ಸಿನಿಮಾಸಿನಿಮಾ ಸುದ್ದಿ

ದೇವತಾ ಮನುಷ್ಯ ‘ಅಣ್ಣಾವ್ರು’ ಸಿನಿಮಾಗಳು ನನಗೆ ಬಹಳ ಇಷ್ಟ; ಮಾಸ್ಟರ್‌ ಮಂಜುನಾಥ್‌

I like Devata Manshu 'Annavru' movies a lot; Master Manjunath

ಇದು ‘ನನ್ನಿಷ್ಟದ ರಾಜ್ ಸಿನಿಮಾ’ ವಿಶೇಷ ಸರಣಿ ಡಾ ರಾಜ್‌ಕುಮಾರ್ ಅವರ 94ನೇ ಜಯಂತಿ ಪ್ರಯುಕ್ತ ‘ಎಚ್‌ಟಿ ಕನ್ನಡ’ ಈ ಸರಣಿಯನ್ನು ಪ್ರಸ್ತುತ ಪಡಿಸುತ್ತಿದೆ. ನೀವು ಇಷ್ಟಪಡುವ ನಟ/ನಟಿಯರು ಕನ್ನಡಿಗರ ಪ್ರೀತಿಯ ‘ಅಣ್ಣಾವ್ರು’ ಅಭಿನಯದ ತಮ್ಮಿಷ್ಟದ ಚಿತ್ರಗಳನ್ನು ನೆನಪಿಸಿಕೊಳ್ಳಲಿದ್ದಾರೆ.

ಭಕ್ತ ಪ್ರಹ್ಲಾದ, ದೇವತಾ ಮನುಷ್ಯ ಸಿನಿಮಾಗಳು ನನಗೆ ಇಷ್ಟ
ಡಾ ರಾಜ್‌ಕುಮಾರ್‌ ಅವರು ಎಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಚಿತ್ರದಲ್ಲೂ ವಿಭಿನ್ನ ಪಾತ್ರ, ಅದ್ಭುತವಾಗಿ ಅಭಿನಯಿಸಿದ್ದಾರೆ. ಅದರಲ್ಲಿ ನನಗೆ ‘ಭಕ್ತ ಪ್ರಹ್ಲಾದ’ ಹಾಗೂ ‘ದೇವತಾ ಮನುಷ್ಯ’ ಸಿನಿಮಾಗಳೆಂದರೆ ಬಹಳ ಇಷ್ಟ. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅಪ್ಪು ಕೂಡಾ ಇರುವುದರಿಂದ ಅದೊಂದು ರೀತಿ ನನಗೆ ವಿಶೇಷ. ಚಿತ್ರದಲ್ಲಿ ರಾಜ್‌ಕುಮಾರ್‌ ಅವರ ಆ ಕ್ರೌರ್ಯತನದ ಅಭಿನಯ, ಡೈಲಾಗ್‌ ಡೆಲಿವರಿ, ಆ ಗಾಂಭೀರ್ಯವನ್ನು ನೋಡಲು ಚೆಂದ. ಮಗನ ಜೊತೆ ಅಭಿನಯಿಸುವಾಗ, ನೋಡಿದವರು ಒಂದು ಕ್ಷಣ ಗಾಬರಿ ಆಗುವಂತ ಮಟ್ಟಕ್ಕೆ ಅವರ ಪಾತ್ರ ಇಂಪಾಕ್ಟ್‌ ಆಗಿದೆ. ಅವರು ಅಷ್ಟು ತೂಕದ ಗದೆ ಹಿಡಿದುಕೊಂಡು ಕಿರೀಟ ಸೇರಿದಂತೆ ಇನ್ನಿತರ ಭಾರವಾದ ಆಭರಣಗಳನ್ನು ತೊಟ್ಟು ”ಎಲ್ಲಿರುವನು ನಿನ್ನ ಹರಿ?” ಎಂದು ಅಬ್ಬರಿಸುತ್ತಾ ಓಡಾಡುವ ದೃಶ್ಯವಂತೂ ವರ್ಣಿಸಲು ಸಾಧ್ಯವೇ ಇಲ್ಲ. ಆ ಪಾತ್ರದೊಳಗೆ ಅವರು ಪರಕಾಯ ಪ್ರವೇಶ ಮಾಡಿರುವುದು ತಿಳಿಯುತ್ತದೆ. ಅವರು ಪೌರಾಣಿಕ ಪಾತ್ರಗಳಲ್ಲಿ ನಟಿಸಿರುವ ಎಲ್ಲಾ ಸಿನಿಮಾಗಳು ನನಗೆ ಇಷ್ಟ. ಅವುಗಳಲ್ಲಿ ನನಗೆ ‘ಭಕ್ತ ಪ್ರಹ್ಲಾದ’ ಅಚ್ಚು ಮೆಚ್ಚಿನ ಸಿನಿಮಾ.ಹಾಗೇ ತಂದೆ-ಮಗಳ ಬಾಂಧವ್ಯದ ಕಥೆ ಇರುವ ‘ದೇವತಾ ಮನುಷ್ಯ’ ಸಿನಿಮಾ ಕೂಡಾ ನನಗೆ ಇಷ್ಟ. ಆ ಹಾಡಿನಲ್ಲಿ ಬರುವ ಹಾಲಲ್ಲಾದರೂ ಹಾಕು..ನೀರಲ್ಲಾದರೂ ಹಾಕು ಹಾಡು ನನ್ನ ಆಲ್‌ ಟೈಮ್‌ ಫೇವರೆಟ್‌ ಹಾಡು. ಸಂಗೀತ ಕಲಿಯದ, ಯಾವುದೇ ತರಬೇತಿ ಇಲ್ಲದ ಆ ಮಹಾನ್‌ ವ್ಯಕ್ತಿ ಹಾಡಿರುವ ಭಕ್ತಿಗೀತೆಯನ್ನು ಕೇಳುತ್ತಿದ್ದರೆ ಯಾರಿಗಾದರೂ ಕೈ ಮುಗಿಯಬೇಕು ಎನಿಸದೆ ಇರದು. ಆ ಸಿನಿಮಾದಲ್ಲಿ ಅವರ ಪ್ರತಿ ದೃಶ್ಯಗಳೂ, ಪ್ರತಿ ಶಾಟ್‌ಗಳು ನೋಡುವವರನ್ನು ಆಕರ್ಷಿಸುತ್ತದೆ. ಆ ಭಾವನಾತ್ಮಕ ದೃಶ್ಯಗಳು, ಪ್ರೀತಿಸಿದ ಹುಡುಗಿ ಸತ್ತಿರುವ ವಿಷಯ ತಿಳಿದಾಗ ನೋವನ್ನು ವ್ಯಕ್ತಪಡಿಸುವ ರೀತಿ.. ಅವರ ಅಭಿನಯವನ್ನು ವರ್ಣಿಸಲು ಸಾಧ್ಯವೇ ಇಲ್ಲ.

