Updated By: Priyalachhi
ಮೈಸೂರು: ಹುಣಸೂರು ತಾಲೂಕಿನ ಚಿನ್ನಾಭರಣ ಮಳಿಗೆಗೆ 5 ಮಂದಿ ಡಕಾಯಿತರು ಗನ್ ತೋರಿಸಿ ಸುಮಾರು 4 ರಿಂದ 5 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಹುಣಸೂರು ಬಸ್ ನಿಲ್ದಾಣದ ಹಿಂದಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಶಾಪ್ಗೆ ಮಧ್ಯಾಹ್ನ ಸುಮಾರು 2.10 ರ ಸಮಯದಲ್ಲಿ ಬೈಕ್‌ನಲ್ಲಿ ಬಂದ ಐವರು ಮುಸುಕುಧಾರಿಗಳು 7-8ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದ ವೇಳೆ ನುಗ್ಗಿ ದರೋಡೆ ಮಾಡಿದ್ದಾರೆ. 5 ಮಂದಿಯಲ್ಲಿ ನಾಲ್ವರು ಮುಸುಕು ಧರಿಸಿದ್ದರು.
ಓರ್ವ ಗ್ಯಾಂಗ್ ಲೀಡರ್ ಎರಡು ಕೈಗಳಲ್ಲೂ ಗನ್ ಹಿಡಿದು ಸಿನಿಮೀಯ ಶೈಲಿಯಲ್ಲಿ ಬೆದರಿಕೆ ಹಾಕಿ, ಕೆಲವೇ ನಿಮಿಷದಲ್ಲಿ ಅಂಗಡಿಯಲ್ಲಿದ್ದ ಅಂದಾಜು 5 ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿರುವ ಮಾಹಿತಿ ಬಂದಿದೆ. ದರೋಡೆಕೋರರನ್ನು ಸಿಬ್ಬಂದಿ ಹಿಂಬಾಲಿಸಿದ್ದಾರೆ. ಆದರೆ ಹಿಡಿಯಲು ಸಾಧ್ಯವಾಗಿಲ್ಲ. ದರೋಡೆ ನಡೆಸಿದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರಾರಿಯಾಗುವ ವೇಳೆ ಓರ್ವ ದರೋಡೆಕೋರ ಹೆಲ್ಮೆಟ್ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಐಜಿಪಿ ಡಾ. ಬೋರಲಿಂಗಯ್ಯ ಪ್ರತಿಕ್ರಿಯೆ: ಈ ಕುರಿತು ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಅವರು ಮಾತನಾಡಿ, “ಎರಡು ಬೈಕ್‌ಗಳಲ್ಲಿ ಐದು ಮಂದಿ ಬಂದು ಗನ್ ತೋರಿಸಿದ್ದಾರೆ ಎಂದು ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. 7-8 ಮಂದಿ ಸಿಬ್ಬಂದಿ ಇದ್ದರು. ಕೆಲವರು ಊಟಕ್ಕೆ ಹೋಗಿದ್ದರು. 8 ರಿಂದ 9 ನಿಮಿಷ ಸಮಯ ಕಳೆದಿದ್ದಾರೆ. ಸರಿಯಾಗಿ ಎಷ್ಟು ಚಿನ್ನಾಭರಣ ಕದ್ದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ತನಿಖೆ ಮಾಡಲಾಗುತ್ತಿದೆ. ಯಾವ ಸಿಬ್ಬಂದಿಗೆ ಹೆದರಿಸಿ ಚಿನ್ನಾಭರಣ ತುಂಬಿಕೊಂಡಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗಿದೆ. ನಾಲ್ಕು ಜನ ಪಾಲುದಾರರು ಎಪ್ರಿಲ್‌ನಲ್ಲಿ ಈ ಮಳಿಗೆ ತೆರೆದಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು” ಎಂದರು.

