ತುಮಕೂರು (ಸಂಭ್ರಮ ಪ್ರಭ ನ್ಯೂಸ್ ಡೆಸ್ಕ್): ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರ ನಡೆಗಳು ತೀವ್ರ ಕುತೂಹಲ ಕೆರಳಿಸುತ್ತಿವೆ. ಒಂದು ಕಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಚಿವರ ಪಡೆಯೊಂದಿಗೆ ಮಂಗಳೂರಿನಲ್ಲಿ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ತಮ್ಮ ಆಪ್ತ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿರುವುದು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಕಾಂಗ್ರೆಸ್ ನಾಯಕತ್ವ ಹಾಗೂ ಡಿ.ಕೆ. ಶಿವಕುಮಾರ್ ಅವರ ಸಿಎಂ ಸ್ಥಾನದ ಕುರಿತು ನಡೆಯುತ್ತಿರುವ ವಾಕ್ಸಮರದ ನಡುವೆಯೇ ಸಿದ್ದರಾಮಯ್ಯ ಮತ್ತು ರಾಜಣ್ಣ ಅವರ ಈ ಭೇಟಿ ತೀವ್ರ ಮಹತ್ವ ಪಡೆದುಕೊಂಡಿದೆ.
Read this: ಸಿದ್ದರಾಮಯ್ಯಗೆ ರೆಸ್ಟ್ ಗ್ಯಾರಂಟಿ, ಕಾಂಗ್ರೆಸ್ ಸರ್ಕಾರ ದಿವಾಳಿ: ಆರ್. ಅಶೋಕ್ ತೀವ್ರ ವಾಗ್ದಾಳಿ
ತುಮಕೂರಿನಲ್ಲಿ ಸಿದ್ದರಾಮಯ್ಯ: ಕುರುಬ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗಿ
ಸಿದ್ದರಾಮಯ್ಯ ಅವರು ಖ್ಯಾತ ಕಲಾವಿದ ದಿವಂಗತ ಪಿ.ಆರ್. ತಿಪ್ಪೇಸ್ವಾಮಿ ಅವರ ಸಾಹಿತ್ಯ ಕೃತಿಗಳ ಕುರಿತ ಪುಸ್ತಕ ಬಿಡುಗಡೆ ಹಾಗೂ ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಮಕೂರಿಗೆ ಆಗಮಿಸಿದ್ದರು. ವಿಶೇಷವೆಂದರೆ, ಈ ಎರಡೂ ಕಾರ್ಯಕ್ರಮಗಳು ಕುರುಬ ಸಮುದಾಯಕ್ಕೆ ಸಂಬಂಧಿಸಿದ್ದಾಗಿದ್ದು, ಸಮುದಾಯದ ಮೇಲೆ ಸಿದ್ದರಾಮಯ್ಯ ಅವರಿಗಿರುವ ಹಿಡಿತ ಮತ್ತು ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.
ಸಿದ್ದರಾಮಯ್ಯ ಪ್ರಶ್ನಾತೀತ ನಾಯಕ: ರಾಜಣ್ಣ ಬ್ಯಾಟಿಂಗ್
ಸಿದ್ದರಾಮಯ್ಯ ಭೇಟಿಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೆ.ಎನ್. ರಾಜಣ್ಣ, “ಸಿದ್ದರಾಮಯ್ಯ ಅವರು ರಾಜ್ಯದ ಪ್ರಶ್ನಾತೀತ ನಾಯಕರು. ಅವರು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜಕೀಯದಲ್ಲಿ ಏಳು-ಬೀಳುಗಳು ಸಹಜ, ಆದರೆ ಅವರು ಸದಾ ಸಕ್ರಿಯವಾಗಿಯೇ ಇರುತ್ತಾರೆ” ಎಂದು ಹೇಳುವ ಮೂಲಕ ತಮ್ಮ ನಾಯಕನಿಗೆ ಬಲವಾದ ಬೆಂಬಲ ಸೂಚಿಸಿದರು.