ಅವರು ಹಾಡಿರುವ ಎಲ್ಲಾ ಹಾಡುಗಳೂ ನನಗೆ ಅಚ್ಚುಮೆಚ್ಚು
ಜೀವನಚೈತ್ರ ಚಿತ್ರದ ನಾದಮಯ.. ಹಾಡಿಗೆ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಆ ಚಿತ್ರ ಹಾಗೂ ಹಾಡಿನಲ್ಲಿ ಅವರ ಅಭಿನಯವನ್ನು ಎಷ್ಟು ಹೊಗಳಿದರೂ ಸಾಲದು, ಅವರ ಸಿನಿಮಾಗಳನ್ನು ನೋಡುತ್ತಿದ್ದರೆ ಅದು ಆಕ್ಟಿಂಗ್‌ ಅಲ್ಲ, ಅವರು ನಿಜವಾಗಲೂ ಹಾಗೆ ವರ್ತಿಸುತ್ತಿದ್ದಾರೇನೋ ಅನ್ನಿಸುತ್ತದೆ. ‘ಮುರಿಯದ ಮನೆ’ ಚಿತ್ರದಲ್ಲಿ ಅವರು ಪಾರ್ಶ್ವವಾಯು ರೋಗಿಯಂತೆ ನಟಿಸಿದ್ದಾರೆ. ಮೊದಲಿನಿಂದ ಕೊನೆವರೆಗೂ ಅವರು ತಮ್ಮ ಎಡಕೈಯನ್ನು ಸ್ವಲ್ಪವೂ ಕದಲದಂತೆ ಹಿಡಿದಿರುತ್ತಾರೆ ಇದನ್ನು ನೋಡಿದವರಿಗೆ ಅವರು ಎಂತ ಅದ್ಭುತ ನಟ ಎನ್ನುವುದು ತಿಳಿಯುತ್ತದೆ. ‘ಬೇಡರ ಕಣ್ಣಪ್ಪ’ ಚಿತ್ರದಿಂದ ಹಿಡಿದು ‘ಶಬ್ಧವೇಧಿ’ವರೆಗೂ ಅವರು ಎಲ್ಲಾ ರೀತಿಯ ಪಾತ್ರಗಳಲ್ಲೂ ನಟಿಸಿದ್ದಾರೆ. ಆ ಎಲ್ಲಾ ಪಾತ್ರಗಳಿಗೂ ಅವರು ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.

