Uncategorized

14 ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.

The Supreme Court categorically refused to entertain the petition filed by 14 opposition parties.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಪಕ್ಷ ನಾಯಕರ ವಿರುದ್ಧ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ, 14 ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಮೋದಿ ಸರ್ಕಾರ ತನ್ನ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಕಿರುಕುಳ ನೀಡಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿ, 14 ವಿರೋಧ ಪಕ್ಷಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಆದರೆ “ಪ್ರಕರಣವೊಂದರ ಸತ್ಯಾಸತ್ಯತೆಗೆ ಸಂಬಂಧಿಸಿದಂತೆ ಸಾಮಾನ್ಯ ಮಾರ್ಗಸೂಚಿಗಳನ್ನು ಹಾಕುವುದು ಅಪಾಯಕಾರಿ..” ಎಂದು ಹೇಳಿ ಸುಪ್ರೀಂಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿವೆ.

ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸಲ್ಲಿಸಿದ ಅರ್ಜಿಯು, ಪ್ರತಿಪಕ್ಷಗಳ ಅಪರೂಪದ ಏಕತೆಯ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ ನಂತರ ಮತ್ತು ಆಮ್ ಆದ್ಮಿ ಪಕ್ಷದ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ ನಂತರ, 14 ವಿರೋಧ ಪಕ್ಷಗಳು ಸಲ್ಲಿಸಿದ್ದ ಈ ಅರ್ಜಿ ಮತ್ತಷ್ಟು ಮಹತ್ವ ಪಡೆದುಕೊಂಡಿತ್ತು.

2014ರಿಂದ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ, ಪ್ರತಿಪಕ್ಷ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಪ್ರಕರಣಗಳ ಸಂಖ್ಯೆಯಲ್ಲಿ “ತೀವ್ರ ಮತ್ತು ಘಾತೀಯ ಹೆಚ್ಚಳ” ಕಂಡುಬಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

“ಹಿಂದಿನ ದಶಕಕ್ಕಿಂತ ಕಳೆದ ಏಳು ವರ್ಷಗಳಲ್ಲಿ ಇಡಿ ಆರು ಪಟ್ಟು ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಆದರೆ ಶಿಕ್ಷೆಯ ಪ್ರಮಾಣ ಕೇವಲ ಶೇ. 23ರಷ್ಟು ಮಾತ್ರವಿದ್ದು, ಶೇ. 95 ರಷ್ಟು ಇಡಿ ಮತ್ತು ಸಿಬಿಐ ಪ್ರಕರಣಗಳು ದೇಶಾದ್ಯಂತದ ವಿರೋಧ ಪಕ್ಷದ ನಾಯಕರ ವಿರುದ್ಧವಾಗಿವೆ ಮತ್ತು ಇದು ರಾಜಕೀಯ ದ್ವೇಷ ಮತ್ತು ಪಕ್ಷಪಾತದ ಸ್ಪಷ್ಟ ಸೂಚನೆಯಾಗಿದೆ..” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

“ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಅರ್ಜಿಯ ಸಿಂಧುತ್ವ ಮತ್ತು ಕಾರ್ಯಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ತನಿಖೆ ಮತ್ತು ಕಾನೂನು ಕ್ರಮದಿಂದ ವಿರೋಧ ಪಕ್ಷಗಳಿಗೆ ವಿನಾಯಿತಿಯನ್ನು ಬಯಸುತ್ತೀರಾ ಅಥವಾ ದೇಶದ ನಾಗರಿಕರಾಗಿ ಈ ನಾಯಕರಿಗೆ ಯಾವುದೇ ವಿಶೇಷ ಹಕ್ಕುಗಳಿವೆಯೇ..” ಎಂದು ಸಿಂಘ್ವಿ ಅವರನ್ನು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.

