Updated By: Priyalachhi

ಬೆಂಗಳೂರು : ಕೊಲೆಯಾದ ರೀತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನ ನೆಲಮಂಗಲ ಬಳಿ ನಡೆದಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ದೇವಿಶ್ರೀ (21) ಕೊಲೆಯಾದ ರೀತಿಯಲ್ಲಿ ಪತ್ತೆಯಾದ ವಿದ್ಯಾರ್ಥಿನಿ.

ನೆಲಮಂಗಲ ಬಳಿಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯ ಪಿಜಿಯಲ್ಲಿ ಘಟನೆ ನಡೆದಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ಜೊತೆ ರೂಮ್​ಗೆ ಬಂದಿದ್ದ ಆಕೆಯ ಸ್ನೇಹಿತ ಘಟನೆ ಬಳಿಕ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಬೆನ್ನತ್ತಿದ್ದಾರೆ.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ರೆಡ್ಡಪ್ಪ ಜಗದಂಭ ದಂಪತಿಯ ಮಗಳಾದ ದೇವಿಶ್ರೀ, ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಿದ್ದಳು. ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ಈಕೆ, ತಮ್ಮೇನಹಳ್ಳಿಯ ಪಿಜಿಯೊಂದರಲ್ಲಿ ವಾಸವಾಗಿದ್ದಳು.

ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ, ನಾಪತ್ತೆಯಾಗಿರುವ ಆಕೆಯ ಸ್ನೇಹಿತನಿಗಾಗಿ ಪತ್ತೆ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೀಲ ಶಂಕಿಸಿ ಪತ್ನಿಯ ಕೊಲೆ (ಪ್ರತ್ಯೇಕ ಘಟನೆ): ಶೀಲ ಶಂಕಿಸಿ ಪತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೋಲಾರ ತಾಲೂಕು ಜನ್ನಘಟ್ಟ ಗ್ರಾಮದಲ್ಲಿ ನಡೆದಿದೆ. ಕಾವ್ಯ (28) ಕೊಲೆಯಾದ ಪತ್ನಿ. ಶಿವರಾಜ್ ಕೊಲೆ ಮಾಡಿದ ಪತಿ.

8 ವರ್ಷಗಳ ಹಿಂದೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಮೂಲದ ಕಾವ್ಯಾಳನ್ನ ಶಿವರಾಜ್ ಮದುವೆಯಾಗಿದ್ದ. ಪತಿ – ಪತ್ನಿಗೆ 6 ವರ್ಷದ ಒಂದು ಹೆಣ್ಣು ಮಗು ಸಹ ಇದೆ. ಪತ್ನಿ ಪ್ರಜ್ಞೆ ತಪ್ಪಿದ್ದಾಳೆ ಎಂದು ನಾಟಕವಾಡಿದ್ದ ಪತಿ, ಪತ್ನಿಯನ್ನ ಕೊಲೆ ಮಾಡಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಾದ ಜಸ್ಟಿನ್ ಜೋಸೆಫ್ (21) ಹಾಗೂ ಸ್ಟೆರಿನ್ ಎಲ್ಜಾ ಸಜಿ (19) ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ಚಿಕ್ಕಬಾಣಾವರ ನಿಲ್ದಾಣದ ಬಳಿ ಸಂಭವಿಸಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣೆ ಪೊಲೀಸರು, ಮೃತರ ಪೋಷಕರಿಗೆ ಮಾಹಿತಿ ರವಾನಿಸಿದ್ದಾರೆ.

ಕೇರಳದ ಪಟ್ಟನಂತಿಟ್ಟ ಮೂಲದವರಾದ ಇಬ್ಬರೂ ಬೆಂಗಳೂರಿನ ಸಪ್ತಗಿರಿ ನರ್ಸಿಂಗ್​ ಕಾಲೇಜಿನಲ್ಲಿ ಬಿಎಸ್‌ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್​ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ಸಂಜೆ ಚಿಕ್ಕಬಾಣಾವರ ನಿಲ್ದಾಣದ ಬಳಿ ಸೂಪರ್ ಫಾಸ್ಟ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿದ್ದಾರೆ. ಪರಿಣಾಮ ಇಬ್ಬರೂ ಸಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರ ವಿವರಗಳನ್ನು ಪರಿಶೀಲಿಸಿದ ನಂತರ ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version