- ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತಿನ ಸಮೀಕ್ಷೆ ನಡೆಸಿ ಹಿಂದೂಗಳ ಸಂಪತ್ತನ್ನು ಏಳೇಳು ಮಕ್ಕಳು ಹುಟ್ಟಿಸುವ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಎಂಬ ಅಪ್ಪಟ ಸುಳ್ಳನ್ನು ನಿರ್ಲಜ್ಜವಾಗಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಿರಲ್ಲಾ? ಇದಕ್ಕೆ ನಿಮ್ಮಲ್ಲಿ ಆಧಾರ ಏನಿದೆ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಪ್ರಚಾರ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮೋದಿಯವರು ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಸತ್ಯದ ನಾಡಾಗಿರುವ ಕರ್ನಾಟಕಕ್ಕೆ ಆಗಮಿಸಲಿರುವ ಸುಳ್ಳಿನ ಸರದಾರರಾದ ಮೋದಿ ಅವರಿಗೆ ಸ್ವಾಗತ. ಕಾನೂನು ಪ್ರಕಾರ ಶಿಕ್ಷಾರ್ಹವಾಗಿರುವ ನಿಮ್ಮ ಸುಳ್ಳುಗಳ ಬಗ್ಗೆ ಯಾರೂ, ಯಾವುದೇ ಕ್ರಮ ಕೈಗೊಳ್ಳುವ ಸ‍್ಥಿತಿಯಲ್ಲಿ ಇಲ್ಲ ಎನ್ನುವುದು ನಮಗೂ ಗೊತ್ತಾಗಿದೆ. ಆದ್ದರಿಂದ ನಿಮಗೆ ಆತ್ಮಸಾಕ್ಷಿ ಇದ್ದರೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕೋರುತ್ತೇನೆ. ನಿಮ್ಮ ಇತ್ತೀಚಿನ ಅತಿದೊಡ್ಡ ಸುಳ್ಳಿನ ಬಗ್ಗೆ ಕೆಲವು ಪ್ರಶ್ನೆಗಳನ್ನು ನಿಮಗೆ ಕೇಳಬೇಕೆಂದಿದ್ದೇನೆ, ನಿಮ್ಮ ಇಂದಿನ ಭಾಷಣದಲ್ಲಿ ಆ ಪ್ರಶ್ನೆಗಳಿಗೆ ಉತ್ತರಿಸುವಿರೆಂದು ನಂಬಿದ್ದೇನೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತಿನ ಸಮೀಕ್ಷೆ ನಡೆಸಿ ಹಿಂದೂಗಳ ಸಂಪತ್ತನ್ನು ಏಳೇಳು ಮಕ್ಕಳು ಹುಟ್ಟಿಸುವ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ’’ ಎಂಬ ಅಪ್ಪಟ ಸುಳ್ಳನ್ನು ನಿರ್ಲಜ್ಜವಾಗಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಿರಲ್ಲಾ? ಇದಕ್ಕೆ ನಿಮ್ಮಲ್ಲಿ ಆಧಾರ ಏನಿದೆ? ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯ ಯಾವ ಪುಟದಲ್ಲಿ ಈ ಭರವಸೆ ಇದೆ? ಯಾವ ಹಿರಿಯ ನಾಯಕರು ಇದನ್ನು ಹೇಳಿದ್ದಾರೆ? ದಯವಿಟ್ಟು ತಿಳಿಸಿ ಇಲ್ಲವಾದರೆ ಸುಳ್ಳು ಆರೋಪಕ್ಕಾಗಿ ಕನಿಷ್ಠ ವಿಷಾದವನ್ನಾದರೂ ಸೂಚಿಸಿ.
ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರುವ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಪಕ್ಷದ ವೇದಿಕೆಯಲ್ಲಿಯೂ ಚರ್ಚೆಯಾಗಿಲ್ಲ. ಆ ಚರ್ಚೆಯನ್ನು ಪಕ್ಷ ನಡೆಸಿದ್ದರೆ ಅದಕ್ಕೆ ಆಧಾರ ಕೊಡಿ. ಸ್ಯಾಮ್ ಪಿತ್ರೋಡಾ ಅವರು ಇದನ್ನು ಪ್ರಸ್ತಾಪಿಸಿ ಈ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿರುವುದು ನಿಜ, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು.
ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರದ ಚರ್ಚೆ ಶುರುಮಾಡಿರುವುದೇ ನಿಮ್ಮ ಸಹದ್ಯೋಗಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರ ಬಜೆಟ್ ನಲ್ಲಿ ಇದನ್ನು ಸೇರಿಸುವ ಬಗ್ಗೆ ಚರ್ಚೆ ನಡೆದಿರುವುದಕ್ಕೆ ಆ ಕಾಲದ ಪತ್ರಿಕೆಗಳ ವರದಿಗಳೇ ಸಾಕ್ಷಿ. ಇದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ಈಗ ನಿರ್ಮಲಾ ಸೀತಾರಾಮನ್ ಅವರನ್ನೂ ದೇಶದ್ರೋಹಿ ಪಟ್ಟಿಗೆ ಸೇರಿಸುವಿರಾ?
