ರಾಜಕೀಯರಾಜ್ಯ

ರಾಜ್ಯ ವಿಧಾನಸಭೆ ಚುನಾವಣೆಗೆ ಶಿಗ್ಗಾವಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪರ್ಧೆ

Chief Minister Basavaraja Bommai contests from Shiggavi for the state assembly elections

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ ಪಕ್ಷವು ಶಿಗ್ಗಾವಿ ಕ್ಷೇತ್ರದಿಂದ ಯಾರನ್ನು ಕಣಕ್ಕೆ ಇಳಿಸಲಿದೆ ಎನ್ನುವ ಕುತೂಹಲ ಮೂಡಿದೆ. ಬಿಜೆಪಿ ಮುಖ್ಯ ಚುನಾವಣಾ ಸಮಿತಿ (ಸಿಇಸಿ) ಸಭೆ ನಿನ್ನೆ ನಡೆದಿದ್ದು, ಸಭೆಯ ಬಳಿಕ “ನಾನು ನನ್ನ ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ” ಎಂದು ಖಚಿತಪಡಿಸಿದ್ದಾರೆ.

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,23,784 ಮತದಾರರಿದ್ದು, ಇವರಲ್ಲಿ ಪುರುಷರು 1,15,453, ಮಹಿಳೆಯರು 1,08,321 ಮತ್ತು ಇತರೆ 10 ಮತದಾರರಿದ್ದಾರೆ.

ಶಿಗ್ಗಾವಿ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರ ಕೋಟೆಯಾಗಿದ್ದು, ಕಳೆದ ಮೂರು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಅವರು ಗೆದ್ದಿದ್ದಾರೆ. ಈ ಬಾರಿಯೂ ಸಿಎಂ ಬೊಮ್ಮಾಯಿ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವುದರಿಂದ ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ ಪಕ್ಷವು ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಯೋಚನೆಯಲ್ಲಿದೆ. ವರದಿಗಳ ಪ್ರಕಾರ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಕಾಂಗ್ರೆಸ್‌ ಯೋಜಿಸುತ್ತಿದೆ.

ಶಿಗ್ಗಾವಿ ಕ್ಷೇತ್ರದಲ್ಲಿ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟ ನಡೆಸಿತ್ತು. ಅವರ ಹೋರಾಟಕ್ಕೆ ಮಣಿದು ರಾಜ್ಯ ಸರಕಾರವು ಮೀಸಲಾತಿ ಕಲ್ಪಿಸಿತ್ತು. ಈ ಹಿಂದೆ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೈಯದ್‌ ಅಜ್ಜಂಪೀರ್‌ ಖಾದ್ರಿ ವಿರುದ್ಧ ಬೊಮ್ಮಾಯಿ ಗೆಲುವು ಪಡೆದಿದ್ದಾರೆ. ಶಿಗ್ಗಾವಿ ಕ್ಷೇತ್ರದ ಟಿಕೆಟ್‌ಗಾಗಿ ಈಗಾಗಲೇ ಕಾಂಗ್ರೆಸ್‌ನಿಂದ ಹದಿನೈದು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

“ಬಿಜೆಪಿ ಮುಖ್ಯ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಕರ್ನಾಟಕ ಚುನಾವಣೆಯ 224 ಕ್ಷೇತ್ರಗಳ ಅಭ್ಯರ್ಥಿಗಳ ಒಟ್ಟಾರೆ ಪಟ್ಟಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಸೋಮವಾರ ಮತ್ತೆ ಸಭೆ ಸೇರಲಿದ್ದೇವೆ. ಅಂದೇ ಇಲ್ಲವೇ ಮರುದಿನ ಮೊದಲ ಪಟ್ಟಿ ಪ್ರಕಟಿಸಲಿದ್ದೇವೆ” ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ ಮತ್ತು ಸೋಮವಾರ ಅಥವಾ ಮಂಗಳವಾರ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು. ನಾನು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸುವೆ” ಎಂದು ಹೇಳಿದ್ದರು.

ನಿನ್ನೆ ದೆಹಲಿಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜಗತ್‌ ಪ್ರಕಾಶ್‌ ನಡ್ಡಾ ನೇತೃತ್ವದಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆದಿದೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌, ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್‌ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ಮತ್ತಿತರರು ಪಾಲ್ಗೊಂಡಿದ್ದಾರೆ

 

ಇದನ್ನೂ ಓದಿ...

Back to top button
>