ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿಮ ಗಡಿ ವಿವಾದ ಜೀವಂತವಾಗಿರುವಾಗಲೇ, ಮಹಾರಾಷ್ಟ್ರ ಸರ್ಕಾರವು ತನ್ನ ಆರೋಗ್ಯ ಯೋಜನೆಯ ಪ್ರಯೋಜನಗಳನ್ನು ಕರ್ನಾಟಕದ 865 ಹಳ್ಳಿಗಳಿಗೆ ವಿಸ್ತರಿಸುವ ಆದೇಶವನ್ನು ಹೊರಡಿಸಿದೆ. ಮಹಾರಾಷ್ಟ್ರದ ಈ ನಡೆ ಕರ್ನಾಟಕದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷಗಳು ಇದನ್ನು ಅತ್ಯುಗ್ರವಾಗಿ ಖಂಡಿಸಿವೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಅನ್ಯಾಯವನ್ನೂ ಕಂಡೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತುಕೊಂಡಿದೆ ಎಂದು ಹೆಚ್‌ಡಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ಮಹಾರಾಷ್ಟ್ರದಲ್ಲಿರುವ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಪದೇಪದೆ ಕಾಲುಕೆರೆದು ಕಿತಾಪತಿ ಮಾಡುತ್ತಿದೆ. ಚೀನಾ ಮನಸ್ಥಿತಿಯ ಆ ರಾಜ್ಯವು ಕರ್ನಾಟಕವನ್ನು ಶತ್ರು ದೇಶದಂತೆ ನೋಡುತ್ತಿದೆ. ಕೇಂದ್ರ ಬಿಜೆಪಿ ಸರಕಾರ ಇದೆಲ್ಲಾ ನೋಡಿಕೊಂಡು ಮೌನವಾಗಿದೆ. ಒಕ್ಕೂಟ ವ್ಯವಸ್ಥೆಯ ಅವಸಾನಕ್ಕೆ ಇದೇ ಕಾರಣವಾಗಬಹುದು..” ಎಂದು ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.
”ಒಂದಲ್ಲ ಎರಡಲ್ಲ, ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರವು ಕರ್ನಾಟಕವನ್ನು ಕೆರಳಿಸುತ್ತದೆ. ರಾಜ್ಯದ ಗಡಿ ಒಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ಆ ರಾಜ್ಯ ಸರಕಾರದ ನಡೆ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ನೇರ, ಧೂರ್ತ ಪ್ರಯತ್ನ..” ಎಂದು ಹೆಚ್‌ಡಿಕೆ ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
”ಮಹಾರಾಷ್ಟ್ರವು ಒಕ್ಕೂಟ ವ್ಯವಸ್ಥೆಯ ಎಲ್ಲಾ ಎಲ್ಲೆಗಳನ್ನು ಮೀರಿ ಅಹಂಕಾರದಿಂದ ವರ್ತಿಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ‘ಶಿಂಧೆ ಸೂತ್ರದ ಗೊಂಬೆ ‘ಯಾಗಿ ಅಂತಹ ರಾಜಕಾರಣಕ್ಕೆ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ? ಎನ್ನುವ ಅನುಮಾನ ನನ್ನದು. ಇಲ್ಲವಾದರೆ, ಮಹಾರಾಷ್ಟ್ರ ಈ ಪರಿಯ ಉದ್ಧಟತನ ತೋರುತ್ತಿದ್ದರೂ ಮೋದಿ ಸರಕಾರದ ಮೌನವೇಕೆ?..” ಎಂದು ಮಾಜಿ ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
”ಕರ್ನಾಟಕದಲ್ಲಿ ಇಡೀ ಭಾರತವೇ ಅಡಗಿದೆ. ಕಾಶ್ಮೀರದಿಂದ ಕನ್ಯಾಕಮಾರಿಯವರೆಗೆ, ಗುಜರಾತಿನಿಂದ ಒಡಿಶಾವರೆಗೆ ಎಲ್ಲ ಕಡೆಯಿಂದಲೂ ಅನ್ನ ಅರಸಿಕೊಂಡು ಬಂದವರಿಗೆ ಆಶ್ರಯ ನೀಡಿದೆ. ಆ ಅನ್ನಕ್ಕೆ ಮಣ್ಣು ಹುಯ್ಯುವ ಹೀನ ಕೆಲಸವನ್ನು ಮಹಾರಾಷ್ಟ್ರ ಎಗ್ಗಿಲ್ಲದೆ ಮಾಡುತ್ತಿದೆ. ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ..” ಎಂದು ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.
”ಭಾರತ ಸ್ವತಂತ್ರ್ಯಗೊಂಡಾಗ ಎಲ್ಲರಿಗಿಂತ ಮೊದಲೇ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟವರು ನಾವು. ನಮ್ಮ ಉದಾರತೆಯೇ ನಮಗೆ ಇಂದು ಮುಳುವಾಗಿದೆಯಾ? ನೆಲ, ಜಲ, ಭಾಷೆ, ಅನುದಾನ ಸೇರಿ ಪ್ರತಿ ವಿಷಯದಲ್ಲೂ ಕನ್ನಡಿಗರು ಮಲತಾಯಿ ಮಕ್ಕಳಾಗಿದ್ದಾರೆ!! ಇನ್ನೆಷ್ಟು ದಿನ ಈ ಅನ್ಯಾಯ?..” ಎಂದು ಹೆಚ್‌ಡಿಕೆ ಆಕ್ರೋಶಭರಿತರಾಗಿ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಇನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮಹಾರಾಷ್ಟ್ರದ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ರಾಜ್ಯದ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡಿರುವ ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದ್ದು ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಆದೇಶವನ್ನು ತಕ್ಷಣ ವಾಪಸ್ ಪಡೆಯದೆ ಇದ್ದರೆ, ಮಹಾರಾಷ್ಟ್ರ ಸರ್ಕಾರ ಸೂಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಇದೇ ವೇಳೆ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ನಡೆ ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಪದೇ ಪದೇ ವಿವಿಧ ರೂಪದಲ್ಲಿ ಗಡಿ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಒಗ್ಗಟ್ಟು ಕಂಡುಬಂದಿದೆ.