Updated By: Priyalachhi
ಬೆಂಗಳೂರು: ಪದೇ ಪದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಆರೋಪಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸುವ ಸಂಬಂಧ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ ಬಳಿಕ, ಆದೇಶ ರದ್ದು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಬಂಧಿತರಿಗೆ ಮನವರಿಕೆ ಮಾಡದೇ ಇರುವುದು ಸಂವಿಧಾನ ಬಾಹಿರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಇದೇ ವೇಳೆ, ಮಾದಕ ಪದಾರ್ಥ ಮತ್ತದರ ಉತ್ಪನ್ನಗಳ ಅಕ್ರಮ ಸಾಗಣೆ ತಡೆಗಟ್ಟುವಿಕೆಗೆ ಕಾಯ್ದೆ(ಎನ್ಡಿಪಿಎಸ್)ಯಡಿ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.
ಮಾದಕ ವಸ್ತುಗಳ ಸಾಗಣೆ ಆರೋಪದಲ್ಲಿ ದಾಖಲಾದ 3 ಪ್ರಕರಣಗಳಲ್ಲಿ ಜಾಮೀನು ಪಡೆದ ಆರೋಪಿಯೊಬ್ಬರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧನ ಆದೇಶ ಹೊರಡಿಸಿದ್ದ ಪೊಲೀಸ್ ಆಯುಕ್ತರ ಕ್ರಮ ಪ್ರಶ್ನಿಸಿ, ಆರೋಪಿತರ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದ್ಗಲ್ ಮತ್ತು ನ್ಯಾ.ವೆಂಕಟೇಶ್ ನಾಯಕ್ ಟಿ. ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅಲ್ಲದೆ, ಎನ್ಡಿಪಿಎಸ್ ಕಾಯಿದೆಯ ಸೆಕ್ಷನ್ 9(ಎಫ್) ಸರ್ಕಾರ, ಬಂಧಿತರು ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸುವ ಅರ್ಜಿಯನ್ನು ಪರಿಗಣಿಸಬೇಕು ಎಂದು ತಿಳಿಸಿದೆ. ಆದರೆ, ಅರ್ಜಿದಾರರ ಮಗನ ವಿರುದ್ಧ ಹೊರಡಿಸಿರುವ ಬಂಧನ ಆದೇಶದಲ್ಲಿ ಈ ಕುರಿತು ಯಾವುದೇ ಅಂಶವನ್ನು ಪ್ರಸ್ತಾಪಿಸಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದೆ. ಒಬ್ಬ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿಸುವ ಸಂದರ್ಭದಲ್ಲಿ ಆ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ನ್ಯಾಯಾಲಯಗಳು ನೀಡಿರುವ ಜಾಮೀನು ಸೇರಿ ಅವರ ವಿರುದ್ಧದ ಆದೇಶಗಳನ್ನು ಪರಿಗಣಿಸುವುದು ಅತ್ಯವಶ್ಯಕ. ಈ ಪ್ರಕರಣದಲ್ಲಿ ಬಂಧನ ಆದೇಶ ಹೊರಡಿಸಿರುವ ಪೊಲೀಸ್ ಆಯುಕ್ತರು, ಆರೋಪಿಯ ವಿರುದ್ಧದ ಮೂರು ಕ್ರಿಮಿನಲ್ ಪ್ರಕರಣಗಳಲ್ಲಿ ಹೊರಡಿಸಲಾದ ಜಾಮೀನು ಆದೇಶ ಪರಿಗಣಿಸಿಲ್ಲ. ಹೀಗಾಗಿ ಅವರದ ಬಂಧನ ಆದೇಶ ಸಹ ಉಲ್ಲಂಘನೆಯಾಗಲಿದೆ ಎಂದು ತಿಳಿಸಿದೆ.
ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 3(2)ರ ಪ್ರಕಾರ, ರಾಜ್ಯ ಸರ್ಕಾರವು ಬಂಧನ ಆದೇಶವನ್ನು, ಸೆಕ್ಷನ್ 12(1)(b) ಅಡಿಯಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸುವುದು ಮತ್ತು ಮಾರ್ಪಡಿಸಲು ಅವಕಾಶವಿರಲಿದೆ. ಆದ್ದರಿಂದ ಬಂಧನ ಆದೇಶ ಹೊರಡಿಸಿದ 10 ದಿನಗಳಲ್ಲಿ ಬಂಧನ ಆದೇಶ ರದ್ದು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಬಂಧಿತರಿಗೆ ತಿಳಿಸಬೇಕು. ಅದಕ್ಕೆ ಅವಕಾಶ ನೀಡಿಲ್ಲ. ಇದು ಸಂವಿಧಾನದ 22(5)ನೇ ವಿಧಿಯ ಅಡಿಯ ಮೂಲಭೂತ ಹಕ್ಕಿನ ಧಕ್ಕೆಯಾಗಲಿದೆ ಎಂದು ತಿಳಿಸಿ ಪೊಲೀಸ್ ಆಯುಕ್ತರ ಆದೇಶ ರದ್ದುಪಡಿಸಿ ಆದೇಶಿಸಿದೆ.

