ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ದಿನಗಣನೆ ಆರಂಭವಾಗಿದ್ದು, ರಾಜಕೀಯ ಚಟುವಟಿಕೆ ಬಿರುಸುಪಡೆದಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಕೊನೆಗೊಂಡಿದ್ದು, ಇಂದು ಚುನಾವಣಾಧಿಕಾರಿಗಳು ನಾಮಪತ್ರ ಪರಿಶೀಲನೆ ನಡೆಸಲಿದ್ದಾರೆ.ಕರ್ನಾಟಕ ವಿಧಾನಸಭಾ ಚುನಾವಣೆ- ಇಂದು ಈಗಾಗಲೇ ಕರ್ನಾಟಕದಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನಾಂಕ ಮುಕ್ತಾಯವಾಗಿದೆ.ಇಂದು ಬೆಳಗ್ಗೆ 11 ಗಂಟೆ ನಂತರ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಸಲಿದ್ದಾರೆ. ನಾಮಪತ್ರಗಳಲ್ಲಿ ದೋಷ ಕಂಡುಬಂದರೆ ಅಂತಹ ಅಭ್ಯರ್ಥಿಗಳ ಅರ್ಜಿ ತಿರಸ್ಕೃತವಾಗಲಿದೆ.
ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ಇಂದು ನಿರ್ಧಾರ
ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಚುನಾವಣಾ ಅಧಿಕಾರಿಗಳು ನಾಮಪತ್ರ ಪರಿಶೀಲನೆ ಮಾಡುವುದರಿಂದ ಡಿಕೆಶಿ ಆತಂಕದಲ್ಲಿದ್ದಾರೆ. ಡಿಕೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತಗೊಳ್ಳುವ ಸಾಧ್ಯತೆ ಇರುವುದರಿಂದ ಅವರ ಸಹೋದರ ಸಂಸದ ಡಿಕೆ ಸುರೇಶ್ ಅವರೂ ನಾಮಪತ್ರ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ 3,600 ಅಭ್ಯರ್ಥಿಗಳು 5,102 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ. ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗವು ಮಾರ್ಚ್ 29ರಂದು ಘೋಷಿಸಿತ್ತು. (ಏ 13ಕ್ಕೆ ಅಧಿಸೂಚನೆ ಹೊರಬಿತ್ತು. ಏ 20ಕ್ಕೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಏ 21ರಂದು ನಾಮಪತ್ರ ಪರಿಶೀಲನೆ, 24 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಪಕ್ಷಗಳ ಬಲಾಬಲ
ಕರ್ನಾಟಕದಲ್ಲಿ ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆಯ ಅವಧಿ ಮೇ 23ಕ್ಕೆ ಕೊನೆಯಾಗಲಿದೆ. ಪ್ರಸ್ತುತ ಬಿಜೆಪಿ 119, ಕಾಂಗ್ರೆಸ್ 75, ಜೆಡಿಎಸ್ 28 ಶಾಸಕ ಬಲ ಹೊಂದಿವೆ. ಬಿಜೆಪಿಯ ಉಮೇಶ್ ಕತ್ತಿ ಹಾಗೂ ಆನಂದ್ ಮಾಮನಿ ನಿಧನರಾದ ಹಿನ್ನೆಲೆಯಲ್ಲಿ 2 ಸ್ಥಾನಗಳು ಖಾಲಿಯಿವೆ. ಈ ಸ್ಥಾನಗಳಿಗೆ ಉಪ ಚುನಾವಣೆ ನಡೆದಿರಲಿಲ್ಲ.
5.24 ಕೋಟಿ ಮತದಾರರು
ಕರ್ನಾಟಕದಲ್ಲಿ ಈ ಬಾರಿ 5.24 ಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಈ ಪೈಕಿ 2.63 ಕೋಟಿ ಪುರುಷರು ಮತ್ತು 2.60 ಕೋಟಿ ಮಹಿಳೆಯರು. 100 ವರ್ಷ ದಾಟಿರುವ 16,976 ಮತದಾರರಿದ್ದರೆ, 18ರಿಂದ 19 ವರ್ಷದ ಯುವ ಮತದಾರರ ಸಂಖ್ಯೆ 9.58 ಲಕ್ಷ. 80 ವರ್ಷ ದಾಟಿದವರ ಸಂಖ್ಯೆಯೂ (12.15 ಲಕ್ಷ) ಗಣನೀಯ ಪ್ರಮಾಣದಲ್ಲಿದೆ.
ಬೇಕಾಬಿಟ್ಟಿ ವೆಚ್ಚಕ್ಕೆ ಕಡಿವಾಣ
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಅಭ್ಯರ್ಥಿಗೆ 40 ಲಕ್ಷ ರೂಪಾಯಿ ವೆಚ್ಚ ಮಿತಿ ಘೋಷಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 3.51 ಲಕ್ಷ ಸಿಬ್ಬಂದಿ ಶ್ರಮಿಸಲಿದ್ದಾರೆ. ವೆಚ್ಚದ ಪರಿಶೀಲನೆಗಾಗಿ 234 ವೆಚ್ಚ ವೀಕ್ಷಕರನ್ನು ಗುರುತಿಸಲಾಗಿದೆ.