ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಆಪ್ತ ಗೆಳೆಯ, ಉದ್ಯಮಿ ವೈಶಾಕ್ ಉಪಾಧ್ಯಾಯ (33) ಅವರು ನಟಿಯ ಫ್ಲಾಟ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್ ನಗರ) ನಡೆದಿದೆ. ಇತ್ತೀಚೆಗಷ್ಟೇ ಉದ್ಯಮಿಯೊಬ್ಬರಿಗೆ ಬೆದರಿಕೆ ಪತ್ರ ಬರೆದ ಪ್ರಕರಣದಲ್ಲಿ ಜೈಲು ಸೇರಿದ್ದ ವೈಶಾಕ್, ಜಾಮೀನಿನ ಮೇಲೆ ಹೊರಬಂದ ಬಳಿಕ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಸಾವಿಗೂ ಮುನ್ನ ನಟಿಗೆ ಕೊನೆ ಮೆಸೇಜ್!

ಕಳೆದ ಕೆಲವು ದಿನಗಳಿಂದ ವೈಶಾಕ್ ಮತ್ತು ಅವರ ಪತ್ನಿ ಮೇಘನಾ ನಡುವೆ ಕೌಟುಂಬಿಕ ಕಲಹ ತಾರಕಕ್ಕೇರಿತ್ತು. ಪತ್ನಿಯೊಂದಿಗಿನ ಜಗಳದಿಂದ ಬೇಸತ್ತಿದ್ದ ವೈಶಾಕ್, ಕಳೆದ ಒಂದು ವಾರದಿಂದ ಆರ್.ಆರ್. ನಗರದಲ್ಲಿರುವ ನಟಿ ಕೃಷಿ ತಾಪಂಡ ಅವರ ಫ್ಲಾಟ್‌ನಲ್ಲೇ ವಾಸವಿದ್ದರು. ಘಟನೆ ನಡೆದ ಬುಧವಾರ ರಾತ್ರಿ ಕೃಷಿ ತಾಪಂಡ ಮನೆಯಲ್ಲಿರಲಿಲ್ಲ. ರಾತ್ರಿ ವೇಳೆ ನಟಿಗೆ ಕರೆ ಹಾಗೂ ಮೆಸೇಜ್ ಮಾಡಿದ ವೈಶಾಕ್, “ನನಗೆ ಜೀವನ ಸಾಕಾಗಿದೆ, ನಾನು ಸಾಯುತ್ತಿದ್ದೇನೆ” ಎಂದು ಹೇಳಿದ್ದರು.

ಇದರಿಂದ ಆತಂಕಗೊಂಡ ಕೃಷಿ ತಾಪಂಡ, “ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡ, ನಾವು ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಬರೋಣ, ಅಲ್ಲಿಯವರೆಗೆ ಕಾಯಿ” ಎಂದು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಜೊತೆಗೆ ತಕ್ಷಣವೇ ವೈಶಾಕ್ ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಕುಟುಂಬಸ್ಥರು ಹಾಗೂ ಪೊಲೀಸರು ಫ್ಲಾಟ್‌ಗೆ ಬಂದು ನೋಡುವಷ್ಟರಲ್ಲಿ ವೈಶಾಕ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಸುದ್ದಿ ತಿಳಿದ ತಕ್ಷಣ ಕೃಷಿ ತಾಪಂಡ ಅವರು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಹಣದ ಬೇಡಿಕೆ ಮತ್ತು ಜೈಲು ವಾಸ

ವೈಶಾಕ್ ಅವರು ಆಟೋಮೊಬೈಲ್ ಉದ್ಯಮ ನಡೆಸುತ್ತಿದ್ದರು. ಈ ಹಿಂದೆ ಎವಿಆರ್ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿ ಎಂಬುವವರಿಗೆ 7 ಕೋಟಿ ರೂ. ನೀಡುವಂತೆ ಅನಾಮಧೇಯ ಬೆದರಿಕೆ ಪತ್ರ ಕಳುಹಿಸಿದ ಆರೋಪದ ಮೇಲೆ ಹೆಚ್.ಎ.ಎಲ್ (HAL) ಪೊಲೀಸರು ಇದೇ ಕೃಷಿ ತಾಪಂಡ ಅವರ ಫ್ಲಾಟ್‌ನಿಂದಲೇ ವೈಶಾಕ್‌ನನ್ನು ಬಂಧಿಸಿದ್ದರು. ಆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಾಗಿನಿಂದ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಮತ್ತು ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ನಿರಂತರ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಸದ್ಯ ಆರ್.ಆರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ವೈಶಾಕ್ ಪತ್ನಿ ಮೇಘನಾ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share.
Leave A Reply

Exit mobile version