ಬೆಂಗಳೂರು: ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಆ ವ್ಯಕ್ತಿಗೆ ತಲೆಯಲ್ಲಿ ನಟ್ಟು ಬೋಲ್ಟ್ ಇಲ್ವಾ ಅಂತ ಅನಿಸುತ್ತೆ. ಈ ಸರ್ಕಾರ ಗುಲಾಮಗಿರಿ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗೃಹ ಸಚಿವರು ಕಳೆದ ಒಂದು ವಾರದಿಂದ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಒಳಗಡೆ ಏನೋ ದೊಡ್ಡ ಹುನ್ನಾರ ನಡೆದಿದೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ. ನಾನು ಯಾವತ್ತೂ ಉದ್ರೇಕಕ್ಕೆ ಒಳಗಾಗಿ ಮಾತನಾಡುವುದಿಲ್ಲ. ಆದರೆ, ನನ್ನನ್ನು ಪದೇ ಪದೇ ಪ್ರಚೋದಿಸಲು ಮುಖ್ಯಮಂತ್ರಿಗಳು ಇವರಿಗೆ ನಿರ್ದೇಶನ ನೀಡಿರಬಹುದು. ಅವರ ಸೂಚನೆ ಮೇರೆಗೆ ಇವರೆಲ್ಲಾ ಮಾತನಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಕೆಪಿಎಸ್ಸಿ ಕರ್ಮಕಾಂಡದ ಬಗ್ಗೆ ಪ್ರಸ್ತಾಪ “ನನ್ನನ್ನು ಉತ್ತರಕುಮಾರ ಎನ್ನುತ್ತಾರೆ. ಆದರೆ ಅಸಲಿಗೆ ಉತ್ತರಕುಮಾರನ ಕೆಲಸ ಮಾಡುತ್ತಿರುವವರು ಯಾರು? ಈ ಹಿಂದೆ ಇವರದ್ದೇ ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಪಿಎಸ್ಸಿ ಮೂಲಕ ನಡೆದ 24 ಎಂಜಿನಿಯರ್ಗಳ ನೇಮಕಾತಿಯಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಎಲ್ಲಾ ಮಾಹಿತಿಯನ್ನು ನೀಡಿದರೂ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಪಲಾಯನವಾದ ಮಾಡುತ್ತಿದ್ದಾರೆ. ಕೆಪಿಎಸ್ಸಿ ಕರ್ಮಕಾಂಡದ ವಿಚಾರ ಇನ್ನೂ ಬಹಳಷ್ಟಿದೆ” ಎಂದು ಪ್ರಿಯಾಂಕ್ ಖರ್ಗೆ ಇಲಾಖೆಯ ಹಿಂದಿನ ನೇಮಕಾತಿ ಬಗ್ಗೆಯೂ ಪ್ರಶ್ನಿಸಿದರು.
ಇನ್ನೇನು ದಾಖಲೆ ಬೇಕು? “ಯಾವುದಕ್ಕೂ ದಾಖಲೆ ಕೊಡಿ, ದಾಖಲೆ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಮೊನ್ನೆ ರಾತ್ರಿ ಕೂತು ‘ಈ ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದೇನೆ’ ಎಂದು ಆ ವ್ಯಕ್ತಿ ಅಷ್ಟು ಓಪನ್ ಆಗಿ ಹೇಳಿದ್ದಾರೆ. ಆತನೇ ಖುದ್ದಾಗಿ ಹೇಳಿದ ಮೇಲೆ ಇನ್ಯಾವ ದಾಖಲೆ ಬೇಕು?” ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
