ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣದಲ್ಲಿ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹಾಗೂ ರೈಲುಗಳು ಹೊರವಲಯದಲ್ಲಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ರೈಲ್ವೆ ಯಾರ್ಡ್ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಜೂನ್ 15ರಿಂದ ಕೆಎಸ್ಆರ್ ನಿಲ್ದಾಣದಲ್ಲಿ ಈ ಕಾಮಗಾರಿ ಆರಂಭವಾಗಲಿದ್ದು, ಆಗಸ್ಟ್ ಮೊದಲ ವಾರದವರೆಗೆ ನಡೆಯಲಿದೆ. ಕಾಮಗಾರಿಯ ಹಿನ್ನೆಲೆಯಲ್ಲಿ 58 ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಹಾಗೂ 116 ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಪ್ಲಾಟ್‌ಫಾರ್ಮ್ ವಿಸ್ತರಣೆ ಮತ್ತು ಹೊಸ ಲೂಪ್ ಲೈನ್

 ಕೆಎಸ್ಆರ್ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ಗಳ ಕೊರತೆ ಬಹುದೊಡ್ಡ ಸಮಸ್ಯೆಯಾಗಿತ್ತು. ಪ್ರಸ್ತುತ ಕೇವಲ 460 ಮೀಟರ್ ಉದ್ದವಿರುವ 7ನೇ ಪ್ಲಾಟ್‌ಫಾರ್ಮ್ ಅನ್ನು ಸುಮಾರು 600 ಮೀಟರ್‌ಗೆ ವಿಸ್ತರಿಸಲು ಯೋಜಿಸಲಾಗಿದೆ. ಇದರಿಂದಾಗಿ 21-24 ಬೋಗಿಗಳ ಉದ್ದದ ರೈಲುಗಳು ಸುಲಭವಾಗಿ ನಿಲ್ಲಲು ಸಾಧ್ಯವಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಇತರ ಪ್ಲಾಟ್‌ಫಾರ್ಮ್‌ಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.

ಇದಲ್ಲದೆ, ಸರಕು ರೈಲುಗಳ ಸಂಚಾರಕ್ಕಾಗಿಯೇ ಪ್ರತ್ಯೇಕ ‘ಲೂಪ್ ಲೈನ್’ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಸರಕು ರೈಲುಗಳು ಪ್ಲಾಟ್‌ಫಾರ್ಮ್ ಮಾರ್ಗಗಳಲ್ಲೇ ಹಾದುಹೋಗಬೇಕಾದ ಅನಿವಾರ್ಯತೆ ಇದ್ದು, ಇದರಿಂದ ಪ್ರಯಾಣಿಕರ ರೈಲುಗಳು ನಿಲ್ದಾಣದ ಹೊರಗಡೆ ಕಾಯಬೇಕಾದ ಪರಿಸ್ಥಿತಿ ಇತ್ತು. ಹೊಸ ಲೂಪ್ ಲೈನ್‌ನಿಂದಾಗಿ ಸರಕು ರೈಲುಗಳು ಪ್ರತ್ಯೇಕವಾಗಿ ಸಂಚರಿಸಲಿದ್ದು, ಈ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಪ್ರಯಾಣಿಕರ ‘ಕಾಯುವ’ ಸಮಸ್ಯೆಗೆ ಪರಿಹಾರ

ಕೆಎಸ್ಆರ್ ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಕೊರತೆಯಿಂದಾಗಿ, ಯಶವಂತಪುರ ಕಡೆಯಿಂದ ಬರುವ ರೈಲುಗಳು ಮಲ್ಲೇಶ್ವರದಲ್ಲಿ, ಕಂಟೋನ್ಮೆಂಟ್ ಕಡೆಯಿಂದ ಬರುವ ರೈಲುಗಳು ಶಿವಾನಂದ ವೃತ್ತದ ಬಳಿ ಮತ್ತು ಮೈಸೂರು ಕಡೆಯಿಂದ ಬರುವ ರೈಲುಗಳು ಬಿನ್ನಿಮಿಲ್ ಬಳಿ ಸಿಗ್ನಲ್ ಸಿಗದೆ ಕಾಯುವುದು ಸಾಮಾನ್ಯ ದೃಶ್ಯವಾಗಿತ್ತು. ಈ ಹೊಸ ಕಾಮಗಾರಿಗಳಿಂದಾಗಿ 7ನೇ ಪ್ಲಾಟ್‌ಫಾರ್ಮ್‌ ವಿಸ್ತರಣೆಯಾಗಲಿದ್ದು, ಉದ್ದದ ರೈಲುಗಳು ನಿಲ್ಲಲು ಸಾಧ್ಯವಾಗಲಿದೆ. ಒಂದೇ ಸಮಯದಲ್ಲಿ ಸರಕು ಮತ್ತು ಪ್ರಯಾಣಿಕರ ರೈಲುಗಳು ಕಾಯದೆ ನಿಲ್ದಾಣ ಪ್ರವೇಶಿಸಲು ಸಾಧ್ಯವಾಗಲಿದೆ. ಯಾರ್ಡ್ ರಿಮಾಡೆಲಿಂಗ್‌ನಿಂದಾಗಿ ಕಂಟೋನ್ಮೆಂಟ್ ಮತ್ತು ಯಶವಂತಪುರದಿಂದ ಬರುವ ರೈಲುಗಳಿಗೆ ಅನುಕೂಲವಾಗಲಿದೆ.

ಸಿಗ್ನಲಿಂಗ್ ವ್ಯವಸ್ಥೆ ಸುಧಾರಣೆ

ಮೈಸೂರು ಮತ್ತು ಕಂಟೋನ್ಮೆಂಟ್ ಕಡೆಯಿಂದ ಬರುವ ಮತ್ತು ನಿರ್ಗಮಿಸುವ ರೈಲುಗಳ ಸುಗಮ ಸಂಚಾರಕ್ಕೆ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ (ಸಾಲಿಡ್ ಸ್ಟೇಟ್ ಇಂಟರ್‌ಲಾಕಿಂಗ್) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಹಳೆಯ ಎಲೆಕ್ಟ್ರಿಕಲ್ ಪಾಯಿಂಟ್‌ಗಳ ಬದಲಿಗೆ ಮೋಟಾರ್ ಚಾಲಿತ ಪಾಯಿಂಟ್‌ಗಳನ್ನು ಅಳವಡಿಸಲಾಗುತ್ತಿದ್ದು, ಟ್ರಾಫಿಕ್ ನಿರ್ವಹಣೆ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತವಾಗಲಿದೆ. ಇದು ರೈಲು ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸಲಿದ್ದು, ಅವಘಡಗಳನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಜ್ಞರ ಪ್ರತಿಕ್ರಿಯೆ: “ಬಹಳ ಹಿಂದೆಯೇ ಈ ಕೆಲಸ ಆಗಬೇಕಿತ್ತು. ಇದರಿಂದಾಗಿ ಕೆಎಸ್ಆರ್ ರೈಲು ನಿಲ್ದಾಣದ ಸಮಸ್ಯೆಗೆ ಒಂದಷ್ಟು ಮಟ್ಟಿಗೆ ಪರಿಹಾರ ಸಿಗಲಿದೆ. ಆದರೂ, ನಿಲ್ದಾಣದ ಯಾರ್ಡ್‌ನ ಸಂಪೂರ್ಣ ರಿಮಾಡೆಲಿಂಗ್ ಆಗಬೇಕು,” ಎಂದು ರೈಲ್ವೆ ಪ್ರಯಾಣಿಕರ ವೇದಿಕೆಯ ಕೆ.ಎನ್. ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version