ರಾಜಕೀಯರಾಜ್ಯ

ನನ್ನ ಹತ್ಯೆಯಾದರೆ ಅದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರೇ ಹೊಣೆ; ಮುಖಂಡ ಸತ್ಯಜಿತ್ ಸುರತ್ಕಲ್‌ ನೇರ ಆರೋಪ

BJP state president will be responsible if I am killed; Leader Satyajit Surathkal direct accusation

ಮಂಗಳೂರು: ಚುನಾವಣಾ ನೆಪವೊಡ್ಡಿ ತನ್ನ ಭದ್ರತಾ ಸಿಬ್ಬಂದಿ ಹಾಗೂ ವೈಯುಕ್ತಿಕ ರಿವಾಲ್ವರ್ ಅನ್ನು ಪೊಲೀಸ್ ಇಲಾಖೆ ಹಿಂಪಡೆದಿರುವ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರ ನೇರ ಕೈವಾಡವಿದೆ ಎಂದು ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಆರೋಪಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಸ್ಮಾತ್ ದುಷ್ಕರ್ಮಿಗಳ ಕೈಗೆ ಬಲಿಯಾಗುವ ಸ್ಥಿತಿ ಬಂದರೆ, ಅದಕ್ಕೆ ನೇರ ಕಾರಣ ರಾಜ್ಯಾಧ್ಯಕ್ಷ ಮತ್ತವರ ತಂಡ, ದುಡ್ಡುಕೊಟ್ಟು ಗನ್ ಮ್ಯಾನ್ ತೆಗೆದುಕೊಳ್ಳಬೇಕು ಎಂದು ನಿರ್ಣಯ ತೆಗೆದುಕೊಳ್ಳುವ ಸಮಿತಿ ನೇರ ಹೊಣೆಗಾರರು ಎಂದು ಸತ್ಯಜಿತ್‌ ಎಚ್ಚರಿಸಿದ್ದಾರೆ.

ಅಕಸ್ಮಾತ್ ನನ್ನ ಹತ್ಯೆ ನಡೆದರೆ, ಸಂಘಪರಿವಾರದ ಮುಖಂಡರು ಯಾವುದೇ ಕಾರಣಕ್ಕೂ ನನ್ನ ಶವದರ್ಶನಕ್ಕೂ ಬರಬಾರದು. ಅದಕ್ಕೆ ಅವಕಾಶ ಇಲ್ಲ. ಎಲ್ಲವನ್ನೂ ಸ್ವೀಕಾರ ಮಾಡುವ ಮನೋಸ್ಥಿತಿ ಇದೆ. ಇದನ್ನೂ ಎದುರಿಸುತ್ತೇವೆ ಎಂದು ಅವರು ಹೇಳಿದರು.

ಮೂಲಭೂತವಾದಿಗಳ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕಳೆದ 16 ವರ್ಷಗಳ ಹಿಂದೆ ಸರಕಾರವೇ ಗನ್ ಮ್ಯಾನ್ ಒದಗಿಸಿತ್ತು. ವೈಯಕ್ತಿಕ ರಿವಾಲ್ವರ್ ಅನ್ನು ನೀಡಲಾಗಿತ್ತು. ಆದರೆ ಇಷ್ಟರವರೆಗೆ ಹಿಂಪಡೆಯದ ಭದ್ರತಾ ವ್ಯವಸ್ಥೆ ಹಾಗೂ ರಿವಾಲ್ವರ್ ಅನ್ನು ಈ ಬಾರಿ ಹಿಂಪಡೆಯಲಾಗಿದೆ. ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತರ ಮಾಡಲಾಗಿದೆ. ಗೃಹ ಸಚಿವರವರೆಗೆ ಮನವಿ ಸಲ್ಲಿಸಿದರೂ ಅದಕ್ಕೆ ಬೆಲೆ ಕೊಡದೆ, ಅವರೆಲ್ಲ ಮೇಲೆ ಒತ್ತಡ ಹಾಕಿ ಪೊಲೀಸ್ ಭದ್ರತೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ.

ನಳಿನ್‌ಗೆ ಕಾರ್ಯಕರ್ತರಿಂದ ಬೆದರಿಕೆ; ಸತ್ಯಜಿತ್‌ ವ್ಯಂಗ್ಯ
ಇಂದು ತನಗೆ ಕಾರ್ಯಕರ್ತರಿಂದ ಬೆದರಿಕೆಯಿದೆ, ಕಾರ್ಯಕರ್ತರು ವಾಹನ ಹಿಡಿದು ಅಲ್ಲಾಡಿಸಿದ್ದಕ್ಕೆ ಪೊಲೀಸ್ ಭದ್ರತೆ ವ್ಯವಸ್ಥೆ ಬೇಕು ಎಂದು ಭದ್ರತೆ ಪಡೆದುಕೊಂಡವರು ಇದ್ದಾರೆ. ಕಾರ್ಯಕರ್ತರಿಂದ ಬೆದರಿಕೆ ಬಂದ ವ್ಯಕ್ತಿ ಹತ್ತು ಹನ್ನೆರಡು ಪೊಲೀಸರೊಂದಿಗೆ ತಿರುಗಾಡುವ ಪರಿಸ್ಥಿತಿ ಇದೆ. ಕಾರ್ಯಕರ್ತರು ಕಾರು ಅಲ್ಲಾಡಿಸುತ್ತಾರೆ ಎಂದು ಭದ್ರತೆ ಪಡೆದುಕೊಳ್ಳುತ್ತಾರೆ ಎಂದು ನಳಿನ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದರು.

