Updated By: Priyalachhi

ನವದೆಹಲಿ/ಅಯೋಧ್ಯೆ: ರಾಮನಗರಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಇದರ ದ್ಯೋತಕವಾಗಿ ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡಲಿದ್ದು, ದೇವಾಲಯದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ.

ಭಗವಾನ್ ರಾಮನ ತೇಜಸ್ಸು ಮತ್ತು ಶೌರ್ಯವನ್ನು ಸಂಕೇತಿಸುವ ವಿಕಿರಣ ಸೂರ್ಯನ ಚಿತ್ರವುಳ್ಳ 10 ಅಡಿ ಎತ್ತರ ಮತ್ತು 20 ಅಡಿ ಉದ್ದದ ತ್ರಿಕೋನ ಧ್ವಜ ಇದಾಗಿದ್ದು, ಅದರ ಮೇಲೆ ಕೋವಿದರ ಮರದ ಚಿತ್ರದೊಂದಿಗೆ ‘ಓಂ’ ಅನ್ನು ಕೆತ್ತಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಹೇಳಿಕೆ ತಿಳಿಸಿದೆ.

ಪವಿತ್ರ ಕೇಸರಿ ಧ್ವಜವು ಘನತೆ, ಏಕತೆ ಮತ್ತು ಸಾಂಸ್ಕೃತಿಕ ನಿರಂತರತೆಯ ಸಂದೇಶ ಸಾರುತ್ತದೆ. ರಾಮ ರಾಜ್ಯದ ಆದರ್ಶಗಳನ್ನು ಸಾಕಾರಗೊಳಿಸುವ ಸಾಧನವಾಗಿದೆ ಎಂದು ಪಿಎಂಒ ತಿಳಿಸಿದೆ.

ನಾಗರಶೈಲಿಯಲ್ಲಿ ಗೋಪುರ ನಿರ್ಮಾಣ: ರಾಮ ಮಂದಿರದ ಮೇಲಿನ ಗೋಪುರವನ್ನು ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಅದರ ಮೇಲೆ ಧ್ವಜ ನೆಡಲಾಗುವುದು. ದೇವಾಲಯದ ಸುತ್ತಲೂ ನಿರ್ಮಿಸಲಾದ 800 ಮೀಟರ್ ಪಾರ್ಕೋಟಾ (ಪ್ರದಕ್ಷಿಣೆ ಇರುವ ಜಾಗ)ವನ್ನು ದಕ್ಷಿಣ ಭಾರತದ ವಾಸ್ತುಶಿಲ್ಪ ಸಂಪ್ರದಾಯದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ದೇವಾಲಯದ ವಾಸ್ತುಶಿಲ್ಪದ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಕಚೇರಿ ಹೇಳಿದೆ.

ಅಯೋಧ್ಯೆಯಲ್ಲಿ ತಮ್ಮ ವಾಸ್ತವ್ಯದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ದೇವಿ ಅಹಲ್ಯ, ನಿಶಾದರಾಜ್ ಗುಹಾ ಮತ್ತು ಮಾತಾ ಶಬರಿ ಅವರಿಗೆ ಸಂಬಂಧಿಸಿದ ದೇವಾಲಯಗಳನ್ನು ಹೊಂದಿರುವ ಸಪ್ತಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಶೇಷಾವತಾರ ಮಂದಿರಕ್ಕೆ ತೆರಳುವರು. ನಂತರ ಮಾತಾ ಅನ್ನಪೂರ್ಣ ಮಂದಿರಕ್ಕೂ ಭೇಟಿ ನೀಡಲಿದ್ದಾರೆ. ರಾಮ ದರ್ಬಾರ್ ಗರ್ಭಗೃಹದಲ್ಲಿ ಭಗವಾನ್ ರಾಮನ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ ಎಂದು ಪಿಎಂಒ ಮಾಹಿತಿ ಹಂಚಿಕೊಂಡಿದೆ.

ರಾಷ್ಟ್ರೀಯ ಏಕತೆಗೆ ಹೊಸ ಭಾಷ್ಯ: ಮಧ್ಯಾಹ್ನದ ಹೊತ್ತಿನಲ್ಲಿ, ಪ್ರಧಾನಿ ಮೋದಿ ಅವರು ಅಯೋಧ್ಯೆಯ ಪವಿತ್ರ ಶ್ರೀರಾಮ ಜನ್ಮಭೂಮಿ ದೇವಾಲಯದ ಶಿಖರದ ಮೇಲೆ ಕೇಸರಿ ಧ್ವಜವನ್ನು ಶಾಸ್ತ್ರೋಕ್ತವಾಗಿ ಹಾರಿಸಲಿದ್ದಾರೆ. ಇದು ದೇವಾಲಯದ ನಿರ್ಮಾಣ ಪೂರ್ಣಗೊಂಡಿರುವುದನ್ನು ಸಂಕೇತಿಸುತ್ತದೆ. ಜೊತೆಗೆ, ಸಾಂಸ್ಕೃತಿಕ ಆಚರಣೆ ಮತ್ತು ರಾಷ್ಟ್ರೀಯ ಏಕತೆಯ ಹೊಸ ಅಧ್ಯಾಯಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದು ಪಿಎಂಒ ಹೇಳಿಕೆ ತಿಳಿಸಿದೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮವು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಶುಭ ಪಂಚಮಿಯಂದು ನಡೆಯಲಿದೆ. ಇದು ದೈವಿಕ ಒಕ್ಕೂಟವನ್ನು ಸಂಕೇತಿಸುವ ದಿನವಾದ ಶ್ರೀರಾಮ ಮತ್ತು ಸೀತೆಯ ವಿವಾಹ ಪಂಚಮಿಯ ಅಭಿಜಿತ್ ಮುಹೂರ್ತದೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದೆ.

Share.

'ಸಂಭ್ರಮಪ್ರಭ.ಕಾಮ್' (sambramaprabha.com) ಕನ್ನಡಿಗರ ವಿಶ್ವಾಸಾರ್ಹ ಡಿಜಿಟಲ್ ನ್ಯೂಸ್ ಪೋರ್ಟಲ್. ರಾಜ್ಯ, ರಾಷ್ಟ್ರ, ರಾಜಕೀಯ, ಮನರಂಜನೆ, ಕ್ರೀಡೆ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರ ಮತ್ತು ನೈಜ ಸುದ್ದಿಗಳನ್ನು ಅತ್ಯಂತ ವೇಗವಾಗಿ ನಿಮ್ಮ ಮುಂದಿಡುವುದೇ ನಮ್ಮ ಪ್ರಮುಖ ಗುರಿ. ಸತ್ಯ, ನಿಷ್ಪಕ್ಷಪಾತ ಹಾಗೂ ಜನಪರ ಪತ್ರಿಕೋದ್ಯಮದ ಆಶಯದೊಂದಿಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಸದಾ ಸತ್ಯದ ಪರ, ನಿಮ್ಮ ಧ್ವನಿಯಾಗಿ. ಸಂಪಾದಕರು: ಸುರೇಶ್ ಕೆ.ಟಿ (Suresh K.T)

Leave A Reply

Exit mobile version