ಬೆಂಗಳೂರು: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರದು ಕೇವಲ ಪಂಚೆ ಮಾತ್ರ ಸಿಂಪಲ್, ಆದರೆ ಅವರ ಲೈಫ್ ಸ್ಟೈಲ್, ಕಾರು, ಫಾರ್ಮ್ ಹೌಸ್ ಹಾಗೂ ಅವರು ಕಟ್ಟುವ ವಾಚ್‌ಗಳು ಅತ್ಯಂತ ದುಬಾರಿ ಎಂದು ಅವರು ಲೇವಡಿ ಮಾಡಿದ್ದಾರೆ.

“ಕೋಟ್ಯಂತರ ರೂಪಾಯಿ ಮೌಲ್ಯದ 85 ವಾಚ್‌ಗಳ ಕಲೆಕ್ಷನ್!”

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, “ನೀವು ಮುಖ್ಯಮಂತ್ರಿಯಾಗಿದ್ದಾಗ 62 ವಿವಿಧ ವಾಚ್‌ಗಳನ್ನು ಕಟ್ಟಿದ್ದೀರಿ ಎಂಬುದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಆ ವಾಚ್‌ಗಳ ಆರಂಭಿಕ ಬೆಲೆಯೇ 10 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಅದರಲ್ಲಿ 75 ಲಕ್ಷ ಬೆಲೆಯ ವಾಚ್‌ಗಳೂ ಇವೆ. ಇದೀಗ ನನಗೆ ತಿಳಿದಿರುವ ಪ್ರಕಾರ ನಿಮ್ಮ ವಾಚ್ ಕಲೆಕ್ಷನ್ 85ಕ್ಕೆ ಏರಿಕೆಯಾಗಿದ್ದು, ಇವುಗಳ ಒಟ್ಟು ಮೌಲ್ಯ 15 ರಿಂದ 20 ಕೋಟಿ ರೂಪಾಯಿ ಆಗಬಹುದು” ಎಂದು ಆರೋಪಿಸಿದ್ದಾರೆ.

“ಪಾಪ, ಬಿಡದಿಯ ರೈತರು ನೀವೇನೋ ವೈಟ್ ಅಂಡ್ ವೈಟ್ ಪಂಚೆ ಕಟ್ಟಿಕೊಂಡು ಸರಳವಾಗಿದ್ದೀರಿ ಎಂದುಕೊಂಡಿದ್ದಾರೆ. ಆದರೆ ಜನರಿಗೆ ನಾನು ಹೇಳುತ್ತಿದ್ದೇನೆ, ಕುಮಾರಣ್ಣನ ಪಂಚೆ ಮಾತ್ರ ಸಿಂಪಲ್. ಆದರೆ ಅವರ ಜಮೀನು, ಫಾರ್ಮ್ ಹೌಸ್, ಮನೆ, ಓಡಾಡುವ ಕಾರು ಮತ್ತು ವಾಚ್ ಎಲ್ಲವೂ ಕಾಸ್ಟ್ಲಿ” ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ಮೇಲಿನ ಆರೋಪಗಳಿಗೆ ಪ್ರದೀಪ್ ಈಶ್ವರ್ ತಿರುಗೇಟು

 ತಮ್ಮ ವಿರುದ್ಧ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, “ನನಗೆ ಯಾವುದೇ ಅಭದ್ರತೆ ಅಥವಾ ಭಯವಿಲ್ಲ. ನನ್ನ ಬಳಿ ಇರುವ ದಾಖಲೆಗಳನ್ನು ಮಾಧ್ಯಮದವರಿಗೂ ನೀಡಿದ್ದೇನೆ, ಅಧಿಕಾರಿಗಳು ಬೇಕಾದರೆ ತನಿಖೆ ಮಾಡಿಸಲಿ. ಹೈಕೋರ್ಟ್ ನೀಡಿರುವ ನೋಟಿಸ್‌ಗೆ ನಾನು ಸೂಕ್ತ ಉತ್ತರ ನೀಡುತ್ತೇನೆ. ನಾನಿನ್ನೂ ಆ ಪ್ರಾಪರ್ಟಿಯನ್ನು ರಿಜಿಸ್ಟರ್ ಮಾಡಿಕೊಂಡಿಲ್ಲ. ಒಬ್ಬ ಶೋಷಿತ, ಹಿಂದುಳಿದ ವರ್ಗದ (ಒಬಿಸಿ) ಹುಡುಗ ಬೆಳೆದು, ನಾಲ್ಕು ಕಾಸು ಸಂಪಾದಿಸಿ ಒಂದು ಕಾಲೇಜು ಕಟ್ಟುತ್ತಾನೆ ಎಂದರೆ ಕುಮಾರಣ್ಣನಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ” ಎಂದು ಕಿಡಿಕಾರಿದ್ದಾರೆ.

