Updated By: Priyalachhi

ಪ್ರತಿನಿತ್ಯ ನಾವು ಮಾಡುವ ಭೋಜನದಲ್ಲಿ ಅನ್ನ ಇಲ್ಲದೆ ಊಟ ಅಪೂರ್ಣವಾಗುತ್ತದೆ. ದೇಶದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಜನರು ಅನ್ನವನ್ನು ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಪ್ರಪಂಚದಾದ್ಯಂತ ರೈತರು ವಿವಿಧ ಪ್ರಕಾರದ ತಳಿಗಳ ಅಕ್ಕಿಗಳನ್ನು ಬೆಳೆಯುತ್ತಾರೆ. ಭಾರತ ದೇಶದಲ್ಲಿ ಉತ್ತಮ ರೀತಿಯ ಅಕ್ಕಿ ಅಂದ್ರೆ ಮೊದಲು ನೆನಪಿಗೆ ಬರುವುದು ಬಾಸ್ಮತಿ ಅಕ್ಕಿ. ಈ ಅಕ್ಕಿಯ ರುಚಿ ಹಾಗೂ ಸುವಾಸನೆ ಪ್ರತಿಯೊಬ್ಬರಿಗೂ ಹೆಚ್ಚು ಇಷ್ಟವಾಗುತ್ತದೆ.

ಉದ್ದವಾದ ಅಕ್ಕಿಯು ಹೆಚ್ಚು ಪ್ರಸಿದ್ಧಿ ಪಡೆದಿರುವ ವಿಧವಾಗಿದೆ. ತುಂಬಾ ದುಬಾರಿ ಬೆಲೆಯ ಅಕ್ಕಿ ಪಟ್ಟಿಯಲ್ಲಿ ಈ ಬಾಸ್ಮತಿ ಅಕ್ಕಿ ಇಲ್ಲ. ಏಕೆಂದರೆ, ಈ ಅಕ್ಕಿಯ ಪ್ರತಿ ಕೆಜಿ ಬೆಲೆ ₹90ರಿಂದ ₹700 ರೂಪಾಯಿವರೆಗೆ ಇದೆ. ದೇಶದಲ್ಲಿ ಅನೇಕ ಪ್ರಕಾರದ ಅಕ್ಕಿಗಳು ಸಹ ಇವೆ. ಹೆಚ್ಚೆಂದ್ರೆ, ಇವುಗಳ ಬೆಲೆ ಕೆಜಿಗೆ ₹6,000 ರಿಂದ ₹7,000 ವರೆಗೆ ಇದೆ. ಇತ್ತೀಚೆಗೆ ವಿಶ್ವದ ಅತ್ಯಂತ ದುಬಾರಿ ಅಕ್ಕಿಯೊಂದು ಭಾರಿ ಸದ್ದು ಮಾಡುತ್ತಿದೆ. ಹೆಚ್ಚು ದರವಿರುವಂತಹ ಅಕ್ಕಿ ಯಾವುದು ಗೊತ್ತೇ? ಈ ರೈಸ್​ನ ಬೆಲೆ ತಿಳಿದರೆ ನೀವು ಕೂಡ ಆಶ್ಚರ್ಯಚಕಿತರಾಗುತ್ತೀರಿ.

ಈ ಅಕ್ಕಿಯ ವಿಶೇಷತೆ ಏನು? ಹಲವು ದೇಶಗಳಲ್ಲಿ ವಿವಿಧ ಪ್ರಕಾರಗಳ ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ. ಆದ್ರೆ, ಜಪಾನ್‌ನಲ್ಲಿ ಬೆಳೆಯುವ ಕಿನ್ಮೆಮೈ ಪ್ರೀಮಿಯಂ ಎಂದು ಕರೆಯಲಾಗುವಂತಹ ರೈಸ್​ ಅತ್ಯಂತ ದುಬಾರಿಯಾಗಿದೆ. ಇದೀಗ ಅಕ್ಕಿಯ ದರವು ಕೆಜಿಗೆ ಸುಮಾರು ₹12,500 ತಲುಪಿದೆ. 2016ರಲ್ಲಿ ಐಷಾರಾಮಿ ಜೀವನಶೈಲಿಯ ಈ ಅಕ್ಕಿಯನ್ನು 840 ಗ್ರಾಂಗೆ ₹5,490 ಬೆಲೆಗೆ ತಲುಪಿದ್ದರಿಂದ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ‘ವಿಶ್ವದ ಅತ್ಯಂತ ದುಬಾರಿ ಅಕ್ಕಿ’ ಎಂದು ನೋಂದಾಯಿಸಲಾಗಿತ್ತು.

