Updated By: Priyalachhi
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗುದ್ದಾಟ ಇದೀಗ ಮತ್ತೊಂದು ಸ್ವರೂಪಕ್ಕೆ ತಿರುಗಿದೆ. ದಿನಗಳೆದಂತೆ ಅಧಿಕಾರ ಹಂಚಿಕೆಯ ಚರ್ಚೆ ತೀವ್ರಗೊಳ್ಳುತ್ತಿದೆ. ದೆಹಲಿ ಪರೇಡ್ ಮುಂದುವರಿದಿದೆ. ಇದರ ಮಧ್ಯೆ, ಇದೀಗ ಕಾಂಗ್ರೆಸ್ ಪಾಳಯದಲ್ಲಿ ಶಾಸಕರಿಂದ ಸಹಿ ಸಂಗ್ರಹದ ಸದ್ದು ಜೋರಾಗಿ ಕೇಳಿ ಬರುತ್ತಿದೆ.
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಇದೀಗ ಅಧಿಕಾರ ಹಂಚಿಕೆಯ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಬಣ ರಾಜಕೀಯ ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದರೆ, ಅಧಿಕಾರ ಹಸ್ತಾಂತರದ ಗೊಂದಲ ಬಗೆಹರಿದಿಲ್ಲ. ಹೈಕಮಾಂಡ್ ಇದುವರೆಗೆ ಗೊಂದಲ ನಿವಾರಿಸುವ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ, ಹೈಕಮಾಂಡ್ ತೀರ್ಮಾನ ವಿಳಂಬವಾಗುತ್ತಿರುವ ಬೆನ್ನಲ್ಲೇ ಬಣ ರಾಜಕೀಯದ ಬೆಳವಣಿಗೆ ಉಲ್ಬಣಿಸುತ್ತಿದೆ.
ಡಿಕೆಶಿ ಆಪ್ತ ಶಾಸಕರ ಮತ್ತೊಂದು ಗುಂಪು ದೆಹಲಿ ಪರೇಡ್: ಈಗಾಗಲೇ ನಾಲ್ಕೈದು ಮಂದಿ ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ಶಾಸಕರು ದೆಹಲಿ ಪರೇಡ್ ನಡೆಸಿ, ವಾಪಸಾಗಿದ್ದರು. ಇದೀಗ ಡಿಕೆಶಿ ಆಪ್ತರ ಮತ್ತೊಂದು ಶಾಸಕರ ಬಣ ದೆಹಲಿ ಯಾತ್ರೆ ನಡೆಸಿದೆ. ಇದು ಪವರ್ ಶೇರಿಂಗ್ ಪೊಲಿಟಿಕ್ಸ್ನ ತೀವ್ರತೆಯನ್ನು ಮತ್ತಷ್ಟು ಹೆಚ್ಚಾಗಿಸಿದೆ. ಕಾಂಗ್ರೆಸ್ ಪಾಳಯದಲ್ಲಿನ ಪವರ್ ಫೈಟ್ ಪಾಲಿಟಿಕ್ಸ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪವರ್ ಫೈಟ್ ಬೆನ್ನಲ್ಲೇ ದೆಹಲಿಯಲ್ಲಿ ಶಕ್ತಿ ಪ್ರದರ್ಶನದ ತಂತ್ರಗಾರಿಕೆಯೂ ಹೆಚ್ಚಾಗುತ್ತಿದೆ.
ಇದೀಗ ಡಿ.ಕೆ.ಶಿವಕುಮಾರ್ ಆಪ್ತ ಶಾಸಕರ ಮತ್ತೊಂದು ಬಣ ದೆಹಲಿಗೆ ಯಾತ್ರೆ ನಡೆಸಿದೆ. ದೆಹಲಿ ಖಾಸಗಿ ಹೊಟೇಲ್ನಲ್ಲಿ ಮೊಕ್ಕಾಂ ಹೂಡಿರುವ ಐದಾರು ಶಾಸಕರು ಹೈಕಮಾಂಡ್ ಅಂಗಳದಲ್ಲಿ ಶಕ್ತಿ ಪ್ರದರ್ಶನದ ನಡೆಗೆ ಮುಂದಾಗಿದೆ. ನಿನ್ನೆ ತಡರಾತ್ರಿ ದೆಹಲಿ ತಲುಪಿದ ಆರು ಶಾಸಕರ ತಂಡದಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಕದಲೂರು ಉದಯ್, ಶಿವಗಂಗಾ ಬಸವರಾಜ್, ಇಕ್ಬಾಲ್ ಹುಸೇನ್, ಶಾಸಕಿ ನಯನಾ ಮೋಟಮ್ಮ ಮತ್ತು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಸೇರಿದ್ದಾರೆ. ಖಾಸಗಿ ಹೊಟೇಲ್ ನಲ್ಲಿ ಈ ಆಪ್ತ ಶಾಸಕರು ಒಟ್ಟಿಗೆ ಕೂತಿರುವ ಫೋಟೊ ಹರಿದಾಡುತ್ತಿದೆ.
