—Advertisement—

ನಾನು, ಸಿಎಂ ಬ್ರದರ್ಸ್ ರೀತಿ ಕೆಲಸ ಮಾಡುತ್ತಿಲ್ಲವೇ?: ಡಿಸಿಎಂ

Author Picture
Published On: December 21, 2025

—Advertisement—

Updated By: Priyalachhi

ಬೆಂಗಳೂರು: “ನನಗೆ ಕಾಂಗ್ರೆಸ್ನ ಯಾವುದೇ ನಾಯಕರ ಜತೆ ಭಿನ್ನಾಭಿಪ್ರಾಯಗಳಿಲ್ಲ. ನಾನು, ಸಿಎಂ ಒಟ್ಟಿಗೆ ಸಹೋದರರಂತೆ ಕೆಲಸ ಮಾಡುತ್ತಿಲ್ಲವೇ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿಯವರ ಆಪ್ತ ಬಳಗದವರನ್ನು ಭೇಟಿ ಮಾಡಿದ್ದೀರಿ ಎಂದು ಕೇಳಿದಾಗ, “ಅವರಿಗೆ ಸಿಎಂ ಆಪ್ತರೇನು? ಅವರು ನನಗೂ ಆಪ್ತರೇ. ಅವರು ಯಾರಿಗೆ ಆಪ್ತರಿಲ್ಲ ಹೇಳಿ. ನಾನು ಸಿಎಂ ಆಪ್ತರಲ್ಲವೇ? ರಾಜಣ್ಣ ಅವರು ಜನತಾ ದಳದಲ್ಲಿದ್ದರು. ನಾನು ಕಾಂಗ್ರೆಸ್ ನವನು. ಅಂದು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಿದ್ದು ನಾನು. ಹೋಗಿ ಬೇಕಾದರೆ ಅವರನ್ನೇ ಕೇಳಿ. ಸಿಎಂಗೂ ಇದಕ್ಕೂ ಸಂಬಂಧವೇ ಇಲ್ಲ” ಎಂದರು.

ರಾಜಕೀಯ ಬೆಂಬಲಕ್ಕೆ ಕೆ.ಎನ್. ರಾಜಣ್ಣ ಹಾಗೂ ನೀವು ಭೇಟಿ ಮಾಡಿದ್ದೀರಿ ಎಂದಾಗ, “ನಾವು ಸಹೋದ್ಯೋಗಿಗಳು. ಅವರು ನಮ್ಮ ಜತೆ ಕೆಲಸ ಮಾಡಿರುವವರು. ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯಗಳಿಲ್ಲ. ಕಳೆದ 16 ವರ್ಷಗಳಿಂದ, ಅವರು ನಮ್ಮ ಪಕ್ಷಕ್ಕೆ ಬಂದ ದಿನದಿಂದ ನನಗೂ ಮುಖ್ಯಮಂತ್ರಿಯವರಿಗೂ ಬಿನ್ನಾಭಿಪ್ರಾಯಗಳು ಏನಾದರೂ ಇದೆಯಾ? ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳು, ವಿರೋಧ ಪಕ್ಷಗಳು ಸೃಷ್ಟಿ ಮಾಡುತ್ತಿವೆ. ತಮಗೆ ಬೇಕಾದ ಆಹಾರ ಸೃಷ್ಟಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ರಾಜಕೀಯವಾಗಿ ಹೇಳಿಕೆ ಕೊಟ್ಟಿರುತ್ತಾರೆ. ಇದಕ್ಕೆ ಬೇಸರ ಮಾಡಿಕೊಳ್ಳಲು ಆಗುತ್ತದೆಯೇ? ಅಣ್ಣ ತಮ್ಮಂದಿರೇ ಜಗಳ ಮಾಡುತ್ತಾರಂತೆ, ಇನ್ನು ನಮ್ಮದು ಯಾವ ಜಗಳ” ಎಂದರು.

“ಎಲ್ಲಾ ಕಾಂಗ್ರೆಸ್ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ನನ್ನ ಸ್ನೇಹಿತರು, ಸಹೋದ್ಯೋಗಿಗಳು, ಒಟ್ಟಿಗೆ ಇದ್ದೇವೆ. ನಾನಂತು ಯಾರ ಮೇಲೂ ಜಗಳ ಮಾಡಲು ಹೋಗಿಲ್ಲ. ಯಾವ ವಿಚಾರಕ್ಕೂ ಒಬ್ಬರ ಮೇಲೆ ಇನ್ನೊಬ್ಬರು ಇದುವರೆಗೂ ಹೇಳಿಕೆ ನೀಡಿಲ್ಲ. ದಾಖಲೆಗಳನ್ನು ತೆಗೆದು ನೋಡಿ. ವಿರೋಧ ಪಕ್ಷದವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಿದ್ದೇನೆಯೇ ಹೊರತು ನಾನಾಗಿಯೇ ಯಾರ ಮೇಲೂ ಹೇಳಿಕೆ ನೀಡಿಲ್ಲ. ನಾನಾಗಿಯೇ ಒಬ್ಬರ ಮೇಲಾದರೂ ಹೇಳಿಕೆ ನೀಡಿದ್ದರೆ ತಿಳಿಸಿ” ಎಂದರು.

“ರಾಜಣ್ಣ ಅವರು ನಮ್ಮ ಶಾಸಕರು, ನಮ್ಮ ಜತೆ ಮಂತ್ರಿಯಾಗಿದ್ದವರು. ಸೌಹಾರ್ದಯುತ ಭೇಟಿ ಮಾಡುತ್ತೇವೆ. ಶನಿವಾರ ಸರಿಯಾಗಿ ಮಾತನಾಡಲು ಆಗಲಿಲ್ಲ. ಅದಕ್ಕೆ ಇಂದು (ಭಾನುವಾರ) ಸಹ ಭೇಟಿ ಮಾಡುತ್ತೇನೆ ಎಂದು ಹೇಳಿದ್ದೇನೆ. ರಾಜ್ಯಪಾಲರ ಕಾರ್ಯಕ್ರಮ ಇರುವ ಕಾರಣಕ್ಕೆ ಆನಂತರ ಭೇಟಿ ಮಾಡುತ್ತೇನೆ”ಎಂದರು.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)… Read More

Related News

Leave a Comment

Home
Web Stories
Instagram
WhatsApp