳಕೆ’ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು,” ಎಂದು ಒತ್ತಾಯಿಸಿದ್ದಾರೆ.

”ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಜನಸಂದಣಿ ಒತ್ತಡವನ್ನು ತಗ್ಗಿಸಲು ಸರಕಾರ ಬಿಡದಿ ಮತ್ತು ಹಾರೋಹಳ್ಳಿನ ನಡುವೆ 7,481 ಎಕರೆ ಪ್ರದೇಶದಲ್ಲಿ ‘ವರ್ಕ್-ಲೈವ್-ಪ್ಲೇ’ ಮಾದರಿಯ ಬೃಹತ್ ಟೌನ್‌ಶಿಪ್ ಅಭಿವೃದ್ಧಿಗೆ ಫಲವತ್ತಾದ ಕೃಷಿ ಭೂಮಿ ಆಯ್ಕೆಯ ಅಗತ್ಯವಿದೆಯೇ,” ಎಂದು ಪ್ರಶ್ನಿಸಿದ್ದಾರೆ.

470 ದಿನಗಳ ಹೋರಾಟಕ್ಕೆ ಬೆಲೆ ಇಲ್ಲವೇ?

”ಬಿಡದಿಯ 25 ಹಳ್ಳಿಗಳ ರೈತರು 470ಕ್ಕೂ ಹೆಚ್ಚು ದಿನದಿಂದ ಧರಣಿ ನಡೆಸುತ್ತಿದ್ದಾರೆ. ಫಲವತ್ತಾದ ಭೂಮಿಯಲ್ಲಿ ಕೃಷಿ ಚಟುವಟಿಕೆ ನಿರಂತರ ಇದೆ. ಸಮೀಪದಲ್ಲೇ 1,000 ಎಕರೆ ವಿಸ್ತೀರ್ಣದ ಬಿಡದಿ ಕೈಗಾರಿಕಾ ಪ್ರದೇಶಗಳಿದ್ದರೂ ಕೈಗಾರಿಕಾ ವಲಯವನ್ನು ಕಡೆಗಣಿಸಿ ‘ವರ್ಕ್-ಲೈವ್-ಪ್ಲೇ’ ಹೆಸರಿನ ಕಾಂಕ್ರೀಟ್ ಜಂಗಲ್ ನಿರ್ಮಿಸಲು ಹೊರಟಿರುವುದು ಎಷ್ಟು ಸರಿ? ಬಡವರ ಭೂಮಿಯನ್ನು ಅತ್ಯಂತ ಕಡಿಮೆ ಮಾರ್ಗಸೂಚಿ ದರಕ್ಕೆ ಕಿತ್ತುಕೊಂಡು, ರಿಯಲ್ ಎಸ್ಟೇಟ್ ಉದ್ಯಮಿಗಳ ಹಿತಾಸಕ್ತಿ ಕಾಯುವ ಈ ಯೋಜನೆ ನ್ಯಾಯಬದ್ಧ ಅನಿಸುತ್ತಿದೆಯೇ,” ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಹೆಸರಿನಲ್ಲಿ ದಲ್ಲಾಳಿತನಕ್ಕೆ ಬಿಡಲ್ಲ

ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ಬಿಜೆಪಿ ರೈತರ ಪರ ನಿಲ್ಲುತ್ತದೆ. ಒತ್ತಾಯಪೂರ್ವಕವಾಗಿ ರೈತರ ಜಮೀನು ಕಸಿಯಲು ಬಿಡುವುದಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಅಕ್ಷಮ್ಯ ಅಪರಾಧ. ಟೌನ್‌ಶಿಪ್‌ ವಿಚಾರದಲ್ಲಿ ಪ್ರಧಾನಿ ಮೋದಿ ಹೆಸರು ಹೇಳಿ ದಲ್ಲಾಳಿತನ ಮಾಡಲು ಬಿಡಲ್ಲ. ಭೂಸ್ವಾಧೀನ ಕೈಬಿಡದಿದ್ದರೆ ನಿಯಮ ಪಾಲನೆ ಮಾಡರಿ. -ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಮೋದಿ ಹೆಸರು ದುರ್ಬಳಕೆ ಬೇಡ

”ಬಿಡದಿ ಟೌನ್‌ಶಿಪ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮೆಚ್ಚಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಮೋದಿ ಅವರು ಭೂಕಂಪನದಿಂದ ಸಂಪೂರ್ಣ ನಾಶವಾಗಿದ್ದ ಪ್ರದೇಶದಲ್ಲಿ ಟೌನ್‌ಶಿಪ್‌, ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಆದರೆ, ಬಿಡದಿಯಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ತೋಟಗಳು, ಹಳ್ಳಿಗಳೇ ತುಂಬಿರುವ ಭೂಮಿಯಿದು. ಈ ವಿಚಾರವನ್ನು ಮುಖ್ಯಮಂತ್ರಿಗಳು ಪ್ರಧಾನಿಗಳಿಗೆ ಹೇಳಿದ್ದಾರೆಯೇ,” ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದರು.