“ಕನಕಪುರದ ರೈತನ ಮಗ ಸಿಎಂ ಆಗಬಾರದೇ?”

“ಪ್ರಧಾನಿ ಮಗ ಮುಖ್ಯಮಂತ್ರಿ ಆಗಬಹುದು, ಮೊಮ್ಮಗ ಎಂಪಿ ಆಗಬಹುದು, ಆದರೆ ಕನಕಪುರದ ರೈತನ ಮಗ ಈ ರಾಜ್ಯದ ಸಿಎಂ ಆಗಬಾರದೇ? ಇದು ಯಾವ ನ್ಯಾಯ ಕುಮಾರಣ್ಣ? ಪ್ರಧಾನಿ ಮೊಮ್ಮಗ, ಸಿಎಂ ಮಗ ಸೋತೋದರು. ಆದರೆ ತಂದೆ ತಾಯಿ ಇಲ್ಲದ ನನ್ನಂತ ಅನಾಥ ಹುಡುಗನನ್ನು ನನ್ನ ಪಕ್ಷ ಗೆಲ್ಲಿಸಿಕೊಂಡು ಬಂತು, ಇದು ಕಾಂಗ್ರೆಸ್ ಪಕ್ಷದ ತಾಕತ್ತು” ಎಂದು ಡಿ.ಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.

ಆಸ್ತಿ ಮೂಲದ ಬಗ್ಗೆ ನೇರ ಪ್ರಶ್ನೆ:

“ನನಗಿರುವ ಮಾಹಿತಿಯ ಪ್ರಕಾರ ನಿಮಗೆ 700-800 ಎಕರೆ ಜಮೀನಿದೆ. ಬಿಡದಿಯಲ್ಲಿ ಅನಿತಕ್ಕನ ಹೆಸರಲ್ಲಿ 32 ಎಕರೆ ಜಮೀನಿದೆ ಎಂದು ನಿನ್ನೆ ಅವರೇ ಹೇಳಿದ್ದಾರೆ. 32 ಕೋಟಿ ರೂಪಾಯಿ ಬೆಲೆಬಾಳುವ ಜಮೀನು ಖರೀದಿಸಲು ಹಣ ಎಲ್ಲಿಂದ ಬಂತು? ಫಾರ್ಮ್ ಹೌಸ್‌ನಲ್ಲಿ ಬದನೆಕಾಯಿ ಮಾರಿ ತಗೊಂಡ್ರಾ? ಅಥವಾ ರಾಮರಾಜ್ ಪಂಚೆ ಮಾರಿದ್ರಾ? ಇಲ್ಲವೇ ಸಿಎಂ ಆಗಿದ್ದಾಗ ಫೈಲ್‌ಗಳಿಗೆ ಸಹಿ ಹಾಕಿ, ಡಿನೋಟಿಫಿಕೇಶನ್ ಮಾಡಿ ಹಾಗೂ ಬಳ್ಳಾರಿಯಿಂದ ಟಾಟಾ ಸುಮೋದಲ್ಲಿ ಬಂದ ಕಿಕ್ ಬ್ಯಾಕ್ ಹಣದಿಂದ ಖರೀದಿಸಿದ್ರಾ?” ಎಂದು ಪ್ರದೀಪ್ ಈಶ್ವರ್ ನೇರವಾಗಿ ಸವಾಲು ಹಾಕಿದ್ದಾರೆ.

“ನೀವು ಮಾಡಿದ ಆರೋಪಕ್ಕೆಲ್ಲಾ ಹೆದರಲು ನಮ್ಮಪ್ಪ ಪ್ರೈಮ್ ಮಿನಿಸ್ಟರ್ ಅಲ್ಲ, ಒಬ್ಬ ರೈತ. ನಿಮ್ಮಂತೆ ವೈಟ್ ಅಂಡ್ ವೈಟ್ ಹಾಕಿಕೊಂಡು ಬಿಲ್ಡಪ್ ಕೊಡುವ ರೈತನ ಮಗ ನಾನಲ್ಲ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಬಿಟ್ಟರೆ ನಾವು ನಿಮ್ಮ ಇಂಟಿಗ್ರಿಟಿಯನ್ನು ಪ್ರಶ್ನೆಯೇ ಮಾಡುವುದಿಲ್ಲ” ಎಂದು ಶಾಸಕರು ಸವಾಲೆಸೆದಿದ್ದಾರೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version