ರಾಜಣ್ಣ ಹೇಳಿಕೆ ಮತ್ತು ಅಶೋಕ್ ತಿರುಗೇಟು: ಇತ್ತೀಚೆಗಷ್ಟೇ ಒಕ್ಕಲಿಗ ಮತಗಳ ಬಗ್ಗೆ ರಾಜಣ್ಣ ನೀಡಿದ್ದ ಹೇಳಿಕೆ ಭಾರೀ ಸದ್ದು ಮಾಡಿತ್ತು. “ಒಕ್ಕಲಿಗರು ಡಿ.ಕೆ. ಶಿವಕುಮಾರ್ ಅವರಿಗೆ ಮತ ಹಾಕುತ್ತಾರೆ, ಅದಕ್ಕಾಗಿಯೇ ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿ ಮಾಡಿದೆ” ಎಂದು ರಾಜಣ್ಣ ಹೇಳಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಆರ್. ಅಶೋಕ್, “ಒಕ್ಕಲಿಗರು ಡಿ.ಕೆ. ಶಿವಕುಮಾರ್ ಮುಖ ನೋಡಿ ವೋಟ್ ಹಾಕಲ್ಲ, ಹಾಕಿದರೂ ಅದು ಶೇ. 5ರಷ್ಟು ಮಾತ್ರ ಎಂದು ಸ್ವತಃ ರಾಜಣ್ಣ ಅವರೇ ಹೇಳಿದ್ದಾರೆ. ಡಿಕೆಶಿ ಅವರು ‘ನಾನು 2028ರಲ್ಲಿ ಬರುತ್ತೇನೆ’ ಎನ್ನುತ್ತಾರೆ. ಎಲ್ಲಿಂದ ಬರುತ್ತೀರಿ? ನಿಮ್ಮ ಪಕ್ಷದವರೇ ನಿಮಗೆ ವೋಟ್ ಬೀಳಲ್ಲ ಎನ್ನುತ್ತಿದ್ದಾರೆ” ಎಂದು ಕಾಲೆಳೆದಿದ್ದರು.
ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ರಾಜಣ್ಣ ಅವರ ನಿವಾಸದಲ್ಲಿ ಭೋಜನಕೂಟ ಮುಗಿಸಿ ಹೊರಬಂದ ಸಿದ್ದರಾಮಯ್ಯ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ಭೇಟಿಗೆ ರಾಜಕೀಯ ಅರ್ಥ ಕಲ್ಪಿಸುವುದನ್ನು ಅವರು ನಿರಾಕರಿಸಿದರು.
“ನಾನು ಮಾಧ್ಯಮಗಳ ಮುಂದೆ ರಾಜಕೀಯ ಮಾತನಾಡುವುದಿಲ್ಲ. ರಾಜಣ್ಣ ಅವರು ಅತ್ಯುತ್ತಮ ಊಟದ ವ್ಯವಸ್ಥೆ ಮಾಡಿದ್ದರು. ಮಾಂಸಾಹಾರ ಮತ್ತು ಸಸ್ಯಾಹಾರ ಎರಡೂ ಇತ್ತು, ನಾನು ಸಸ್ಯಾಹಾರವನ್ನು ಸ್ವಲ್ಪ ಹೆಚ್ಚೇ ತಿಂದೆ. ನಮ್ಮ ನಡುವೆ ಯಾವುದೇ ರಾಜಕೀಯ ವಿಚಾರಗಳ ಚರ್ಚೆಯಾಗಿಲ್ಲ” ಎಂದು ನಗುಮುಖದಿಂದಲೇ ಸ್ಪಷ್ಟಪಡಿಸಿದರು.
ಅಹಿಂದ ನಾಯಕರ ಒಗ್ಗಟ್ಟು?
ಕಾಂಗ್ರೆಸ್ ಪಕ್ಷದೊಳಗೆ ಸಿದ್ದರಾಮಯ್ಯ ಅವರ ರಾಜಕೀಯ ಸಮೀಕರಣಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ, ಕೆ.ಎನ್. ರಾಜಣ್ಣ ಅವರೊಂದಿಗಿನ ನಿಕಟ ಒಡನಾಟ ಮತ್ತೆ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಅವರ ಕಟ್ಟಾ ‘ಅಹಿಂದ’ ಬೆಂಬಲಿಗರ ಪೈಕಿ ರಾಜಣ್ಣ ಮುಂಚೂಣಿಯಲ್ಲಿದ್ದು, ಬಹಿರಂಗವಾಗಿಯೇ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿರುವುದು ಡಿಕೆಶಿ ಬಣಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.


