ಬೆಂಗಳೂರು: ತಮ್ಮನ್ನು ಮೊದಲ ದರ್ಜೆಯ ಮುಠ್ಠಾಳ ಎಂದು ಕರೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಒಬ್ಬ ಮೂರನೇ ದರ್ಜೆ ವಂಚಕ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಅಸ್ಸಾಂನಲ್ಲಿ ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಅನುಮತಿ ದೊರೆತ ವಿಚಾರವಾಗಿ ಇಬ್ಬರು ನಾಯಕರ ನಡುವೆ ವಾಗ್ವಾದ ನಡೆಯುತ್ತಿದ್ದು, ವೈಯಕ್ತಿಕ ನಿಂದನೆಗೆ ಇಳಿಯುವವರೆಗೆ ತಲುಪಿದೆ. ದೊಡ್ಡ ಕೈಗಾರಿಕೆಗಳ ಸ್ಥಾಪಿಸಲು ಈಶಾನ್ಯ ರಾಜ್ಯಗಳಲ್ಲಿ ಪ್ರತಿಭೆಗಳ ಕೊರೆತೆಯಿದೆ ಎಂಬ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಸ್ವಾ, ಪ್ರಿಯಾಂಕ್ ಅವರನ್ನು ‘ಫಸ್ಟ್ ಕ್ಲಾಸ್ ಮುಠ್ಠಾಳ’ ಎಂದು ಕರೆದಿದ್ದರು.

ಈ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿರುವ ಪ್ರಿಯಾಂಕ್‌ ಖರ್ಗೆ, ಅಸ್ಸಾಂ ಸಿಎಂ ಒಬ್ಬ ‘ಮೂರನೇ ದರ್ಜೆ ವಂಚಕ’ ಎಂದು ಲೇವಡಿ ಮಾಡಿದ್ದಾರೆ. ಬಿಸ್ವಾ ಅವರ ಭಾಷೆ ಅವರ ಹತಾಶೆಯನ್ನು ತೋರಿಸುತ್ತದೆ. ಇದು ಅವರ ವರ್ಗದ ವಿಶೇಷ ಹಕ್ಕು ಮತ್ತು ಅವರು ಅಧಿಕಾರದಲ್ಲಿರುವುದರಿಂದ ಪಡೆದ ವಿಶೇಷ ಹಕ್ಕನ್ನು ತೋರಿಸುತ್ತದೆ. ಇಲ್ಲದಿದ್ದರೆ, ಇದರಲ್ಲಿ ಏನೂ ಇಲ್ಲ, ಮೂರನೇ ದರ್ಜೆಯ ವಂಚಕನಿಂದ ನಾವು ಇನ್ನೇನು ನಿರೀಕ್ಷಿಸಬಹುದು ಎಂದು ಪ್ರಿಯಾಂಕ್‌ ತಿರುಗೇಟು ನೀಡಿದ್ದಾರೆ.

ಅವರು ನನ್ನ ಹೇಳಿಕೆಯನ್ನು ತಿರುಚಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ತರಬೇತಿ ಪಡೆದುಕೊಳ್ಳಲು ಅನೇಕ ಅಸ್ಸಾಮಿಗರು ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಅವರೇ(ಬಿಸ್ವಾ) ಟ್ವೀಟ್ ಮಾಡಿದ್ದರು. ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಭಾನುವಾರದಂದು, “ಗುಜರಾತ್ ಮತ್ತು ಅಸ್ಸಾಂನಲ್ಲಿ ಏನಿದೆ? ಅಲ್ಲಿ ಪ್ರತಿಭೆ ಇದೆಯೇ?” ಎಂದು ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸಿದ್ದರು. ಸೆಮಿಕಂಡಕ್ಟರ್ ಉದ್ಯಮಗಳನ್ನು ಬೆಂಗಳೂರಿನ ಬದಲು ಈ ರಾಜ್ಯಗಳಲ್ಲಿ ಸ್ಥಾಪಿಸುವ ಸರ್ಕಾರದ ನಿರ್ಧಾರವನ್ನು ಅವರು ಪ್ರಶ್ನಿಸಿದ್ದರು. ಅವರ ಈ ಹೇಳಿಕೆಗಳು ರಾಜಕೀಯ ವಿರೋಧಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ಇತರ ರಾಜ್ಯಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version