”ಪ್ರಧಾನಿಯವರು ಮತ್ತು ಮುಖ್ಯಮಂತ್ರಿಗಳು ಇಬ್ಬರೇ ಮಾತನಾಡಿದ್ದು, ಅವರು ಏನು ಮಾತನಾಡಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿಗಳು ರಾಜ್ಯದ ರೈತರ ಹಿತ ಬಲಿಕೊಡುವುದಕ್ಕೆ ಪ್ರಧಾನಿಯವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಅಧಿಕಾರವಿದೆ ಎಂದು ಏನು ಬೇಕಾದರೂ ಮಾಡುವ ಉದ್ಧಟತನ ಬಿಡಿ ಅವರು,” ಎಂದು ವಾಗ್ದಾಳಿ ನಡೆಸಿದರು.

ಭೂಮಿ ಕೊಳ್ಳೆ ಹೊಡೆಯಲು ಬಿಡಲ್ಲ

ಬಿಡದಿ ಟೌನ್‌ಶಿಪ್‌ ಯೋಜನೆಯಲ್ಲಿ ನಾಡಿನ ಹಿತಾಸಕ್ತಿ ಅಡಗಿಲ್ಲ. ಇದು ಸರಕಾರಿ ರಿಯಲ್ ಎಸ್ಟೇಟ್ ಯೋಜನೆಯಾಗಿದ್ದು ಸಂಪೂರ್ಣವಾಗಿ ಹಣ ಲೂಟಿ ಮಾಡುವ ಸರಕಾರಿ ರಿಯಲ್ ಎಸ್ಟೇಟ್ ದಂಧೆಯಾಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಭಾನುವಾರ ಮಾತನಾಡಿದ ಅವರು, ”ಬೆಂಗಳೂರಿನಲ್ಲಿ ಮಳೆ ಸುರಿದರೆ ರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದು ವಾಹನ ಸಂಚಾರ ದೊಡ್ಡ ಪ್ರಯಾಸವಾಗುತ್ತದೆ. ಅದಕ್ಕೋ ‘ಬ್ರ್ಯಾಂಡ್ ಬೆಂಗಳೂರು’ ಎನ್ನುತ್ತಾರಲ್ಲ ಅದನ್ನು ಮಾಡುವುದು ಬಿಟ್ಟು ಬಿಡದಿ ರೈತರ ಬದುಕಿಗೆ ಬೆಂಕಿ ಹಾಕಲು ಹೊರಟಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಎಷ್ಟಷ್ಟು ಉಪಯುಕ್ತವಾಗದ ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ನಮ್ಮ ಪಕ್ಷ ರೈತರ ಪರ ನಿಂತು ಕಾನೂನು ಹೋರಾಟ ನಡೆಸುತ್ತದೆ,” ಎಂದು ಹೇಳಿದರು.

”ಬಿಡದಿ ಟೌನ್‌ಶಿಪ್ ಬಗ್ಗೆ ನಾನು ಚಿಂತನೆ ಮಾಡಿದ್ದು 2006ರಲ್ಲಿ. ಈಗ ನಾವು 2026ರಲ್ಲಿ ಇದ್ದೇವೆ. 20 ವರ್ಷಗಳಲ್ಲಿ ಎಷ್ಟೊಂದು ಬದಲಾವಣೆ, ಅಭಿವೃದ್ಧಿಯಾಗಿದೆ. ಯಾವುದೇ ಯೋಜನೆ ಕೈಗೊಳ್ಳುವ ಮೊದಲು ರೈತರ ಒಪ್ಪಿಗೆ ಪಡೆಯಬೇಕು. ಅದನ್ನು ಬಿಟ್ಟು ಸರ್ವಾಧಿಕಾರಿ ಮನೋಭಾವದಿಂದ ರೈತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ,” ಎಂದು ಕಿಡಿಕಾರಿದರು.

”ಮೊದಲಿನಿಂದ ಕಾಂಗ್ರೆಸ್ ಸರಕಾರ ಇಂಥದೇ ದಂಧೆಯಲ್ಲಿ ನಿರತವಾಗಿದೆ. ಬೆಂಗಳೂರು ಸುತ್ತಮುತ್ತ ಆರ್ಕಾವತಿ ಬಡಾವಣೆಗೆ 3000 ಎಕರೆ ಭೂಮಿ ನೋಟಿಸ್ ಮಾಡಲಾಗಿತ್ತು. ಬಳಿಕ ಅದರಲ್ಲಿ 1000 ಎಕರೆ ಕೈಬಿಡಲಾಯಿತು. ಅದರ ತನಿಖೆಗೆ ರಚನೆಯಾದ ಕೆಂಪಣ್ಣ ಆಯೋಗದ ವರದಿ ಎಲ್ಲಿ ಕೊಳೆಯುತ್ತಿದೆಯೋ ಗೊತ್ತಿಲ್ಲ,” ಎಂದು ಕುಟುಕಿದರು.