ಸಂಪತ್ತಿನ ಸಮಾನ ಹಂಚಿಕೆ ಎನ್ನವುದು ಒಂದು ಉದಾತ್ತ ಚಿಂತನೆಯಾಗಿದೆ. ಇದು ನಮ್ಮ ಸಂವಿಧಾನದ ಆಶಯವೂ ಆಗಿದೆ. ನಮ್ಮ ದೇಶದಲ್ಲಿ 1953ರಲ್ಲಿಯೇ ಎಸ್ಟೇಟ್ ತೆರಿಗೆ ಹೇರಲಾಗಿತ್ತು. ಅದನ್ನು ರದ್ದು ಮಾಡಿದವರು ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು. 1998ರ ವರೆಗೆ ಚಾಲ್ತಿಯಲ್ಲಿದ್ದ ಗಿಫ್ಟ್ ತೆರಿಗೆಯನ್ನು ರದ್ದು ಮಾಡಿದವರು ಆಗಿನ ಪ್ರಧಾನಿ ಹೆಚ್.ಡಿ.ದೇವೇಗೌಡರು. ನಿಮ್ಮದೇ ಸರ್ಕಾರ 2015ರಲ್ಲಿ ಸಂಪತ್ತಿನ ಮೇಲಿನ ತೆರಿಗೆಯನ್ನೂ ರದ್ದು ಮಾಡಿದೆ. ಇದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ?
ನರೇಂದ್ರ ಮೋದಿಯವರೇ ನಿಮ್ಮದು ಸೂಟುಬೂಟು ಸರ್ಕಾರ, ಶ್ರೀಮಂತರ ಪರ ಮತ್ತು ಬಡವರ ವಿರೋಧಿ ಸರ್ಕಾರ ಎನ್ನುವ ನಮ್ಮ ಆರೋಪ ಆಧಾರರಹಿತವಾದುದೇನಲ್ಲ. 2019ರಲ್ಲಿ ನಿಮ್ಮದೇ ಸರ್ಕಾರ ಶೇಕಡಾ 30ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇಕಡಾ 22ಕ್ಕೆ ಇಳಿಸಿದೆ ಎನ್ನುವುದು ನಿಮಗೆ ತಿಳಿದಿರಲಿ. ಈ ಮೂರ್ಖತನದ ನಿರ್ಧಾರದಿಂದಾಗಿ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ಕಳೆದುಕೊಂಡ ಆದಾಯ 1.81 ಲಕ್ಷ ಕೋಟಿ ರೂಪಾಯಿ. ದೇಶದ ಬಡವರ ಕಲ್ಯಾಣಕ್ಕಾಗಿ ವ್ಯಯವಾಗಬೇಕಾಗಿದ್ದ ಈ ಹಣ ಕಾರ್ಪೋರೇಟ್ ದೊರೆಗಳ ಜೇಬಿಗೆ ಸೇರಿದೆ. ಅವರ ಲಾಭದಲ್ಲಿ ಯಾರ ಪಾಲು ಎಷ್ಟು? ಇದೇನಾ ನಿಮ್ಮ ಕಲ್ಪನೆಯ ಸಮಾನ ಆಸ್ತಿ ಹಂಚಿಕೆ?
ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂಬುದು ನಮ್ಮ ಸಂವಿಧಾನದ ಆಶಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನಡೆಸಿದಂತೆ ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವುದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ರಾಜಕೀಯ ಪ್ರಜಾಪ್ರಭುತ್ವ ಉಳಿಯಬೇಕಾದರೆ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂಬುದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಖಚಿತ ಅಭಿಪ್ರಾಯವಾಗಿತ್ತು. ಪ್ರಧಾನಿ ಮೋದಿಯವರೇ ನೀವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದರೆ ಧೈರ್ಯದಿಂದ ಹಾಗೆಂದು ಹೇಳಿಬಿಡಿ. ಇದು ನಿಮ್ಮಿಂದ ಸಾಧ್ಯವೇ?
ಸಂಪತ್ತಿನ ಸಮಾನ ಹಂಚಿಕೆಯ ನಮ್ಮ ಆಶಯವನ್ನೇ ತಿರುಚಿ ಅದಕ್ಕೆ ಕೋಮುವಾದಿ ಬಣ್ಣ ಬಳಿಯಲು ಮುಂದಾಗಿರುವ ಜಾಣ ಪ್ರಧಾನಿ ಮೋದಿ ಅವರೇ, ಕೆಲವೇ ಕೆಲವು ಕುಟುಂಬಗಳ ಕೈಯಲ್ಲಿರುವ ದೇಶದ ಸಂಪತ್ತನ್ನು ಸಮಾನವಾಗಿ ಹಂಚುವುದಾಗಿ ರಾಹುಲ್ ಗಾಂಧಿಯವರು ಹೇಳಿದ ಕೂಡಲೇ ನಿಮ್ಮ ಹೊಟ್ಟೆ ಉರಿಯುತ್ತಿರುವುದು ಯಾಕೆ? ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಪಾವತಿ ಮಾಡದೆ ನಿಮ್ಮ ಉದ್ಯಮ ಮಿತ್ರರು ವಿದೇಶಕ್ಕೆ ಪರಾರಿಯಾದಾಗ ನಿಮಗೆ ಹೊಟ್ಟೆ ಉರಿಯಲಿಲ್ಲವೇ? ಇದೇನಾ ನಿಮ್ಮ ಸಮಾನ ಆಸ್ತಿ ಹಂಚಿಕೆ?