ಅವರನ್ನು ಭೇಟಿ ಆಗಿದ್ದು ನನ್ನ ಭಾಗ್ಯ
ಅವರ ಸಿನಿಮಾಗಳಿಗಿಂತ ನನಗೆ ಅವರ ರಿಯಲ್‌ ಲೈಫ್‌ ನನಗೆ ಬಹಳ ಇಂಪಾಕ್ಟ್‌ ಆಗಿದೆ. ಸರಳ ವ್ಯಕ್ತಿತ್ವ, ನಗುಮೊಗ, ಶಾಂತ ಸ್ವಭಾವ, ಮತ್ತೊಬ್ಬರನ್ನು ಪ್ರೀತಿಯಿಂದ ಮಾತನಾಡಿಸುವ ರೀತಿ ಎಲ್ಲವೂ ನನಗೆ ಇಷ್ಟ. ಅಂತಹ ವ್ಯಕ್ತಿಯನ್ನು ನಾನು ಭೇಟಿ ಆಗಿದ್ದು, ಅವರೊಂದಿಗೆ ಮಾತನಾಡಿದ್ದು ನನ್ನ ಪುಣ್ಯ. ನನ್ನ ಸಿನಿಮಾಗಳನ್ನು ಕೂಡಾ ಅವರು ನೋಡಿದ್ದಾರೆ. ನನ್ನ ಸಿನಿಮಾ ದೃಶ್ಯಗಳ ಬಗ್ಗೆ ಅವರು ಮಾತನಾಡುವಾಗಲಂತೂ ನನಗೆ ಬಹಳ ಆಶ್ಚರ್ಯವಾಗುತ್ತಿತ್ತು. ನನ್ನಂಥ ಬಾಲಕಲಾವಿದನ ಸಿನಿಮಾವನ್ನು ಈ ಮೇರುನಟ ನೋಡುವುದು, ಅದನ್ನು ಹೊಗಳುವುದು ನಿಜಕ್ಕೂ ನನ್ನ ಪುಣ್ಯ. ಅವರು ಕಲೆಗೆ ದೇವರು. ಅವರ ‘ಭಕ್ತ ಕುಂಬಾರ’ ಸಿನಿಮಾ ನೋಡಿದಾಗ ನಾನಿನ್ನೂ ಚಿಕ್ಕ ಹುಡುಗ. ಅವರು ಭಕ್ತಿಯಿಂದ ಮಣ್ಣು ತುಳಿಯುತ್ತಾ, ಮೈ ಮರೆತು ಮಗುವನ್ನು ತುಳಿಯುವ ದೃಶ್ಯ ನೋಡಿ ಶಾಕ್‌ ಆಗಿದ್ದೆ. ಅದು ನನಗಿನ್ನೂ ಚೆನ್ನಾಗಿ ನೆನಪಿದೆ.

ಯಾರೊಂದಿಗೂ ಮನಸ್ತಾಪ ಮಾಡಿಕೊಂಡವರಲ್ಲ
ಅಣ್ಣಾವ್ರು ತಾವಾಯಿತು ತಮ್ಮ ಕೆಲಸ ಆಯ್ತು ಅಂತ ಇದ್ದವರು. ಯಾವುದೇ ವಿವಾದಕ್ಕಾಗಲೀ, ಯಾವುದೇ ಗಲಾಟೆ ಮಾಡಿಕೊಂಡವರಲ್ಲ. ಈಗಿನಂತೆ ಆಗ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆಗ ಬಹಳ ಶಿಸ್ತು ಇತ್ತು. ಎಷ್ಟೇ ದೊಡ್ಡ ನಾಯಕ, ನಾಯಕಿ, ತಂತ್ರಜ್ಞರಾದರೂ ಎಲ್ಲರ ನಡುವೆ ಬಹಳ ಬಾಂಧವ್ಯ ಇತ್ತು. ತಮ್ಮ ವೃತ್ತಿ ಜೀವನದಲ್ಲಿ ಅವರು ಪಂಡರಿಬಾಯಿ, ಭಾರತಿ, ಆರತಿ, ಲೀಲಾವತಿ, ಸರಿತಾ, ಮಾಧವಿ, ಗೀತಾ, ಅಂಬಿಕಾ, ಜಯಪ್ರದ ಸೇರಿದಂತೆ ಬಹುತೇಕ ಎಲ್ಲಾ ನಟಿಯರೊಂದಿಗೆ ನಟಿಸಿದ್ದಾರೆ. ಅವರೊಂದಿಗೆ ಯಾವ ನಾಯಕಿ ನಟಿಸಿದರೂ ಆ ಜೋಡಿ ನನಗೆ ಇಷ್ಟವಾಗುತ್ತಿತ್ತು.ವರನಟ ಡಾ. ರಾಜ್‌ಕುಮಾರ್‌ ಎಂಬ ಹೆಸರು ಕೇಳುತ್ತಿದ್ದರೆ ನನಗೆ ತಕ್ಷಣ ನೆನಪಾಗುವುದೇ ಅವರ ಸರಳತೆ. ಒಟ್ಟಿನಲ್ಲಿ ಅವರು ನನ್ನ ಪಾಲಿಗಂತೂ ದೇವರಂಥಾ ಮನುಷ್ಯ.

 

 

ಇದನ್ನೂ ಓದಿ...

Back to top button
>