Updated By: Priyalachhi

ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ಹಾಗೂ ಕಾವೇರಿ ನೀರಾವರಿ ನಿಗಮ ನಿರ್ದೇಶಕರ ಮಂಡಳಿ ಸಭೆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾವೇರಿ ನೀರಾವರಿ ನಿಗಮ ಮಂಡಳಿ ಸಭೆ ಮಾಡಲಾಗಿದೆ. ಇದಕ್ಕೆ ಮೊದಲು, ಮೇಕೆದಾಟು ಯೋಜನೆ ಕುರಿತ ಸುಪ್ರೀಂಕೋರ್ಟ್ ತೀರ್ಪು ನಂತರ ಈ ಯೋಜನೆಯನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದರು.

ಮೇಕೆದಾಟು ಯೋಜನೆ ಕಚೇರಿ: ಡಿಪಿಆರ್ ಮರು ಸಲ್ಲಿಕೆ ಮಾಡಬೇಕಿದೆ. ಇದರಲ್ಲಿ ಯೋಜನೆ ಸಂಪೂರ್ಣ ವಿವರ, ಎಷ್ಟು ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಮಾಹಿತಿ ನೀಡಬೇಕು. ಮೇಕೆದಾಟು ಯೋಜನೆ ಕಚೇರಿಯನ್ನು ಹಾರೋಬೆಲೆಯಲ್ಲಿ ಆರಂಭಿಸಿದ್ದೇವೆ. ಮಂಡ್ಯಕ್ಕೆ ಹತ್ತಿರವಾಗುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಸಿಇ, ಸಿಸಿಎಫ್ ಅವರನ್ನೊಳಗೊಂಡ ಪ್ರತ್ಯೇಕ ಕಚೇರಿ ಆರಂಭಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಅಗತ್ಯ ಸಿಬ್ಬಂದಿ ಒದಗಿಸಲು ತಯಾರು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮತ್ತೆ ಹೊಸದಾಗಿ ಡಿಪಿಆರ್ ಮಾಡಬೇಕೇ, ಇದನ್ನು ಜಲ ಆಯೋಗದ ಮುಂದೆ ಮಂಡಿಸುವಿರಾ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮಂಡಿಸುತ್ತೀರಾ ಎಂದು ಕೇಳಿದಾಗ, ಈ ಹಿಂದೆ ಸಲ್ಲಿಸಿದ್ದ ಡಿಪಿಆರ್ ತಿರಸ್ಕರಿಸಿದ್ದರು. ಹೀಗಾಗಿ ಅದರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ ಹೊಸದಾಗಿ ಡಿಪಿಆರ್ ಸಲ್ಲಿಸುತ್ತೇವೆ. ಕಾನೂನು ಪ್ರಕಾರ ಯಾರ ಮುಂದೆ ಮಂಡಿಸಬೇಕೋ ಅವರ ಮುಂದೆ ಮಂಡಿಸುತ್ತೇವೆ ಎಂದರು. ಮತ್ತೆ ದೆಹಲಿಗೆ ಪ್ರಯಾಣ ಬೆಳೆಸುವಿರಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ದೆಹಲಿಗೆ ಹೋಗುವ ಯಾವ ಆಲೋಚನೆಯೂ ಇಲ್ಲ ಎಂದು ತಿಳಿಸಿದರು.

ತುಮಕೂರಿಗೆ ಮೆಟ್ರೋ ಸಾಧ್ಯತೆಗಳ ಬಗ್ಗೆ ಅಧ್ಯಯನ: ತುಮಕೂರು ಮೆಟ್ರೋ ಮಾರ್ಗಕ್ಕೆ ವಿರೋಧ ವ್ಯಕ್ತವಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅಲ್ಲಿನ ಜನಪ್ರತಿನಿಧಿಗಳು ನನ್ನ ಬಳಿ ಬಂದು ಮನವಿ ಮಾಡಿದಾಗ ನಾನು ಅದರ ಸಾಧ್ಯತೆಗಳ ಬಗ್ಗೆ ತಿಳಿಯಲು ಮುಂದಾಗಿದ್ದೇವೆ. ಇದರಲ್ಲಿ ಟೀಕೆ ಮಾಡುವಂತಹದ್ದು ಏನಿದೆ? ನಮ್ಮ ಗೃಹ ಸಚಿವರು ಸೇರಿದಂತೆ ಕೆಲವರು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೆ ಯಾರಾದರೂ ಬಂಡವಾಳ ಹಾಕಲು ಮುಂದೆ ಬರುತ್ತಾರಾ? ಬಂದರೆ ಯಾವೆಲ್ಲಾ ಮಾರ್ಗ ಇವೆ ಎಂಬುದರ ಬಗ್ಗೆ ಅಧ್ಯಯನ ಮಾಡಬೇಕಿದೆ. ಯಾರಾದರೂ ಚಂದ್ರಲೋಕಕ್ಕೆ ಹೋಗಬೇಕು ಎಂದರೆ ಅದು ಸಾಧ್ಯವೇ, ಇಲ್ಲವೇ ಎಂದು ಪರಿಶೀಲಿಸಬೇಕಲ್ಲವೇ ಎಂದು ಹೇಳಿದರು.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version