ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಟೆಹರಾನ್: ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳು ತೋರುತ್ತಿಲ್ಲ. ದಿನದಿಂದ ದಿನಕ್ಕೆ ಅದು ಹೆಚ್ಚಾಗುತ್ತಲೇ ಹೋಗಿದೆ. ಇರಾನಿನ ಹಡಗು ಸಾಗಣೆ ಮತ್ತು ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಇದೀಗ, ಓಪನ್ ಆಗಿದ್ದ ಹಾರ್ಮುಜ್ ಜಲಸಂಧಿ ಮೇಲೆ ಮತ್ತೆ ನಿರ್ಬಂಧ ಹೇರಿದೆ.

ಇದಾದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್ ವೊಂದರ ಮೇಲೆ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಎರಡು ಗನ್‌ಬೋಟ್‌ಗಳು ಗುಂಡಿನ ದಾಳಿ ನಡೆಸಿವೆ ಎಂದು ಬ್ರಿಟಿಷ್ ಮಿಲಿಟರಿ ಶನಿವಾರ ತಿಳಿಸಿದೆ.

ಹಡಗು ಹಾಗೂ ಅದರ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಹಡಗು ಭದ್ರತೆಯನ್ನು ಮೇಲ್ವಿಚಾರಣೆ ಮಾಡುವ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಹೇಳಿದೆ. ಆದರೆ ಅದು ಯಾವ ರಾಷ್ಟ್ರದ ಹಡಗು, ಎಲ್ಲಿಗೆ ಹೋಗುತಿತ್ತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಇರಾನಿನ ಹಡಗು ಸಂಚಾರ ಮತ್ತು ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನಕ್ಕೆ ಪ್ರತಿಕ್ರಿಯೆಯಾಗಿ, ಪ್ರಮುಖ ಜಾಗತಿಕ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಗೆ ಮತ್ತೆ ನಿರ್ಬಂಧ ಹೇರುವುದಾಗಿ ಇರಾನ್ ಘೋಷಿಸಿದ ನಂತರ ಈ ಘಟನೆ ನಡೆದಿದೆ.

ಭಾರತೀಯ ಹಡಗುಗಳು ವಾಪಸ್: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುಂಡಿನ ದಾಳಿ ಬೆನ್ನಲ್ಲೇ, ಹಾರ್ಮುಜ್ ಜಲಸಂಧಿಯಲ್ಲಿ ಎರಡು ಭಾರತೀಯ ಹಡಗುಗಳು ತಮ್ಮ ದಿಕ್ಕನ್ನು ಬದಲಾಯಿಸಿವೆ ಎಂದು ಹಡಗು ಟ್ರ್ಯಾಕಿಂಗ್ ಸೇವಾ ಸಂಸ್ಥೆ ತಿಳಿಸಿದೆ.

ಹಡಗು ಮೇಲ್ವಿಚಾರಕ TankerTrackers.com ಪ್ರಕಾರ, ಸುಮಾರು 2 ಮಿಲಿಯನ್ ಬ್ಯಾರೆಲ್ ಇರಾಕಿ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಭಾರತೀಯ ಧ್ವಜವನ್ನು ಹೊಂದಿರುವ ಸೂಪರ್ ಟ್ಯಾಂಕರ್ ಹಡಗು ವಾಪಸ್ಸಾಗಿದೆ ಎನ್ನಲಾಗಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version