ರಾಜಕೀಯರಾಜ್ಯ

ವರುಣಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ: ನಾ ಇಲ್ಲಿನ ಮಣ್ಣಿನ‌ ಮಗ ಎಂದ ಮಾಜಿ ಸಿಎಂ

Siddaramaiah, who filed his nomination as a Congress candidate from Varuna constituency: Former CM said that he is a son of the soil here.

ನಂಜನಗೂಡು: ಕರ್ನಾಟಕ ವಿಧಾನಸಭೆ ಚುನಾವಣೆಯ ಅತ್ಯಂತ ಚರ್ಚಿತ ಕ್ಷೇತ್ರಗಳಲ್ಲಿ ಒಂದಾದ ವರುಣಾ ಕ್ಷೇತ್ರದಿಂದ, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬೆಂಬಲಿಗರೊಂದಿಗೆ ನಂಜನಗೂಡಿನ ತಾಲೂಕು ಪಂಚಾಯಿತಿ ಕಚೇರಿಗೆ ಆಗಮಿಸಿದ ಸಿದ್ದರಾಮಯ್ಯ, ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ನಂಜನಗೂಡಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದು ಭವಿಷ್ಯ ನುಡಿದರು.

”ನಾನು ವರುಣಾ ಕ್ಷೇತ್ರದಲ್ಲಿ ಹುಟ್ಟಿ ಬೆಳೆದ, ಇಲ್ಲಿನ‌ ಮಣ್ಣಿನ‌ ಮಗ. ಇವ ನಮ್ಮವ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಈ ಹಿಂದೆ ವರುಣಾವನ್ನು ಪ್ರತಿನಿಧಿಸಿದಾಗೆಲ್ಲ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ದುಡಿದಿದ್ದೇನೆ. ನನ್ನ ಸಾಧನೆಗಳು ಇಲ್ಲಿನ ಜನರ ಬದುಕಿನಲ್ಲಿದೆ. ಹೀಗಾಗಿ ಈ ಬಾರಿ ನನ್ನ ಗೆಲುವು ಖಚಿತ ಎಂಬ ಭರವಸೆ ನನಗಿದೆ..” ಎಂದು ಸಿದ್ದರಾಮಯ್ಯ ಹೇಳಿದರು.

”ರಾಮನಗರ ಮೂಲದ, ಬೆಂಗಳೂರು ನಗರದಲ್ಲಿ ರಾಜಕೀಯ ಮಾಡಿಕೊಂಡಿದ್ದ ವಿ. ಸೋಮಣ್ಣನವರನ್ನು ಬಿಜೆಪಿ ಒತ್ತಾಯಪೂರ್ವಕವಾಗಿ ವರುಣಾಕ್ಕೆ ಕರೆತಂದು ಕಣಕ್ಕಿಳಿಸಿದೆ. ಬಿಜೆಪಿಯ ಹರಕೆಯ ಕುರಿ ಮತ್ತು ವರುಣಾದ ಮನೆ ಮಗನ ನಡುವಿನ ಚುನಾವಣೆ ಇದು. ಹಣಕ್ಕೆ ಮರುಳಾಗಿ ತಮ್ಮವರನ್ನು ಕೈಬಿಡುವವರಲ್ಲ ನನ್ನ ಜನ..” ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

”ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ರಾಜ್ಯದ ಜನ ರೋಸಿ ಹೋಗಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ಉಸಿರಾಡುವುದಕ್ಕೂ ಹಣ ನೀಡಬೇಕಾದ ಪರಿಸ್ಥಿತಿ ಬಂದರೆ ಅಚ್ಚರಿಯಿಲ್ಲ. ಹೀಗಾಗೀ ಈ ಭ್ರಷ್ಟ ಸರ್ಕಾವನ್ನು ಕಿತ್ತೆಸೆದು, ಅಭಿವೃದ್ಧಿ ಪರ ಮತ್ತು ಜನಪರ ಕಾಂಗ್ರೆಸ್‌ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್‌ ಈ ನಾಡಿನ ಅಭಿವೃದ್ಧಿಗಾಗಿ ಕಟಿಬದ್ಧವಾಗಿದೆ. ನಾವು ಬಿಡುಗಡೆ ಮಾಡಿರುವ ಗ್ಯಾರಂಟೀ ಭರವಸೆಗಳನ್ನು ಪಕ್ಷ ಅಧಿಕಾರಕ್ಕೆ ಬಂದ ಮರುಕ್ಷಣದಲ್ಲೇ ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಇದೇ ವೇಳೆ ಭರವಸೆ ನೀಡಿದರು.

ಇನ್ನು ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ವೇಳೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಪ್ರಮಾಣದ ಬೆಂಬಲಿಗರು ಹಾಜರಿದ್ದರು. ಮೆರವಣಿಗೆ ಮೂಲಕ ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ, ತಮ್ಮ ಹುಟ್ಟೂರಾದ ಸಿದ್ದರಾಮನ ಹುಂಡಿಯ ಸಿದ್ದರಾಮೇಶ್ವರ ದೇವಾಲಯ ಹಾಗೂ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ, ಸಿದ್ದರಾಮಯ್ಯ ಅವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದುಕೊಂಡರು.

ಒಟ್ಟಿನಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಿದ್ದರಾಮಯ್ಯ, ತಾವು ವರುಣಾದ ಮಣ್ಣಿನ ಮಗ ಎಂದು ಹೇಳುವ ಮೂಲಕ ತಮ್ಮ ಚುನಾವಣಾ ಪ್ರಚಾರದ ಮೊದಲ ದಾಳವನ್ನು ಉರುಳಿಸಿದ್ದಾರೆ ಎಂದು ಹೇಳಬಹುದು.

 

ಇದನ್ನೂ ಓದಿ...

Back to top button
>