ದೇಶದ ರೈತರು ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಕಳೆದ ಹತ್ತು ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆ ಬೇಡಿಕೆಯನ್ನು ತಳ್ಳಿ ಹಾಕುತ್ತಲೇ ಬಂದಿರುವ ಪ್ರಧಾನಿ ಮೋದಿ ಅವರೇ, ಉದ್ಯಮಿಗಳಿಗೆ ಸೇರಿರುವ 16 ಲಕ್ಷ ಕೋಟಿ ರೂಪಾಯಿಯನ್ನು ಒಂದೇ ಏಟಿಗೆ ಮನ್ನಾ ಮಾಡಿದಾಗ ದೇಶದ ಆಸ್ತಿಯನ್ನು ಸಮಾನ ಹಂಚಿಕೆಮಾಡಬೇಕೆಂದು ನಿಮಗೆ ಅನಿಸಲಿಲ್ಲವೇ?
ಹಿಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರೂ 33, ಲಾಲ್ ಬಹದ್ದೂರ್ ಶಾಸ್ತ್ರಿ 5, ಇಂದಿರಾ ಗಾಂಧಿಯವರು 66, ರಾಜೀವ್ ಗಾಂಧಿಯವರು 16, ವಿ.ಪಿ.ಸಿಂಗ್ ಅವರು 2, ಐ.ಕೆ.ಗುಜ್ರಾಲ್ ಅವರು 3, ವಾಜಪೇಯಿ ಅವರು 17 ಮತ್ತು ಮನಮೋಹನ್ ಸಿಂಗ್ ಅವರು 23 ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ನೀವು ಒಂದೇ ಒಂದು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯನ್ನು ಸ್ಥಾಪಿಸಿಲ್ಲ. ನಿಮ್ಮ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ 23 ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದೀರಿ. ನಿಮ್ಮ ಕಲ್ಪನೆಯ ಸಮಾನ ಆಸ್ತಿ ಹಂಚಿಕೆ ಎಂದರೆ ಇದೇನಾ?
ನಮ್ಮ ಕಾಂಗ್ರೆಸ್ ಪಕ್ಷ ಭೂ ಸುಧಾರಣೆ ಕಾಯ್ದೆಯ ಮೂಲಕ ಉಳುವವನನ್ನೇ ಭೂಮಿಯ ಒಡೆಯರನ್ನಾಗಿ ಮಾಡಿ ಭೂ ರಹಿತರಿಗೆ ಭೂಮಿ ಹಂಚಿಕೆ ಮಾಡಿತು. ಮನೆ ಇಲ್ಲದವರಿಗೆ ಮನೆ, ಶಿಕ್ಷಣಕ್ಕಾಗಿ ಶಾಲೆ, ಆನಾರೋಗ್ಯ ಹೋಗಲಾಡಿಸಲು ಆಸ್ಪತ್ರೆಗಳನ್ನು ನಿರ್ಮಿಸಿತು. ನಿಮ್ಮ 10 ವರ್ಷಗಳಲ್ಲಿ ನೀವು ಆಸ್ತಿಮಾಡಿಕೊಟ್ಟಿದ್ದು ಅದಾನಿ-ಅಂಬಾನಿಗಳಿಗೆ ಮಾತ್ರ ಅಲ್ಲವೇ? ವಿಮಾನ ನಿಲ್ದಾಣಗಳು,ಬಂದರುಗಳು, ಕಲ್ಲಿದ್ದಲು ಗಣಿಗಳು, ಅನಿಲ-ತೈಲ ನಿಕ್ಷೇಪಗಳು, ಹೆದ್ದಾರಿ ಟೋಲುಗಳು, ವಿದ್ಯುತ್ ನಿಗಮಗಳು ಒಂದೇ ಎರಡೇ ಇವೆಲ್ಲವೂ ನಿಮ್ಮ ಕಾಲದಲ್ಲಿಯೇ ಅಲ್ಲವೇ ಅದಾನಿ-ಅಂಬಾನಿ ಮಡಿಲು ಸೇರಿದ್ದು? ಇದೇನಾ ನಿಮ್ಮ ಸಮಾನ ಆಸ್ತಿ ಹಂಚಿಕೆ? ಎಂದು ಪ್ರಶ್ನಿಸಿದ್ದಾರೆ.