
ಚೇತನ್ ಅವರ ವೀಸಾ ರದ್ದು ಮಾಡಿ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಕೇಂದ್ರದ ಈ ನಡೆಯನ್ನು ನಟ ಚೇತನ್ ಖಂಡಿಸಿದ್ದಾರೆ.
The central government has issued a notice canceling Chetan's visa. Actor Chetan has condemned this move of the Centre.
Chetan Ahimsa: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರ ಸಾಗರೋತ್ತರ ಭಾರತೀಯ ಪೌರತ್ವ (OCI) ಕಾರ್ಡ್ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ರದ್ದು ಹಿನ್ನೆಲೆಯ ನೋಟಿಸ್ ಅನ್ನು ಏ. 14ರಂದು ಚೇತನ್ ಸ್ವೀಕರಿಸಿದ್ದು, ಸರ್ಕಾರದ ವಿರುದ್ಧ ಕೊಂಚ ಗರಂ ಆಗಿದ್ದಾರೆ.
ಚೇತನ್ ಬಲಪಂಥೀಯ ರಾಜಕೀಯವನ್ನು ಟೀಕಿಸುವುದರ ಜತೆಗೆ ಹಿಂದುತ್ವದ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಸರಣಿ ಟ್ವಿಟ್‌ಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚೇತನ್ ವಿರುದ್ಧ ದೂರು ದಾಖಲಾಗಿದ್ದಷ್ಟೇ ಅಲ್ಲದೆ ಮಾರ್ಚ್ 21ರಂದು ಇವರ ಬಂಧನವಾಗಿತ್ತು.
ದೇಶದ್ರೋಹ ಕೆಲಸ ನಾನೇನು ಮಾಡಿದ್ದೇನೆ?
ಈ ಸಂಬಂಧ ಹಲವು ಮಾಧ್ಯಮಗಳ ಜತೆಗೆ ಮಾತನಾಡಿರುವ ಚೇತನ್, “ನನಗೆ ಸಾಗರೋತ್ತರ ಭಾರತೀಯ ಪೌರತ್ವ ನೀಡಿದ್ದಾರೆ. ಈ ವೀಸಾ ಮೂಲಕ ಮತದಾನ, ಚುನಾವಣೆಗೆ ಸ್ಪರ್ಧಿಸುವುದು, ಸರ್ಕಾರಿ ನೌಕರನಾಗಿ ಕೆಲಸ ಇವುಗಳನ್ನು ಬಿಟ್ಟು ಉಳಿದ ಹಕ್ಕುಗಳು ನನಗಿದೆ. ಆದರೆ, ಈ ಹಿಂದೆ ನೀವು ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗಿಯಾಗಿದ್ದೀರಾ ಎಂದು ಹತ್ತು ತಿಂಗಳ ಹಿಂದೆ ಅಂದರೆ 2022ರ ಜೂನ್ 8ರಂದು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ಬರುತ್ತಿದ್ದಂತೆ ಕೇಂದ್ರ ಗೃಹ ಇಲಾಖೆಗೆ ಹೋಗಿ ಸಂಬಂಧಿಸಿದ ದಾಖಲೆ ಸಲ್ಲಿಸಿ ಬಂದಿದ್ದೆ. ಅದಾಗಿ ಈಗ ಮತ್ತೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರೆಂದು ವೀಸಾ ರದ್ದು ನೋಟಿಸ್ ನೀಡಿದ್ದಾರೆ ಎಂದು ಚೇತನ್ ಹೇಳಿದ್ದಾರೆ.
“ಭಯದ ವಾತಾವರಣ ಸೃಷ್ಟಿಸಲು ಮತ್ತು ಸರ್ಕಾರವನ್ನು ಪ್ರಶ್ನಿಸುವವರಿಗೆ ಎಚ್ಚರಿಕೆ ನೀಡಲು ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಕಾರ್ಯಕರ್ತರನ್ನು ಮೌನಗೊಳಿಸಲು ಮತ್ತು ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ರಾಜ್ಯ ಮಟ್ಟದ ಲಾಬಿಗಳ ಬೆಂಬಲದೊಂದಿಗೆ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವುದು ನಿಜಕ್ಕೂ ವಿಪರ್ಯಾಸ ಎಂದಿದ್ದಾರೆ.
