ಶಿಗ್ಗಾಂವಿ (ಹಾವೇರಿ) : ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections) ಸಮೀಪಿಸುತ್ತಿದ್ದು, ಕೇಂದ್ರ ಬಿಜೆಪಿ ನಾಯಕರು ರಾಜ್ಯದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇಂದು (ಏ.19) ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda in Shiggaon) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಶಿಗ್ಗಾಂವಿಯಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಜೆಪಿ ನಡ್ಡಾ ಹಾಗೂ ನಟ ಕಿಚ್ಚ ಸುದೀಪ್ ಭಾಗಿಯಾಗಿದ್ದರು. ಬಳಿಕ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಜೆಪಿ ನಡ್ಡಾ, “ಕಾಂಗ್ರೆಸ್ ಅಂದ್ರೆ ಕಮಿಷನ್, ಕರಪ್ಷನ್ (ಭ್ರಷ್ಟಾಚಾರ), ಕ್ರಿಮಿನಲೈಸೇಷನ್ (ಅಪರಾಧೀಕರಣ)” ಎಂದು ಹೇಳಿದರು.
“ಕರ್ನಾಟಕವು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತವಾಗಬಾರದು ಮತ್ತು ಅಭಿವೃದ್ಧಿಯ ಓಟದಲ್ಲಿ ಎಂದಿಗೂ ಹಿಂದೆ ಉಳಿಯಬಾರದು. ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಲು ನಾನು ಇಲ್ಲಿದ್ದೇನೆ ಎಂದರು. ‘ಕಮಲ’ವನ್ನು ಗೆಲ್ಲಿಸಿ, ಬಿಜೆಪಿಯನ್ನು ಗೆಲ್ಲಿಸಿ ಎಂದು ನಾನು ನಿಮ್ಮೆಲ್ಲರನ್ನು ಕೋರುತ್ತೇನೆ” ಎಂದರು.
“ಇಂದು ಮುಖ್ಯಮಂತ್ರಿ ಬೊಮ್ಮಾಯಿ ಸಲ್ಲಿಸಲಿರುವ ನಾಮಪತ್ರವು ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ವಿಧಾನವಾಗಿದೆ. ಇನ್ನು ಸ್ವಲ್ಪ ಸಮಯದ ನಂತರ ಬೊಮ್ಮಾಯಿ ಜೀ ಅವರು ವಿಧಾನಸಭೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ನಾಮಪತ್ರ ಕೇವಲ ಶಾಸಕರಿಗಷ್ಟೇ ಅಲ್ಲ, ಕರ್ನಾಟಕಕ್ಕೆ ನೀಡಿರುವ ನಿರ್ದೇಶನವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗವಾಗಿದೆ” ಎಂದು ನಡ್ಡಾ ಹೇಳಿದರು.
“ಇಲ್ಲಿನ ಜನಸಮೂಹದಲ್ಲಿರುವ ಉತ್ಸಾಹವು ಮುಂದಿನ ಐದು ವರ್ಷಗಳ ಕಾಲ ಬೊಮ್ಮಾಯಿ ಜೀ ಅವರನ್ನು ಮರಳಿ ಕರೆತರಲು ನೀವೆಲ್ಲರೂ ನಿರ್ಧರಿಸಿದ್ದೀರಿ ಎಂಬುದನ್ನು ತೋರಿಸುತ್ತದೆ. ಕರ್ನಾಟಕದ ಪ್ರತಿಯೊಂದು ಮೂಲೆಯಲ್ಲಿ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನೀವು ಬಿಜೆಪಿಗೆ ಮತ ಹಾಕಬೇಕು” ಎಂದು ಅವರು ಹೇಳಿದರು. .
“ಬಿಜೆಪಿ ನೇತೃತ್ವದ ಸರ್ಕಾರದ ಧ್ಯೇಯವಾಕ್ಯವೆಂದರೆ ಅಭಿವೃದ್ಧಿಯನ್ನು ಖಚಿತಪಡಿಸುವುದು. ಬಿಜೆಪಿಯ ನಾಯಕತ್ವದಲ್ಲಿ ಕರ್ನಾಟಕವು ಸಮೃದ್ಧಿಯತ್ತ ದಾಪುಗಾಲು ಹಾಕಿದೆ. ಸಮಾಜದ ಪ್ರತಿಯೊಂದು ವರ್ಗದ ಕಲ್ಯಾಣವನ್ನು ಖಾತ್ರಿಪಡಿಸುವದರಿಂದ ಹಿಡಿಡು ಇದು ದೇಶದ ಅಗ್ರ ಎಫ್‌ಡಿಐ (ವಿದೇಶಿ ನೇರ ಹೂಡಿಕೆ) ತಾಣವಾಗಿದೆ” ಎಂದು ಅವರು ಹೇಳಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಮೂರನೇ ಪಟ್ಟಿಯಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಒಟ್ಟು 222 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಪ್ರಧಾನಿ ಮೋದಿ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ಯೋಗಿ ಆದಿತ್ಯನಾಥ್, ನಿರ್ಮಲಾ ಸೀತಾರಾಮನ್ ಸೇರಿದಂತೆ 40 ಮಂದಿ ಬಿಜೆಪಿ ನಾಯಕರು ಪ್ರಚಾರಕ್ಕೆ ಧುಮುಕಲಿದ್ದಾರೆ.