Updated By: Priyalachhi

2025ರ ಕ್ರಿಸ್ಮಸ್​ಗೆ ಕನ್ನಡ ಚಿತ್ರರಂಗದ ಐವರು ಘಟಾನುಘಟಿಗಳ 3 ಬಹುನಿರೀಕ್ಷಿತ, ಬಿಗ್​​ ಬಜೆಟ್​ ಪ್ರಾಜೆಕ್ಟ್​​​ಗಳು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದವು. ಆ ಪೈಕಿ ಅಭಿನಯ ಚಕ್ರವರ್ತಿ ಸುದೀಪ್​​ ಮುಖ್ಯಭೂಮಿಕೆಯ ‘ಮಾರ್ಕ್’​​ ಚಿತ್ರ ಕೂಡಾ ಒಂದು. ಇದೀಗ ಈ ಯಶಸ್ವಿ ಸಿನಿಮಾ ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರ್ಣಗೊಳಿಸಿ, ಇದೇ ವಾರ ಒಟಿಟಿಗೆ ಬರಲು ಸಜ್ಜಾಗಿದೆ.

ಹೌದು, ಕಳೆದ ವರ್ಷಾಂತ್ಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಕಿಚ್ಚನ ”ಮಾರ್ಕ್” ಥಿಯೇಟರ್ ಅಂಗಳದಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಪ್ರೀ-ಬ್ಯುಸಿನೆಸ್ ಸೇರಿ ಬಾಕ್ಸ್​​ ಆಫೀಸ್​ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದ ಈ ಚಿತ್ರ ಜನವರಿ 18 ಅಂದರೆ ನಿನ್ನೆಗೆ 25 ದಿನ ಪೂರೈಸಿದೆ. 26ನೇ ದಿನದ ಪ್ರದರ್ಶನ ಕಾಣುತ್ತಿದ್ದು, ಈ ಸಂಭ್ರಮದ‌ ನಡುವೆ ಮಾರ್ಕ್ ಒಟಿಟಿ ಎಂಟ್ರಿಗೂ ಸಜ್ಜಾಗಿದೆ.

ಕಳೆದ ಸಂಜೆ ಪೋಸ್ಟ್ ಶೇರ್ ಮಾಡಿದ್ದ ಚಿತ್ರತಂಡ, ”ಇಂದು ಚಿತ್ರಮಂದಿರಗಳಲ್ಲಿ 25 ದಿನಗಳ ಸಂಭ್ರಮ. ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲದಿಂದಾಗಿ ಮಾರ್ಕ್ ಅದ್ಭುತ ಪ್ರದರ್ಶನ ಕಂಡಿದೆ” ಎಂದು ಬರೆದುಕೊಂಡಿದೆ.

ಡಿಸೆಂಬರ್​ 25ರಂದು ಚಿತ್ರಮಂದಿರ ಪ್ರವೇಶಿಸಿದ ಮಾರ್ಕ್​​ನಲ್ಲಿ ಕಿಚ್ಚನ ಆ್ಯಕ್ಟಿಂಗ್​, ಮ್ಯಾನರಿಸಂ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ಗಟ್ಟಿಕಥೆ ಹೊಂದಿರುವ ಈ ಸಿನಿಮಾಗೆ ಮಾರ್ಕ್​​​ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಆ್ಯಕ್ಷನ್​​ ಕಟ್ ಹೇಳಿದ್ದರು. 2024ರ ಕೊನೆಗೆ ಇವರಿಬ್ಬರ ಕಾಂಬಿನೇಷನ್​ನಲ್ಲಿ ಬಂದ ಚಿತ್ರ ಮ್ಯಾಕ್ಸ್​​ ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮ್ಯಾಕ್ಸ್ ಸಿನಿಮಾದಂತೆ ಈ ಚಿತ್ರದಲ್ಲೂ ಸುದೀಪ್​ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ಮಾರ್ಕಂಡೆ ನಟ ನಿರ್ವಹಿಸಿರುವ ಪಾತ್ರದ ಹೆಸರು.

ಡಿಸೆಂಬರ್​​ 25ರಂದು ಕರ್ನಾಟಕದಲ್ಲಿ 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮಾರ್ಕ್​​ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಚಿತ್ರಕ್ಕೆ ಬಹುತೇಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಆರಂಭದಲ್ಲಿ ಹೌಸ್​​ಫುಲ್​​ ಪ್ರದರ್ಶನ ಕಂಡಿತ್ತು. ಮೊದಲ ದಿನದ ಮೊದಲ ಶೋಗೆ ಸುದೀಪ್​ ಪತ್ನಿ, ಪುತ್ರಿ ಸಾಕ್ಷಿಯಾಗಿದ್ದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version