ಹಿಂದೂ ಸಂಘಟನೆಯಲ್ಲಿರುವವರು ರಾಜ್ಯಾಧ್ಯಕ್ಷರ ನಿರ್ಣಯದ ವಿರುದ್ಧ ಸ್ವರ ಎತ್ತಬಾರದೆಂಬ ಹಿನ್ನೆಲೆಯಲ್ಲಿ ಪ್ರಮುಖರನ್ನು ಟಾರ್ಗೆಟ್ ಮಾಡಲಾಗುತ್ತದೆ. ಈ ಮೂಲಕ ಸಾಮಾನ್ಯ ಕಾರ್ಯಕರ್ತರನ್ನು ಮೌನವಾಗಿಸುವ ಷಡ್ಯಂತ್ರ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ತನ್ನ ಬಾಯಿ ಮುಚ್ಚಿಸುವ ಯತ್ನ ನಡೆದಿದೆ. ಯಾವುದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಪ್ರಾಣಭಯವನ್ನು ಒಡ್ಡುವ ಮೂಲಕ ಪರೋಕ್ಷವಾಗಿ ಬಾಯಿ ಮುಚ್ಚಿಸಲಾಗುತ್ತದೆ.

ಭದ್ರತೆ ವಾಪಸ್ ತೆಗೆಯಲು ನಿರ್ಣಯ ತೆಗೆದುಕೊಂಡಿರುವ ವಿಚಾರವನ್ನು ಡಾ. ಕಲ್ಲಡ್ಕ ಪ್ರಭಾಕರ ಭಟ್, ಬಿಜೆಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅವರ ಗಮನಕ್ಕೂ ತಂದಿದ್ದೆ. ಪಕ್ಷದಲ್ಲಿ ಭಾರೀ ಆತ್ಮೀಯರು ಎಂದು ಹೇಳಲಾದವರ ಮೂಲಕವೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಮನಕ್ಕೆ ಈ ವಿಚಾರ ತಂದಿದ್ದೆ. ಅವರೆಲ್ಲರೂ ನಾವು ಹೇಳಿದ್ದೇವೆ ಎಂದರು. ಚುನಾವಣಾ ಘೋಷಣೆಯಾದ ನಂತರ, ಭದ್ರತಾ ಸಿಬ್ಬಂದಿಗೆ ಕರೆ ಬರುತ್ತದೆ, ನನ್ನ ಭದ್ರತೆ ವಾಪಸ್ ಪಡೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಮಾಧ್ಯಮದ ಮುಂದೆ ನಾನು ಬಂದಿದ್ದೇನೆ ಎಂದು ತಿಳಿಸಿದರು.

ಟಾರ್ಗೆಟ್ ಹತ್ಯೆಯ ಗುರಿಯಾಗಿದ್ದೆ…
ಅಕಸ್ಮಾತ್ ನನ್ನ ಜೀವಕ್ಕೆ ಅಪಾಯ ಬಂದಿದ್ದರೆ, ನನ್ನ ವೈಯಕ್ತಿಕ ಕಾರಣದಿಂದಲ್ಲ ಎಂದ ಅವರು, ಯಾರೋ ಹೇಳುತ್ತಾರೆ ಎಂದು ಸಂಘಟನೆಗಳಿಗೆ ಧುಮುಕಬೇಡಿ ಎಂದು ಯುವಕರಿಗೆ ಕಿವಿಮಾತು ಹೇಳಿದರು. ನಾನು ಈಗ ಟಾರ್ಗೆಟ್ ಹತ್ಯೆಯ ʻಗುರಿʼ ಆಗಿದ್ದೇನೆ.

ನನ್ನ ಇಡೀ ಜೀವನದಲ್ಲಿ ಸಂಘಟನೆಯ ಮೂಲಕ ರಾಷ್ಟ್ರವಿರೋಧಿ ಕೃತ್ಯದ ವಿರುದ್ಧ ಹೋರಾಡಿದ್ದೆ. ಅನೇಕ ಹತ್ಯೆಗಳು ಆದಾಗ ಕಾರ್ಯಕರ್ತರ ಮನೆಗೆ ತೆರಳುತ್ತಿದ್ದೆ, ಕೋರ್ಟು, ಕಾನೂನು ಗಳನ್ನು ನಿಂತು ಮಾಡಿಕೊಂಡು ಬಂದಿದ್ದೆ. ಹಿಂದುತ್ವದ ಹೋರಾಟ ಹೀಗಾದರೆ, ಇನ್ನೊಂದೆಡೆ ನಕ್ಸಲರ ವಿರುದ್ಧ ಹೋರಾಟದ ಸಂದರ್ಭ ಸಂಘಟನೆ ಕಡೆಯಿಂದ ಮುಂಚೂಣಿಯಲ್ಲಿದ್ದು ಹೋರಾಟ ಮಾಡಿದ್ದೆ.

