- ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕರ್ನಾಟಕದ ಬರ ಪರಿಹಾರ ವಿಷಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ. ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೇ. 8ರಷ್ಟು ಬರ ಪರಿಹಾರವನ್ನು ಕೊಟ್ಟಿದ್ದರೆ, ಎನ್‌ಡಿಎ ಸರ್ಕಾರ ಈಗಿನ ಅನುದಾನವನ್ನು ಹೊರತುಪಡಿಸಿಯೇ ಶೇ. 38ರಷ್ಟು ಹಣವನ್ನು ಕರ್ನಾಟಕಕ್ಕೆ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಭಾನುವಾರ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಅತ್ಯಲ್ಪ ಪರಿಹಾರ ಕೊಟ್ಟು ರಾಜ್ಯದ ಜನರಿಗೆ ವಂಚನೆ ಎಸಗಿದ್ದು ಯುಪಿಎ ಸರ್ಕಾರ ಎಂದು ಹೇಳಿದರು.
ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ ಕಡಿಮೆ ಹಣ ಕೊಟ್ಟಿದೆ ಎಂಬ ಕಾಂಗ್ರೆಸ್ ಸರ್ಕಾರದ ಆರೋಪವನ್ನು ಟೀಕಿಸಿದ ಮಾಜಿ ಮುಖ್ಯಮಂತ್ರಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 4,860 ಕೋಟಿ ರೂಪಾಯಿ ಕೊಟ್ಟರೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಈಗ ಕೇಂದ್ರ ಸರ್ಕಾರ 3,454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಈಗ ನೋಡಿದರೆ ನಾವು ₹18172 ಕೋಟಿ ಕೇಳಿದ್ದು ಎಂದು ಹೇಳುತ್ತಿದ್ದಾರೆ. ಇವರು ಪದೇ ಪದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನನಗಿರುವ ಮಾಹಿತಿ ಪ್ರಕಾರ ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರದ 2004ರಿಂದ 2013ರವರೆಗಿನ ಅವಧಿಯಲ್ಲಿ ವಿವಿಧ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಬರ ಪರಿಹಾರಕ್ಕಾಗಿ ಕೇವಲ ಶೇ. 8ರಷ್ಟು ಹಣ ನೀಡಿದ್ದಾರೆ. ನರೇಂದ್ರ ಮೋದಿ ಅವರು ಬಂದ ಮೇಲೆ ಅಂದರೆ, 2014ರಿಂದ ಇಲ್ಲಿಯವರೆಗೆ ಈಗ ಬಿಡುಗಡೆ ಆಗಿರುವ 3,454 ಕೋಟಿ ರೂಪಾಯಿ ಹೊರತುಪಡಿಸಿ ಶೇ. 38ರಷ್ಟು ಬರ ಪರಿಹಾರ ಹಣ ರಾಜ್ಯಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರ 8% ಕೊಟ್ಟರೆ, ಎನ್‌ಡುಎ ಸರ್ಕಾರ 38% ಹಣ ಕೊಟ್ಟಿದೆ. ಅನ್ಯಾಯ ಯಾರಿಂದ ಆಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಅಂಕಿ-ಅಂಶ ನೀಡಿದರು.
ಇವರು ಕೇಂದ್ರ ಸರ್ಕಾರದ ಸುಳ್ಳುಗಳನ್ನು ಹೇಳುತ್ತಾ ಅಪಪ್ರಚಾರ ಮಾಡುವುದನ್ನು ಬಿಟ್ಟು ಕೇಂದ್ರದಿಂದ ಬಂದಿರುವ ಹಣವನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡಲಿ ಎಂದು ಎಚ್.ಡಿ. ಕುಮಾರಸ್ವಾಮಿ ಕಿವಿಮಾತು ಹೇಳಿದರು.
ಹಾಸನ ಪ್ರಕರಣ: ಉಪ್ಪು ತಿಂದವರು ನೀರು ಕುಡಿಯುತ್ತಾರೆ
ಹಾಸನ ಜಿಲ್ಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ನಡೆದಿದೆ ಎನ್ನಲಾದ ಪ್ರಕರಣದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿದ್ದಾರೆ. ಈ ನೆಲದ ಕಾನೂನಿನ ಪ್ರಕಾರ ಯಾರೇ ತಪ್ಪು ಮಾಡಿರಲಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ತನಿಖೆಯ ಮೂಲಕ ಎಲ್ಲ ಸತ್ಯಾಂಶಗಳು ಹೊರಗೆ ಬರಲಿ. ಯಾರೇ ತಪ್ಪೆಸಗಿದ್ದರೂ, ಅವರು ಯಾರೇ ಆಗಿದ್ದರೂ ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವ ಪ್ರಶ್ನೆ ಬರುವುದಿಲ್ಲ. ಆದ್ದರಿಂದ ತನಿಖೆಯ ವರದಿ ಸಂಪೂರ್ಣವಾಗಿ ಹೊರ ಬಂದ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.