ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ(SOP) ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿ 10 ಚಾರಣಿಗರಿಗೆ ಒಬ್ಬರು ಸ್ಥಳೀಯ ಪ್ರಕೃತಿ ಮಾರ್ಗದರ್ಶಕರಿರುತ್ತಾರೆ. ಎಲ್ಲ ಚಾರಣ ಪಥಗಳಲ್ಲಿ ಒಂದು ಬಸರಿಗೆ ಗರಿಷ್ಠ 150 ಜನರಿಗೆ ಮಾತ್ರ ಸೀಮಿತದೊಳಿಸಲಾಗುವುದು. ಚಾರಣಕ್ಕೆ ಬರುವವರು ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾ. ಒಂದೊಮ್ಮೆ ಯಾವುದೇ ದಿನ ಒಬ್ಬರೇ ಚಾರಣಿಗರು ನೋಂದಾಯಿಸಿದ್ದರೂ ಗೈಡ್ ಸೌಲಭ್ಯ ಕಲ್ಪಿಸಲಾಗುವುದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಎಂದರು.
ಇತ್ತೀಚೆಗೆ ಕೊಡಗಿನ ತಡಿಯಾಂಡಮೋಳ್ ಬೆಟ್ಟದಲ್ಲಿ ಕೇರಳದಿಂದ ಚಾರಣಕ್ಕೆ ಬಂದಿದ್ದ ಮಹಿಳೆ ನಾಪತ್ತೆಯಾಗಿ ಕಾಡಿನಲ್ಲಿ 3 ದಿನ ಕಳೆಯುವಂತಾದ ಹಾಗೂ ಅರಣ್ಯ ವ್ಯಾಪ್ತಿಗೆ ಒಳಪಡದ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿ ಶವವಾಗಿ ಬಾಲಕಿ ಪತ್ತೆಯಾದ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಗಾಗಿ ಈ ಎಸ್.ಓ.ಪಿ. ರೂಪಿಸಲು ಸೂಚಿಸಿದ್ದಾಗಿ ಅವರು ತಿಳಿಸಿದರು.
ಜಿಪಿಎಸ್ ಅಳವಡಿಸಿದ ವಾಕಿಟಾಕಿ:- ಇನ್ನು ಮುಂದೆ ಪ್ರತಿಯೊಂದು ಚಾರಣಪಥದಲ್ಲೂ ನೇಚರ್ ಗೈಡ್ ಗಳಿಗೆ ಜಿ.ಪಿ.ಎಸ್. ಅಳವಡಿಸಿದ ವಾಕಿ ಟಾಕಿಯನ್ನು ಕಡ್ಡಾಯವಾಗಿ ನೀಡಲಾಗುವುದು. ಅದೇ ರೀತಿ ಪ್ರತಿಯೊಬ್ಬ ಚಾರಣಿಗರ ಮೊಬೈಲ್ ಗೆ ಚಾರಣಪಥದ ನಕ್ಷೆ ಸಹಿತ ಆಪ್ ಅನ್ನು ಅಳವಡಿಸಲಾಗುವುದು. ಅಕಸ್ಮಾತ್ ಯಾರೇ ಚಾರಣಿಗರು ದಾರಿ ತಪ್ಪಿದರೆ ಅವರ ಶೋಧಕ್ಕೆ ಈ ಆಪ್ ಸಹಕಾರಿಯಾಗಲಿದೆ ಎಂದರು.
ಬೇಸ್ ಕ್ಯಾಂಪ್ ನಲ್ಲಿ ಮೂಲಸೌಕರ್ಯ:- ಚಾರಣ ಆರಂಭಕ್ಕೂ ಮುನ್ನ ಮೂಲ ನೆಲೆಯಲ್ಲಿ ಚಾರಣಿಗರಿಗೆ ಸಂಕ್ಷಿಪ್ತವಾಗಿ ಚಾರಣದ ದೂರ, ಅವಧಿ ಮತ್ತು ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗುವುದು. ಅದೇ ರೀತಿ ವನ್ಯಜೀವಿಗಳು ಎದುರಾದರೆ ಏನು ಮಾಡಬೇಕು ಎಂದೂ ತಿಳಿಸಲಾಗುವುದು. ಹೆಚ್ಚು ಶಬ್ದ ಮಾಡುವ ಯಾವುದೇ ಸಾಧನಗಳಿಗೆ, ಹರಿತವಾದ ಲೋಹದ ವಸ್ತು, ಆಯುಧಗಳನ್ನು ತೆಗೆದುಕೊಂಡು ಹೋಗಲು ಮತ್ತು ಕ್ಯಾಂಪ್ ಫೈರ್ ಮಾಡಲು ಚಾರಣ ಪಥದಲ್ಲಿ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚಾರಣಿಗರಿಗೆ ಮೂಲ ನೆಲೆಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಚಾರಣ ಪಥದಲ್ಲಿ ಬೇಸ್ ಕ್ಯಾಂಪ್ ಗೆ ಹೋಗುವ ಮಾರ್ಗಸೂಚಿ, ಬಾಣದಾಕಾರದ ಗುರುತು ಹಾಕಲಾಗುವುದು. ಮಾರ್ಗಮಧ್ಯೆ ವಿರಮಿಸಿಕೊಳ್ಳಲು ವಿಶ್ರಾಂತಿ ತಾಣ ಮಾಡಲಾಗುವುದು ಎಂದರು.
ಗೈಡ್ ಗಳಿಗೆ ಹೊಣೆಗಾರಿಕೆ:- ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕರು (ಗೈಡ್)ಗಳು ಯಾವುದೇ ಚಾರಣಿಗ ತಮಗಿಂತ ಮುಂದೆ ಹೋಗಿಲ್ಲ ಹಾಗೂ ಹಿಂದೆ ಉಳಿದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಬೇಸ್ ಕ್ಯಾಂಪ್, ವಿಶಾಂತಿ ತಾಣಗಳಲ್ಲಿ ಕಡ್ಡಾಯವಾಗಿ ಚಾರಣಿಗರ ಎಣಿಕೆ ಮಾಡಬೇಕು. ಪ್ರತಿ ಅರ್ಧಗಂಟೆಗೊಮ್ಮೆ ತಮ್ಮ ವಾಕಿ ಟಾಕಿ ಮೂಲಕ ಬೇಸ್ ಕ್ಯಾಂಪ್ ನೊಂದಿಗೆ ಸಂವಹನ ನಡೆಸಬೇಕು. ಚಾರಣಿಗರ ಜವಾಬ್ದಾರಿ ಹೊರುವಂತೆ ಅವರಿಗೆ ಹೊಣೆಗಾರಿಕೆ ನೀಡಲಾಗುವುದು. ಚಾರಣ ಆರಂಭವಾದ ಒಂದು ಗಂಟೆಯೊಳಗೆ ವಾಕಿ ಟಾಕಿ ಸಂವಹನ ಗೈಡ್ ಕಡೆಯಿಂದ ನಡೆಯದಿದ್ದರೆ ಬೇಸ್ ಕ್ಯಾಂಪ್ ಸಿಬ್ಬಂದಿಯೇ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