ಶೃಂಗೇರಿಯಲ್ಲಿ ನಕ್ಸಲ್ ವಿರುದ್ಧ ಹೋರಾಟ ಸಂದರ್ಭ ಹಿಂದು ಜಾಗರಣಾ ವೇದಿಕೆಯಲ್ಲಿ ನಾನಿದ್ದೆ. ಕೊಪ್ಪದ ಬಸ್ ನಿಲ್ದಾಣದಲ್ಲಿ ನಿಂತು ನಕ್ಸಲರ ವಿರುದ್ಧ ಮಾತಾಡಿದ್ದೆ, ಬೇರಾವುದೇ ಪಕ್ಷದ ಪ್ರಮುಖರು ಎನಿಸಿಕೊಂಡವರು ಮಾತಾಡಿದವರಲ್ಲ. ವಿವಿಧ ನಕ್ಸಲ್ ಎನ್ ಕೌಂಟರ್ ಸಂದರ್ಭ ಸರಕಾರದ ವಿರುದ್ಧ ಪ್ರತಿಭಟನೆಗಳು ಆದಾಗ ಮಾಧ್ಯಮಗಳ ಸಮ್ಮುಖ ಮಾತನಾಡಿದ ಏಕೈಕ ವ್ಯಕ್ತಿ ನಾನು. ದೇರಳಕಟ್ಟೆ ವಿದ್ಯಾರ್ಥಿನಿ ಅತ್ಯಾಚಾರ ಸಂದರ್ಭ ದನಿಯೆತ್ತಿದ್ದೆ. ಈ ರೀತಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದೆ. ಇದರಿಂದ ಜೀವಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆ ಇವತ್ತಿನವರೆಗೂ ಮುಂದುವರಿದಿತ್ತು ಎಂದು ಸತ್ಯಜಿತ್ ಹೇಳಿದರು.

ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಇದು…
ಹಿಂದುತ್ವಕ್ಕೋಸ್ಕರ ದುಡಿದು, ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿಗೆ ಹಿಂದುತ್ವದ ಸರಕಾರ ಇರುವ ಸರಕಾರದಿಂದ ರಕ್ಷಣೆ ದೊರಕುತ್ತಿಲ್ಲ ಎಂದು ದೂರಿದರು. ಇದೆಲ್ಲವನ್ನೂ ನೋಡಿದಾಗ ಹಿಂದು ಸಂಘಟನೆಯಲ್ಲಿರುವವರು ಯಾವುದೇ ಕಾರಣಕ್ಕೂ ಇವರ ಯಾವುದೇ ನಿರ್ಣಯದ ವಿರುದ್ಧ ಸ್ವರವನ್ನು ಎತ್ತಬಾರದು, ಪ್ರಮುಖರನ್ನು ಟಾರ್ಗೆಟ್ ಮಾಡಿ, ಮಾನಸಿಕ ಹಿಂಸೆಯನ್ನು ನೀಡಿ, ಉಳಿದ ಸಾಮಾನ್ಯ ಕಾರ್ಯಕರ್ತರು ಸುಮ್ಮನಿರಬೇಕು, ಇವರ ಸ್ವಾರ್ಥಕ್ಕೋಸ್ಕರ ಏನು ಮಾಡಿದರೂ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂಬಂತಿದೆ. ನನ್ನ ಬಾಯಿ ಮುಚ್ಚಿಸಲು ಎರಡುಮೂರು ವರ್ಷಗಳಲ್ಲಿ ಪ್ರಯತ್ನಗಳು ನಡೆದವು. ಯಾವತ್ತೂ ನಾವು ಜಗ್ಗಲಿಲ್ಲ. ಇವತ್ತು ಪರೋಕ್ಷವಾಗಿ ಪ್ರಾಣಭಯ ಒಡ್ಡುವ ಮುಖಾಂತರ ನನ್ನ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ. ಯಾವುದೇ ರೀತಿಯಲ್ಲಾದರೂ ಅದು ಹತ್ಯೆಯೇ ಆಗಬಹುದು, ಆ ರೀತಿಯಲ್ಲಾದರೂ ನನ್ನ ಬಾಯಿ ಮುಚ್ಚಿಸಲು ಹೊರಟಿದ್ದಾರೆ ಎಂದರು.

 

ಇದನ್ನೂ ಓದಿ...

Back to top button
>