“ರಾಜಕೀಯ ನಾಯಕರಿಗೆ ಸಾಮಾನ್ಯ ನಾಗರಿಕರಿಗಿಂತ ಹೆಚ್ಚಿನ ವಿನಾಯಿತಿ ಇಲ್ಲ. ಹೀಗಾಗಿ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವುದರಲ್ಲಿ ಅರ್ಥವಿಲ್ಲ”.. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅಭಿಪ್ರಾಯಪಟ್ಟರು.

ಈ ವೇಳೆ ನಾವು ವಿರೋಧ ಪಕ್ಷದ ನಾಯಕರಿಗೆ ಯಾವುದೇ ರಕ್ಷಣೆ ಅಥವಾ ವಿನಾಯಿತಿಯನ್ನು ಕೇಳುತ್ತಿಲ್ಲ, ಆದರೆ ಕಾನೂನಿನ ನ್ಯಾಯಯುತ ಮತ್ತು ನಿಷ್ಪಕ್ಷಪಾತ ಅನ್ವಯಕ್ಕಾಗಿ ಮಾತ್ರ ಈ ಅರ್ಜಿ ಸಲ್ಲಿಸಿದ್ದೇವೆ ಎಂದು ಸಿಂಘ್ವಿ ಸ್ಪಷ್ಟಪಡಿಸಿದರು. ಪ್ರತಿಪಕ್ಷಗಳನ್ನು ಬಲಹೀನಗೊಳಿಸಲು ಹಾಗೂ ಅವರ ಮನೋಸ್ಥೈರ್ಯ ಕುಗ್ಗಿಸಲು ಸರ್ಕಾರ ತನ್ನ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇದು ಪ್ರಜಾಪ್ರಭುತ್ವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ಸಿಂಘ್ವಿ ಬಲವಾಗಿ ವಾದಿಸಿದರು.

ಆರೋಪಿಗಳನ್ನು ಬಂಧಿಸಲು ಸರ್ವೋಚ್ಚ ನ್ಯಾಯಾಲಯವು ವಿಧಿಸಿರುವ “ಟ್ರಿಪಲ್ ಟೆಸ್ಟ್” ಅನ್ನು ಸರ್ಕಾರ ಉಲ್ಲಂಘಿಸುತ್ತಿದೆ. ಇದಕ್ಕೆ ಪೂರಕವಾದ ಆಧಾರಗಳಿದ್ದು, ಹಲವು ವಿರೋಧ ಪಕ್ಷದ ನಾಯಕರನ್ನು ಯಾವುದೇ ಸಾಕ್ಷ್ಯ ಅಥವಾ ಸಮರ್ಥನೆ ಇಲ್ಲದೆ ಬಂಧಿಸಲಾಗುತ್ತಿದೆ. ಇದು ಚುನಾಯಿತ ಪ್ರತಿನಿಧಿಗಳಾಗಿ ಕರ್ತವ್ಯ ನಿರ್ವಹಿಸುವ ಅವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಿಂಘ್ವಿ ಹೇಳಿದರು.

ಆದರೆ ಸಿಂಘ್ವಿ ವಾದವನ್ನು ಒಪ್ಪದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌, ಅರ್ಜಿಯು ಮೂಲಭೂತವಾಗಿ ರಾಜಕಾರಣಿಗಳಿಗೆ ವಿನಾಯಿತಿ ನೀಡುವ ಕುರಿತಾದ ಮನವಿಯಾಗಿದೆ ಎಂದು ತಳ್ಳಿ ಹಾಕಿದರು. ಅಲ್ಲದೇ ಭ್ರಷ್ಟಾಚಾರ ಅಥವಾ ಇತರ ಅಪರಾಧದಿಂದ ಬಾಧಿತರಾಗಿರುವ ಇತರ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಅರ್ಜಿಯು ಗಣನೆಗೆ ತೆಗೆದುಕೊಂಡಿಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

 

ಇದನ್ನೂ ಓದಿ...

Back to top button
>