Updated By: Priyalachhi
ಬೆಂಗಳೂರು: ಕೆಂಗೇರಿ ಸಮೀಪದ ಬಿ.ಎಂ. ಕಾವಲು ಅರಣ್ಯ ಪ್ರದೇಶದಲ್ಲಿ ಸುಮಾರು 25 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಿದ ಪ್ರಕರಣ ಬಗ್ಗೆ ಸಿಐಡಿ ಅಥವಾ ಎಸ್ಐಟಿ ರಚಿಸಿ ವಿಶೇಷ ತನಿಖೆ ನಡೆಸಬೇಕೆಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಒತ್ತಡ ಹಾಕಿದ್ದಾರೆ.
ಭೂ ಕಬಳಿಕೆ ಬಗ್ಗೆ ಮುಖ್ಯಮಂತ್ರಿಗೆ ಸುದೀರ್ಘ ಪತ್ರ ಬರೆದಿರುವ ಸಚಿವರು, ಸರ್ಕಾರಿ ಜಾಗ ಕಬಳಕೆಯಲ್ಲಿ ಭೂಗಳ್ಳರ ಜೊತೆ ಸರ್ಕಾರಿ ಅಧಿಕಾರಿಗಳೂ ಸಹ ಶಾಮೀಲಾಗಿರುವ ಸಾಧ್ಯತೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಮೌಲ್ಯದ 532 ಎಕರೆ ಅರಣ್ಯ, ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿರುವ ವ್ಯಕ್ತಿಯ ಹಿಂದಿರುವವರ ಸಂಚನ್ನು ಬಯಲು ಮಾಡಬೇಕು. ತಪ್ಪಿತಸ್ಥರನ್ನು ಶಿಕ್ಷಿಸಲು ಸಿಐಡಿ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಹೈಕೋರ್ಟ್ನಲ್ಲಿ ಎಂ.ಬಿ. ನೇಮಣ್ಣ ಗೌಡ @ ಎಂ.ಬಿ. ಮನ್ಮಥ ಎನ್ನುವರು ರಿಟ್ ಅರ್ಜಿ ಸಲ್ಲಿಸಿ ಇನಾಮ್ ರದ್ದು ಕಾಯ್ದೆ ಪ್ರಕಾರ ಹಾಸನದ ವಿಶೇಷ ಜಿಲ್ಲಾಧಿಕಾರಿಗಳ ಆದೇಶದಂತೆ ಬೆಂಗಳೂರಿನ ಕೆಂಗೇರಿ ಬಳಿಯ ಬಿ.ಎಂ. ಕಾವಲ್ ಪ್ರದೇಶದಲ್ಲಿ ತಮಗೆ ಮಂಜೂರು ಮಾಡಲಾಗಿದೆ ಎನ್ನಲಾದ 482 ಎಕರೆ ಕಾಯ್ದಿಟ್ಟ ಅರಣ್ಯಭೂಮಿ ಸೇರಿದಂತೆ ಒಟ್ಟು 532 ಎಕರೆ ಜಮೀನಿನ ದಾಖಲೆಗಳನ್ನು 3 ತಿಂಗಳೊಳಗೆ ತಮ್ಮ ಹೆಸರಿಗೆ ಮಾಡಿಕೊಡುವಂತೆ ಆದೇಶ ಪಡೆದಿದ್ದಾರೆ ಎನ್ನುವುದನ್ನು ಸಚಿವರು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನೂರಾರು ಎಕರೆಯ ಸರ್ಕಾರಿ ಭೂಮಿ ಕಬಳಿಕೆ ಮಾಡಲು ನಡೆಸಿದ ರೋಚಕತೆಯನ್ನು ಸಿಎಂಗೆ ಬರೆದ ಪತ್ರದಲ್ಲಿ ವಿವರವಾಗಿ ಪ್ರಸ್ತಾಪ ಮಾಡಿರುವ ಅರಣ್ಯ ಸಚಿವರು 90 ದಿನ ಪೂರ್ಣಗೊಳ್ಳಲು 1 ದಿನ ಬಾಕಿ ಇರುವವರೆಗೂ ಹೆಚ್ಚುವರಿ ಸರ್ಕಾರಿ ವಕೀಲ ಯೋಗಣ್ಣ ಎನ್ನುವರು ಈ ಮಾಹಿತಿಯನ್ನು ಸರ್ಕಾರಕ್ಕಾಗಲೀ, ಅರಣ್ಯ ಇಲಾಖೆಗಾಗಲೀ ನೀಡಿರುವುದಿಲ್ಲ. ಬದಲಾಗಿ ಮೇಲ್ಮನವಿ ಸಲ್ಲಿಸಲು ಇದು ಸೂಕ್ತ ಪ್ರಕರಣವಲ್ಲ ಎಂದು ನಮೂದಿಸಿ ಅರ್ಜಿದಾರರಿಗೆ ಅನುಕೂಲ ಮಾಡಿಕೊಡುವಂತೆ ವರ್ತಿಸಿದ್ದಾರೆ. ಇದು ಶಂಕಾಸ್ಪದವಾಗಿದೆ ಎಂದೂ ಪತ್ರದಲ್ಲಿ ಸಚಿವರು ತಿಳಿಸಿದ್ದಾರೆ.

