ರಾಜ್ಯ

ಡಿಸಿಟಿಇ- ಇನ್ಫೊಸಿಸ್ ಒಡಂಬಡಿಕೆಗೆ ಸಹಿ, ಪ್ರತಿ ವರ್ಷ 5 ಲಕ್ಷ ವಿದ್ಯಾರ್ಥಿಗಳು, ಬೋಧಕರಿಗೆ ಉಪಯುಕ್ತ

ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು...

ಬೆಂಗಳೂರು: ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು(ಡಿ.ಸಿ.ಟಿ.ಇ.) ಮುಂಚೂಣಿ ಐಟಿ ಕಂಪನಿ ಇನ್ಫೋಸಿಸ್ ಜತೆ ಬುಧವಾರ ಸಹಿ ಹಾಕಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಡಿ.ಸಿ.ಟಿ.ಇ.ಯ ‘ಹೆಲ್ಪ್ ಎಜುಕೇಟ್’ ಉಪಕ್ರಮದಡಿಯ ಈ ಒಡಂಬಡಿಕೆಯನ್ನು ವಿಧಾನಸೌಧದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ಸರ್ಕಾರದ ಪರವಾಗಿ ಡಿಸಿಟಿಇ ಆಯುಕ್ತ ಪಿ.ಪ್ರದೀಪ್ ಮತ್ತು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ(ಶಿಕ್ಷಣ ಮತ್ತು ತರಬೇತಿ) ತಿರುಮಲ ಆರೋಹಿ ಅವರು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ ಅವರು, “ಈ ಒಪ್ಪಂದವು ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲಿಗೆ, ಇನ್ಫೋಸಿಸ್ ಕಂಪನಿಯು 35 ಕೋಟಿ ರೂ. ವೆಚ್ಚದಲ್ಲಿ ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಯಲ್ಲಿರುವ 3900ಕ್ಕೂ ಹೆಚ್ಚಿನ ಕೋರ್ಸ್ ಗಳು ಮತ್ತು 1.6 ಲಕ್ಷ ಕಲಿಕಾ ಸಂಪನ್ಮೂಲಗಳನ್ನು 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಚಿತವಾಗಿ ಲಭ್ಯವಾಗಿಸಲಿದೆ. ಎರಡನೆಯದಾಗಿ, ಕಂಪನಿಯು ಬೋಧಕರ ತರಬೇತಿಯಲ್ಲಿ ಸಹಕರಿಸಲಿದೆ. ಮೂರನೆಯದಾಗಿ, ಕಂಪನಿಯು 15,000 ಕಂಪ್ಯೂಟರುಗಳನ್ನು ದೇಣಿಗೆ ಕೊಡುವ ಮೂಲಕ ಕಾಲೇಜುಗಳ ಡಿಜಿಟಲ್ ಮೂಲಸೌಕರ್ಯವನ್ನು ಸದೃಢಗೊಳಿಸಲಿದೆ” ಎಂದು ವಿವರಿಸಿದರು.

ಈ ಒಪ್ಪಂದವು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಆಶಯದಂತೆ ಸಂಯೋಜಿತ ಕಲಿಕೆಗೆ (ಬ್ಲೆಂಡೆಂಡ್ ಲರ್ನಿಂಗ್) ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪೂರಕವಾಗಿದೆ ಎಂದು ಸಚಿವರು ಹೇಳಿದರು.

“ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ವೇದಿಕೆಯು ವರ್ಚುಯಲ್ ಪ್ರಯೋಗಾಲಯಗಳು, ಗೇಮಿಫಿಕೇಷನ್ ಮತ್ತಿತರ ಅಂಶಗಳನ್ನು ಒಳಗೊಂಡು ಆಸಕ್ತಿದಾಯಕವಾಗಿದೆ. ಇದು ಉದ್ಯಮ ಪರಿಣತರೊಂದಿಗೆ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಉದ್ಯಮಕ್ಕೆ ಬೇಕಾದ ಕೌಶಲಗಳು ಹಾಗೂ ವಿದ್ಯಾರ್ಥಿಗಳು ಕೋರ್ಸ್ ಗಳಲ್ಲಿ ಕಲಿಯುವ ಕೌಶಲಗಳ ನಡುವಿನ ಕಂದಕವನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿರುವ 1.6 ಲಕ್ಷ ಕಲಿಕಾ ಸಂಪನ್ಮೂಲಗಳು ಆಡಿಯೊ, ವಿಡಿಯೊ, ಆನಿಮೇಷನ್ ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳ ಅರ್ಥಪೂರ್ಣ ಕಲಿಕೆಗೆ ಸಹಕಾರಿಯಾಗಿವೆ” ಎಂದು ಅವರು ಹೇಳಿದರು.

ಇದನ್ನೂ ಓದಿ...

Back to top button
>