Updated By: Priyalachhi
ಬೆಳಗಾವಿ: ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್ ನಿಂದ ಕರೆ ಬಂದಿದೆ ಎಂಬ ವಿಚಾರಕ್ಕೆ ಬೆಳಗಾವಿಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ ತಾಲೂಕಿನ ಹುದಲಿಯಲ್ಲಿ ಮಾತನಾಡಿದ ಅವರು, ನೀವು ಅವರನ್ನೇ ಕೇಳಬೇಕು ನಾವೇನೂ ಹೇಳುವುದು?, ಟಾಸ್ ಮಾಡಿದವರು ಅವರೇ ಇಬ್ಬರು. ಅದು ದೆಹಲಿಯ ಫಿರೋಜ್ ಶಾ ಕೊಟ್ಲಾದ ಮೈದಾನದಲ್ಲಿ ಟಾಸ್ ಆಗಿದೆ. ನಾವು ಕ್ಯಾಪ್ಟನ್ ಜಾಗದಲ್ಲಿ ಇಲ್ಲ. ಆವಾಗ ಥರ್ಡ್ ಅಂಪೈರ್ ಕೂಡ ಇರಲಿಲ್ಲ. ಇಬ್ಬರೇ ಟಾಸ್ ಹಾಕಿದವರು ಅದು ಹೆಡ್ ಬಿದ್ದಿದೇಯೋ ಟೇಲ್ ಬಿದ್ದಿದೆಯೋ ಅವರನ್ನೇ ಕೇಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಮತ್ತೊಂದೆಡೆ, ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಣ್ಣಿನ ಆರೋಗ್ಯ ಬಹಳ ಮುಖ್ಯ, ಮಣ್ಣು ಸಂರಕ್ಷಣೆ ಆಗಬೇಕು. ನೀರು ನಿರ್ವಹಣೆ ಆಗಬೇಕು. ಕಬ್ಬು ಬೆಳೆಯುವ ಜಿಲ್ಲೆಗಳಿಗೆ ಈ ಯೋಜನೆ ಜಾರಿಗೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಯೋಜನೆ ವಿಸ್ತರಣೆ ಮಾಡುತ್ತೇವೆ ಎಂದರು.
ಡಿಕೆಶಿ ಹೆಸರು ಹೇಳುತ್ತಿದ್ದಂತೆ ಗದರಿದ ಸಿಎಂ: ಹೈಕಮಾಂಡ್ ಕರೆ ಬಂದಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ ಹೇ ಯಾರೀ ಅದು ಎಂದು ಗದರಿ ಪ್ರತಿಕ್ರಿಯೆ ನೀಡದೇ ಅಲ್ಲಿಂದ ತೆರಳಿದರು.
ಸಿಎಂ, ನನಗೆ ಹೈಕಮಾಂಡ್ ಏನೋ ಹೇಳಿದೆ – ಡಿಸಿಎಂ: ಬೆಂಗಳೂರಿನಲ್ಲಿಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ”ನಮ್ಮ ಹೈಕಮಾಂಡ್ ನಾಯಕರು ಸಿಎಂ ಮತ್ತು ನನಗೆ ಅಂದರೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದೂ ಇಬ್ಬರಿಗೂ ಹೇಳಿದ್ದಾರೆ. ಆಗ ಇಬ್ಬರೂ ದೆಹಲಿಗೆ ಹೋಗುತ್ತೇವೆ ಎಂದರು.