ಜಪಾನಿನ ರೈತರು ಹೆಚ್ಚಿನ ಕಾಳಜಿ ಹಾಗೂ ಮುಂದುವರಿದ ಕೃಷಿ ತಂತ್ರಜ್ಞಾನದೊಂದಿಗೆ ಕಿನ್ಮೆಮೈ ಪ್ರೀಮಿಯಂ ಅಕ್ಕಿಯನ್ನು ಬೆಳೆಯುತ್ತಿದ್ದಾರೆ. ಈ ತುಂಬಾ ದುಬಾರಿ ಅಕ್ಕಿಯನ್ನು ಟೊಯೊ ರೈಸ್ ಕಾರ್ಪೊರೇಷನ್ ಎಂಬ ಕಂಪನಿ ಮಾತ್ರ ಉತ್ಪಾದಿಸುತ್ತದೆ. 1961ರಲ್ಲಿ ಈ ಕಂಪನಿಯು ಸ್ಥಾಪಿಸಲಾಯಿತು. ಈ ಜಪಾನೀಸ್ ಕಿನ್ಮೆಮೈ ಅಕ್ಕಿಯನ್ನು ವಿಶ್ವದಾದ್ಯಂತ ಪ್ರೀಮಿಯಂ ಅಕ್ಕಿ ಎಂದು ಹೇಳಲಾಗುತ್ತದೆ. ಈ ಅಕ್ಕಿ ಉತ್ಪಾದನೆಯಲ್ಲಿ ಸುಧಾರಿತ ತಂತ್ರಜ್ಞಾನ ಬಳಸುವುದು ಹಾಗೂ ರುಚಿಕರವಾದ ಅಕ್ಕಿಯನ್ನು ಉತ್ಪಾದಿಸುವುದು ಕಂಪನಿಯ ಮುಖ್ಯ ಗುರಿಯಾಗಿದೆ.

ದುಬಾರಿ ಅಕ್ಕಿಯ ಪ್ರಯೋಜನಗಳೇನು? ಈ ದುಬಾರಿ ಅಕ್ಕಿಯನ್ನು ತೊಳೆಯದೆ ನೇರವಾಗಿ ಬೇಯಿಸಬಹುದು. ಈ ರೈಸ್​ ನೀರಿನ ವ್ಯರ್ಥವನ್ನು ಕಡಿಮೆ ಮಾಡುತ್ತದೆ ಹಾಗೂ ಇದು ಪರಿಸರ ಸ್ನೇಹಿಯಾಗಿದೆ. ಕಿನ್ಮೆಮೈ ಅಕ್ಕಿಯು ಸಾಮಾನ್ಯ ಬಿಳಿ ಅಕ್ಕಿಗಿಂತ ಆರು ಪಟ್ಟು ಹೆಚ್ಚು ಲಿಪೊಪೊಲಿಸ್ಯಾಕರೈಡ್‌ಗಳನ್ನು ಹೊಂದಿರುತ್ತದೆ. ಈ ಅಕ್ಕಿಯಲ್ಲಿ ಫೈಬರ್ ಮತ್ತು ಅಮೈನೋ ಆಮ್ಲಗಳು ಹಾಗೂ ವಿಟಮಿನ್ ಬಿ ಸಮೃದ್ಧವಾಗಿದೆ. ಹೃದಯದ ಆರೋಗ್ಯ, ಜೀರ್ಣಕ್ರಿಯೆ ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಸಲು ಸಹಾಯವಾಗುತ್ತದೆ.

ಸುಮಾರು 3,000 ವರ್ಷಗಳಿಂದ ಜಪಾನಿನ ಆಹಾರದಲ್ಲಿ ರೈಸ್​ ಪ್ರಮುಖವಾದ ಸ್ಥಾನ ಪಡೆದಿದೆ. ಜಪಾನ್ ದೇಶದಲ್ಲಿ 300ಕ್ಕೂ ಹೆಚ್ಚು ವಿವಿಧ ಬಗೆಯ ಅಕ್ಕಿಯನ್ನು ಬೆಳೆಯಲಾಗುತ್ತದೆ. ಕಿನ್ಮೆಮೈ ಪ್ರೀಮಿಯಂ ರೈಸ್ ತನ್ನದೇ ಆದ ವಿಶಿಷ್ಟ ಗುಣಮಟ್ಟದಿಂದ ಜಾಗತಿಕವಾಗಿ ಜನರ ಗಮನ ಸೆಳೆಯುತ್ತಿದೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version