ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಜ್ವರ, ತಲೆ ನೋವು, ಮೈಕೈ ನೋವು, ಹಲ್ಲು ನೋವಿನಂತಹ ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗೂ ಮಾತ್ರೆ ತೆಗೆದುಕೊಳ್ಳುತ್ತಿರುವವರಿಗೆ ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಅಧ್ಯಯನವೊಂದು ಶಾಕ್ ನೀಡಿದೆ.
ಹೌದು.. ಸಣ್ಣ ತೊಂದರೆಗಳಿಗೂ ಪ್ಯಾರಸೆಟಮಾಲ್ ನುಂಗುವ ಅಭ್ಯಾಸ ಹೆಚ್ಚಿರುವ ಈ ಹೊತ್ತಿನಲ್ಲಿ, ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಅಧ್ಯಯನಕಾರರು ಮಹತ್ವದ ವರದಿ ನೀಡಿದ್ದು, ಹೆಚ್ಚು ಪ್ಯಾರಸಿಟಮಲ್ ಸೇವನೆಯಿಂದ ನಮ್ಮ ಲಿವರ್ ಗೆ ಹಾನಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಾವು ನುಂಗುವ ಔಷಧಗಳು ಅತಿಯಾದರೆ ನಮ್ಮ ಯಕೃತ್ತಿನ ಆರೋಗ್ಯವನ್ನೇ ನುಂಗಿ ಹಾಕುತ್ತವೆ ಎಂದು ಇತ್ತೀಚಿನ ಅಧ್ಯಯನಗಳು ಬಹಿರಂಗ ಪಡಿಸಿವೆ.
ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಅಧ್ಯಯನದಲ್ಲೇನಿದೆ?
ಪ್ರತಿ ಸಣ್ಣ ವಿಷಯಕ್ಕೂ, ವೈದ್ಯರ ಸಲಹೆ ಇಲ್ಲದೆ ಪ್ಯಾರಸೆಟಮಾಲ್ ಅಥವಾ ನೋವಿನ ಮಾತ್ರೆಗಳನ್ನು ನುಂಗುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಕೆಲವೊಮ್ಮೆ ಶಾಶ್ವತವೂ ಆಗಬಹುದು. ಇದು ಅಂಗಾಂಗ ವೈಫಲ್ಯಕ್ಕೂ ದಾರಿ ಮಾಡುತ್ತದೆ ಎಂದು ಅಧ್ಯಯನದಲ್ಲಿ ಎಚ್ಚರಿಸಲಾಗಿದೆ. ಪ್ರಮುಖವಾಗಿ ಭಾರತದಲ್ಲಿ ಬಳಸುವ ಪ್ಯಾರಸೆಟಮಾಲ್ ಪ್ರಮಾಣಕ್ಕಿಂತ ಪಶ್ಚಿಮ ದೇಶಗಳಲ್ಲಿ ಪ್ಯಾರಸೆಟಮಾಲ್ ಅಥವಾ ಅಸೆಟೋಮೆನೊಫಿನ್ ಬಳಸುವ ಪ್ರಮಾಣ ಹೆಚ್ಚು. ಆದರೆ ಕೋವಿಡ್ ನಂತರದ ದಿನಗಳಲ್ಲಿ ಪ್ಯಾರಸೆಟಮಾಲ್ ಬಳಸುವ ಪ್ರಮಾಣ ಎಲ್ಲಾ ದೇಶಗಳಲ್ಲಿ ಮೊದಲಿಗಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇಂಥ ಅಧ್ಯಯನಗಳು ಮಹತ್ವ ಪಡೆದಿವೆ.
ಯಕೃತ್ತಿಗೆ ಹಾನಿ
ರೋಗದ ಉಪಶಮನಕ್ಕಾಗಿ ಬಳಸುವ ಈ ಔಷಧಗಳು ಮಿತಿ ಮೀರಿದರೆ ಅಪಾಯಗಳಿಗೆ ಆಹ್ವಾನ ನೀಡುತ್ತವೆ ಎಂಬುದು ಸಾಬೀತಾಗಿದೆ. ಕೆಲವು ಸಂದರ್ಭಗಳಲ್ಲಿ, ಯಕೃತ್ತಿನ ಮೇಲೆ ದುಷ್ಟಪರಿಣಾಮ ಬೀರುವ ಈ ಔಷಧಗಳು, ಅಲ್ಲಿನ ಆರೋಗ್ಯವಂತ ಕೋಶಗಳನ್ನು ಹಾಳು ಮಾಡುತ್ತವೆ ಹಾಗೂ ಅಂಗದ ವೈಫಲ್ಯಕ್ಕೂ ಕಾರಣವಾಗಬಹುದು. ಯಾವುದೇ ಕೋಶಗಳು ತಮ್ಮ ಅಂಗಗಳ ಗೋಡೆಯ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡರೆ ಆಪತ್ತು ಎದುರಾಗುತ್ತದೆ. ಇದರಿಂದ ಆ ಕೋಶಗಳು ಕ್ರಮೇಣ ಸಾಯಬಹುದು. ಇಂಥ ಸಂದರ್ಭಗಳಲ್ಲಿ ಅಂಗಗಳು ಪೂರ್ಣ ಅಥವಾ ಭಾಗಶಃ ಹಾನಿಗೊಂಡು ವಿಫಲವೂ ಆಗಬಹುದು ಎಂದು ಹೇಳಲಾಗಿದೆ.