ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮದ್ಯ ಕುಡಿದು ಗಲಾಟೆ ಮಾಡಿದ ವ್ಯಕ್ತಿಗೆ ಇಲ್ಲಿನ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಜಹೀರ ಅತನೂರ ಅವರು, ನ್ಯಾಯಾಲಯ ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆ ಆವರಣದಲ್ಲಿ ತಲಾ 25 ಸಸಿಗಳನ್ನು ನೆಡುವ ಶಿಕ್ಷೆ ನೀಡಿದ್ದಾರೆ.
ತಾಲ್ಲೂಕಿನ ಯಕ್ಸಂಬಾ ಪಟ್ಟಣದ ನಿವಾಸಿ ಅನಿಲ ಪೂಜಾರಿ, ಮಾರ್ಚ್ 23ರಂದು ರಾತ್ರಿ ಮದ್ಯ ಕುಡಿದು ಗಲಾಟೆ ಮಾಡಿದ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ, ತಪ್ಪನ್ನು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರಿಂದ ₹1 ಸಾವಿರ ದಂಡ ಹಾಗೂ 30 ದಿನಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು. ಇಲ್ಲದಿದ್ದರೆ, ದಂಡದೊಂದಿಗೆ ನ್ಯಾಯಾಲ ಯದ ಆವರಣ ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ ತಲಾ 25 ಸಸಿಗಳನ್ನು ನೆಡಬೇಕು ಎಂದು ಆ.25ರಂದು ತೀರ್ಪು ನೀಡಲಾಗಿತ್ತು.
ಆರೋಪಿ ತನ್ನ ಪತ್ನಿಯೊಂದಿಗೆ ಆಗಸ್ಟ್ 31ರಂದು ಬೆಳಿಗ್ಗೆ ಚಿಕ್ಕೋಡಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಾಗೂ ಮಧ್ಯಾಹ್ನದ ನಂತರ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಡುವ ಮೂಲಕ ನ್ಯಾಯಧೀಶರು ನೀಡಿದ ಆದೇಶ ಪಾಲಿಸಿದ್ದಾರೆ. ಪ್ರಕರಣ ಕುರಿತು ಸರ್ಕಾರಿ ಅಭಿಯೋಜಕ ಬಸವರಾಜ ಓಸಿ ವಾದ ಮಂಡಿಸಿದ್ದರು.