ಪಾಟೀಲ್ ವರದಿ ಎಲ್ಲಿ?: ”ಟೌನ್‌ಶಿಪ್‌ ವಿಷಯದಲ್ಲಿ ರಾಜಕೀಯ ಮಾಡುವ ಉದ್ದೇಶವಿಲ್ಲ. 2006ರಲ್ಲಿ ನಾನು ಬಿಡದಿ ಟೌನ್‌ಶಿಪ್‌ಗೆ ಸಹಿ ಮಾಡಿದ್ದು ಹೊರತು ಗಿರೀಶ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಿ ಬಿಡದಿ ಸ್ಥಳಗಳಲ್ಲಿ ಸತ್ಯಶೋಧನೆ ನಡೆಸಿದ ಆ ವರದಿ ಎಲ್ಲಿ ಹೋಯಿತು? ಅದನ್ನು ಜನರ ಮುಂದೆ ಇಡಲಿ. ಯಾವ ಉದ್ದೇಶಕ್ಕೆ ಅಂದು ಈ ಯೋಜನೆಯನ್ನು ಕಾಂಗ್ರೆಸ್ ನಾಯಕರು ವಿರೋಧಿಸಿದ್ದರು ಎಂಬುದನ್ನು ಜನರ ಮುಂದೆ ಹೇಳಲಿ,” ಎಂದು ಆಗ್ರಹಿಸಿದರು.

ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ರೈತರ ಪರವಾಗಿ ಕೈಬಿಡಲು ಒಪ್ಪಿದ್ದೆ ಎಂಬುದಾಗಿ ಎಚ್‌.ಡಿ.ಕುಮಾರಸ್ವಾಮಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಲಿ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಸವಾಲು ಹಾಕಿದ್ದಾರೆ.

ಭಾನುವಾರ ಮಾತನಾಡಿ, ”ಬಿಡದಿ ಟೌನ್‌ಶಿಪ್‌ ಯೋಜನೆ ಕೈಬಿಡಲು 2018ರಲ್ಲಿ ಮಾಡುತ್ತಿದ್ದಾರೆ,” ಎಂದು ಹೇಳಿದರು.

ಕುಮಾರಸ್ವಾಮಿ ಅವರು ಈ ಹಿಂದೆ ನೀಡಿದ್ದ ವಿಡಿಯೊ ಸಂದೇಶದ ಹೇಳಿಕೆ ಬಿಡುಗಡೆ ಮಾಡಿದ ಬಾಲಕೃಷ್ಣ, ”ಕುಮಾರಸ್ವಾಮಿ ಅವರು ವಿಡಿಯೊ ಸಂದೇಶದಲ್ಲಿ ಅಭಿವೃದ್ಧಿ ಹೊಂದಿದ ಟೌನ್ ಶಿಪ್‌ನಲ್ಲಿ ರೈತರಿಗೆ ಶೇ 40ರಷ್ಟು ನೀಡಬೇಕೆಂದು ತೀರ್ಮಾನ ಮಾಡಿದ್ದೆ ಎಂದು ಹೇಳಿದ್ದಾರೆ. ನಾವು ಜನಾಮತಿ…”

ರಾಹುಲ್ ಗಾಂಧಿಗೆ ಪತ್ರ: ನಿಖಿಲ್

”ಬಿಡದಿ ಟೌನ್‌ಶಿಪ್‌ ಕೈಬಿಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಈ ಭಾಗದ ರೈತರೂ ಸಹ ಅಂಚೆ ಮೂಲಕ ಪತ್ರ ಕಳುಹಿಸಲಿದ್ದಾರೆ,” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ”ಕೇಂದ್ರ ಸರಕಾರದ ಗ್ರೀನ್ ಸಿಟೀಸ್‌ಗಳ ಅಭಿವೃದ್ಧಿ ಯೋಜನೆ ವಿರುದ್ಧ ‘ಗ್ರೀನ್ ಓವರ್‌ಗ್ರೇಡ್’ ಅಥವಾ ಫಲವತ್ತಾದ ಕೃಷಿಭೂಮಿಯೋ ಎಂಬುದನ್ನು…”

ಕನಕಪುರಕ್ಕಿರುವ ಕಾಳಜಿ ಬಿಡದಿಗಿಲ್ಲ ”ಕನಕಪುರ ಕ್ಷೇತ್ರದ ಜನರು ತಮ್ಮ ಜಮೀನು ಮಾರಾಟ ಮಾಡಬಾರದು ಎಂದು ಸಿಎಂ ಸಲಹೆ ನೀಡುತ್ತಾರೆ. ಆದರೆ, ರಿಯಲ್ ಎಸ್ಟೇಟ್ ದಂಧೆಗೆ ಬಿಡದಿ ಭಾಗದವರ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳುವ ಇಚ್ಛೆಗೆ ನೀತಿ ಅನುಸರಿಸುತ್ತಾರೆ,” ಎಂದು ನಿಖಿಲ್ ಕಿಡಿಕಾರಿದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version