ಡಿ.ಕೆ.ಶಿವಕುಮಾರ್ ಪರ ಶಾಸಕರ ಸಹಿ ಸಂಗ್ರಹ?: ಇತ್ತ ಡಿಕೆಶಿ ಪರ ಆಪ್ತ ಬಣ ಸಹಿ ಸಂಗ್ರಹದ ಮೊರೆ ಹೋಗಿದೆ ಎಂಬ ಚರ್ಚೆ ಜೋರಾಗಿ ಕೇಳಿ ಬರುತ್ತಿದೆ. ಪವರ್ ಫೈಟ್ನಲ್ಲಿ ಡಿ.ಕೆ.ಶಿವಕುಮಾರ್ ಪರ ಬೆಂಬಲ ಸೂಚಿಸಿ ಆಪ್ತರ ಬಣ ಸಹಿ ಸಂಗ್ರಹ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಅಂತಿಮ ತೀರ್ಮಾನ ವಿಳಂಬವಾಗುತ್ತಿರುವ ಹೈಕಮಾಂಡ್ ಮೇಲೆ ಪರೋಕ್ಷವಾಗಿ ಒತ್ತಡ ಹಾಕಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಆಪ್ತ ವಲಯ ತಿಳಿಸಿದೆ.
ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಹಾವೇರಿ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಶಾಸಕರ ಸಹಿ ಸಂಗ್ರಹಿಸಲು ಯತ್ನಿಸಲಾಗುತ್ತಿದೆ. ಆ ಮೂಲಕ ಡಿಕೆಶಿ ಪರ ಸುಮಾರು 60-70 ಬೆಂಬಲಿತ ಶಾಸಕರ ಸಹಿ ಸಂಗ್ರಹ ಮಾಡಲು ಯತ್ನಿಸಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ.
ಇದೇ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಜೈಲಿಗೆ ಹೋಗಿ ಅಲ್ಲಿದ್ದ ಇಬ್ಬರು ಶಾಸಕರಿಂದಲೂ ಡಿಕೆಶಿ ಬೆಂಬಲಕ್ಕೆ ಸಹಿ ಹಾಕಿಸಿಕೊಂಡು ಬಂದಿದ್ದಾರೆ. ಈಗ ಬಂದ ಮಾಹಿತಿ ಪ್ರಕಾರ ಸೀಕ್ರೆಟ್ ವೋಟಿಂಗ್ಗೆ ಡಿಕೆಶಿ ಒತ್ತಾಯ ಹಾಕ್ತಿದ್ದಾರಂತೆ. ಡಿಕೆಶಿ ಬಳಿ ಈ ಮೊದಲು 11- 12 ಶಾಸಕರು ಇದ್ರು, ಈಗ 70 ಇದ್ದಾರೆ ಅಂತೆಲ್ಲ ವರದಿಗಳು ಬರುತ್ತಿವೆ. ಇದು ಹೇಗೆ ಸಾಧ್ಯ? ಮ್ಯಾಜಿಕ್ ಆಯ್ತಾ?. ಕಾಂಗ್ರೆಸ್ನಲ್ಲಿ ಕುದುರೆ ವ್ಯಾಪಾರ ನಡೀತಿದೆ. ಪವರ್ ಶೇರ್ ಡೀಲ್ನಿಂದ ಸಿದ್ದರಾಮಯ್ಯ ಡಲ್ ಆಗಿದ್ದಾರೆ. ಕಳೆದೊಂದು ವಾರದಿಂದ ಸಿದ್ದರಾಮಯ್ಯ ಡಲ್ ಆಗಿದ್ದಾರೆ. ಶಾಸಕರ ಬೆಂಬಲ ಬೇಕು ಅಂತ ಹೇಳ್ತಿದ್ದ ಸಿದ್ದರಾಮಯ್ಯ ಈಗ ಹೈಕಮಾಂಡ್ ನಿರ್ಣಯ ಮುಖ್ಯ ಅಂತಿದ್ದಾರೆ ಎಂದು ಟೀಕಿಸಿದ್ದಾರೆ.