ಸರಣಿ ಟ್ವಿಟ್ ಮೂಲಕ ಹಲವು ವಿವಾದ
“ಇತ್ತೀಚಿನ ಸಂದರ್ಶನವೊಂದರಲ್ಲಿ, ತಿರುಪತಿ ಮೂಲತಃ ಬೌದ್ಧ ಮಂದಿರ ಎಂದು ನಾನು ಹೇಳಿದ್ದೇನೆ. ಕೆ ಜಮನದಾಸ್ ಅವರು ‘ತಿರುಪತಿ ಬಾಲಾಜಿ ಮೂಲತಃ ಬೌದ್ಧ ಮಂದಿರ’ (ಏಪ್ರಿಲ್ 14, 2001) ಎಂಬ ತಮ್ಮ ಪುಸ್ತಕದಲ್ಲಿ ಈ ಹೇಳಿಕೆಯನ್ನು ಮಾನ್ಯ ಮಾಡಿದ್ದಾರೆ. ಇತಿಹಾಸಕಾರರ ಪ್ರಕಾರ, ದೇವಾಲಯಗಳು ಎಂದಿಗೂ ವೈದಿಕ ಸಂಸ್ಥೆಗಳಾಗಿರಲಿಲ್ಲ. ಅವುಗಳನ್ನು ಬೌದ್ಧ ಧರ್ಮದಿಂದ ವಶಪಡಿಸಿಕೊಳ್ಳಲಾಗಿದೆ/ಆಕ್ರಮಣ ಮಾಡಲಾಗಿದೆ ಎಂದಿದ್ದಾರೆ.
ನ್ಯಾಶನಲ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಚೇತನ್ ಹೀಗೆ ಹೇಳಿಕೊಂಡಿದ್ದಾರೆ. “ನಮ್ಮ ರಾಜ್ಯದಲ್ಲಿ ಪರಿವರ್ತನೆಗೆ ಸೈದ್ಧಾಂತಿಕವಾಗಿ ವಿರೋಧ ಇದೆ. ಹಾಗಾಗಿ ನನಗೆ ಯಾವ ವ್ಯಕ್ತಿ ಮೇಲೆಯೂ ಕೋಪ ಇಲ್ಲ. ಅಂಕಿ ಅಂಶ ಇಟ್ಟುಕೊಂಡು ನಾನು ಸತ್ಯ ಹೇಳುತ್ತೇನೆ. ನಿಮಗೆ ಸತ್ಯ ಎಂದು ತೋರಿಸುವುದಾದರೆ ತೋರಿಸಿ, ರಾಮ ಈ ಕಾಲಘಟ್ಟದಲ್ಲಿದ್ದ, ಇಲ್ಲಿ ಹುಟ್ಟಿದ್ದಾನೆ ಎಂಬುದನ್ನು ತೋರಿಸಿ.. ನಿಮ್ಮ ಧಾರ್ಮಿಕ ನಂಬಿಕೆ ಸತ್ಯ ಇರಬಹುದು.. ಬೌದ್ಧಿಕ ಪ್ರಪಂಚದಲ್ಲಿ ಅದರ ಸಾಕ್ಷಿ ಇಲ್ಲ”
“1500ರ ವೈದಿಕ ಕಾಲಘಟ್ಟದಲ್ಲಿ ಹೋಮ ಹವನ ಇತ್ತು. ದೇವಸ್ಥಾನಗಳು, ಮಂದಿರ ಇರಲಿಲ್ಲ. ಬುದ್ಧ ಬಂದ ಮೇಲೆ, ಅಶೋಕನ ನಂತರ ಬೌದ್ಧ ಧರ್ಮ ಹರಡಿತು. ಮತ್ತೆ ಬ್ರಾಹ್ಮಣ್ಯ ವೈದಿಕ ಪರಂಪರೆ ಬಂದ ಬಳಿಕ 84 ಸಾವಿರ ಬುದ್ಧ ವಿಹಾರ ಒಡೆದುಹಾಕಿ, ಅವುಗಳನ್ನು ಹಿಂದೂ ದೇವಸ್ಥಾನ ಮಾಡಿದ್ದಾರೆ. ಈಗಿನ ತಿರುಪತಿ, ಕೇದಾರನಾಥ, ಪುರಿ ಜಗನ್ನಾಥ ದೇವಸ್ಥಾನಗಳು ಹಿಂದೆ ಬೌದ್ಧ ಮಂದಿರಗಳಾಗಿದ್ದವು. ಅವುಗಳನ್ನು ಒಡೆದು ದೇವಸ್ಥಾನ ನಿರ್ಮಾಣ ಮಾಡಲಾಗಿದೆ” ಎಂದಿದ್ದಾರೆ.