ರಾಜ್ಯವಿಶೇಷಸಿನಿಮಾಸಿನಿಮಾ ಸುದ್ದಿ

ಇಂದು ಡಾ. ರಾಜ್‌ 94ನೇ ಜಯಂತಿ

Today Dr. Raj 94th Jayanti

ಏಪ್ರಿಲ್‌ 24, ಕನ್ನಡ ಚಿತ್ರರಂಗದ ವರನಟ, ಪದ್ಮಭೂಷಣ, ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು ಜನಿಸಿದ ದಿನ. ಡಾ. ರಾಜ್‌ಕುಮಾರ್‌ ಇಂದು ನಮ್ಮೊಂದಿಗೆ ಇದ್ದಿದ್ದರೆ ಅಭಿಮಾನಿಗಳೊಂದಿಗೆ ಅವರು 94ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ರಾಜ್‌ಕುಮಾರ್‌ ಅವರು ನಮ್ಮನ್ನು ಅಗಲಿ 17 ವರ್ಷಗಳಾದರೂ ಅಭಿಮಾನಿ ದೇವರುಗಳ ಜನಮಾನಸದಲ್ಲಿ ಚಿರಾಯುವಾಗಿರುತ್ತಾರೆ.

ಚಾಮರಾಜನಗರದ ಗಾಜನೂರು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ ಇಡೀ ಕರುನಾಡೇ ಆರಾಧಿಸುವ ದೇವತಾ ಮನುಷ್ಯನಾಗಿ ಹೆಸರು ಗಳಿಸಿದ ಅಣ್ಣಾವ್ರ ಸಿನಿಮಾಗಳು, ಜೀವನಶೈಲಿ ಅನೇಕ ಜನರಿಗೆ ಮಾದರಿಯಾಗಿದೆ. ರಾಜಣ್ಣನ ಕುಟುಂಬದ ಸದಸ್ಯರು, ಆತ್ಮೀಯರು ಅವರ ಜೀವನದ ಅನೇಕ ಸ್ವಾರಸ್ಯಕರ ಘಟನೆಗಳನ್ನು ಅನೇಕ ಸಂದರ್ಶನಗಳಲ್ಲಿ ಹೇಳಿದ್ಧಾರೆ. ಒಮ್ಮೆ ಕನ್ನಡ ಚಿತ್ರರಂಗದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರಿಗೆ ಪಾರ್ವತಮ್ಮ ರಾಜ್‌ಕುಮಾರ್‌ ನೀಡಿದ ಸಂದರ್ಶನದಲ್ಲಿ ಸ್ವಾರಸ್ಯಕರ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

”ಜೇಡರಬಲೆ ಸಿನಿಮಾ ರಿಲೀಸ್‌ ಆದ ಸಮಯದಲ್ಲಿ ಸುಮಾರು 25 ಕಾಲೇಜು ಹುಡುಗಿಯರು ನಮ್ಮ ಮನೆ ಬಳಿ ಬಂದರು. ಆಗ ನಾನು ಮನೆಯಲ್ಲೇ ಇದ್ದೆ. ರಾಜ್‌ಕುಮಾರ್‌ ಅವರನ್ನು ನೋಡಬೇಕು ಎಂದು ಹುಡುಗಿಯರು ಮನವಿ ಮಾಡಿದರು. ಅವರು ಮಲಗಿದ್ಧಾರೆ ಎಂದು ಹೇಳಿದೆ, ಮೇಡಂ ಅವರಿಗಾಗಿ ಬಂದಿದ್ದೇವೆ ದಯವಿಟ್ಟು ಅವಕಾಶ ಮಾಡಿಕೊಡಿ ಎಂದರು. ಸರಿ ಎಂದು ಹೇಳಿ ರಾಜ್‌ಕುಮಾರ್‌ ಅವರ ಬಳಿ ವಿಚಾರ ತಿಳಿಸಿದೆ. ಕಾಲೇಜು ಯುವತಿಯರನ್ನು ಭೇಟಿ ಮಾಡಲು ಅವರು ಹೊರಗೆ ಬಂದರು. ರಾಜ್‌ಕುಮಾರ್‌ ಅವ್ರನ್ನು ನೋಡುತ್ತಿದ್ದಂತೆ ಆ ಕಾಲೇಜು ಹುಡುಗಿಯರು ರಾಜ್‌ಕುಮಾರ್‌ ಅವರನ್ನು ನಾವೆಲ್ಲಾ ಬರಿ ಮೈಯಲ್ಲಿ ನೋಡಬೇಕು ಎಂದರು. ನೀವು ಹೆಣ್ಣುಮಕ್ಕಳಾಗಿ ಈ ರೀತಿ ಕೇಳಬಹುದಾ ಎಂದೆ. ಅದಕ್ಕೆ ಆ ಯುವತಿಯರು ಮೇಡಂ ದಯವಿಟ್ಟು ತಪ್ಪು ತಿಳಿಯಬೇಡಿ, ನಾವು ಬೇರೆ ಅರ್ಥದಲ್ಲಿ ಕೇಳಲಿಲ್ಲ ಎಂದರು. ಸರಿ ಎಂದು ನಾನು ಒಪ್ಪಿದೆ.”

”ರಾಜ್‌ಕುಮಾರ್‌ ಅವರಿಗೆ ಷರ್ಟ್‌ ತೆಗೆಯಲು ಹೇಳಿದೆ, ಅದು ಅವರಿಗೆ ಮುಜುಗರ ಆಯ್ತು. ಆ ಹುಡುಗಿಯರ ಮುಂದೆ ಹೇಗೆ ತೆಗೆಯಲಿ ಎಂದು ಕೇಳಿದರು. ಅಯ್ಯೋ ನಾನೇ ಒಪ್ಪಿದ್ದೇನೆ ನೀವೇಕೆ ಮುಜುಗರ ಪಡುತ್ತೀರಿ ? ತೆಗೆಯಿರಿ ಎಂದೆ, ನನ್ನ ಮಾತಿಗೆ ಒಪ್ಪಿ ಅವರು ಷರ್ಟ್‌ ತೆಗೆದರು. ಅವರ ದೇಹದ ಮೇಲೆ ನೀವೇನಾದರೂ ಪ್ರಭಂದ ಬರೆಯುತ್ತೀರಾ ಎಂದು ಆ ಹುಡುಗಿಯರನ್ನು ಪ್ರಶ್ನಿಸಿದೆ. ಹಾಗೇನಿಲ್ಲ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್‌ ಅಷ್ಟು ಚೆನ್ನಾಗಿ ಕಾಣುತ್ತಾರೆ, ಅವರು ನೋಡಲು ನಿಜವಾಗಲೂ ಅದೇ ರೀತಿ ಇದ್ದಾರಾ ಅಥವಾ ಸಿನಿಮಾಗಳಲ್ಲಿ ಏನಾದರೂ ಗಿಮಿಕ್ಸ್‌ ಮಾಡುತ್ತಾರಾ ಎಂಬ ಅನುಮಾನ ಇತ್ತು ಅಷ್ಟೇ, ನಮಗೆಲ್ಲಾ ಅವರು ಅಣ್ಣ ಇದ್ದಂತೆ ಎಂದು ಹೇಳಿ ಎಲ್ಲರೂ ಅಲ್ಲಿಂದ ಹೊರಟರು” ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

”ರಾಜ್‌ಕುಮಾರ್‌ ಅವರು ಎಲ್ಲಾ ಜನರನ್ನು ಸೆಳೆಯುತ್ತಿದ್ದರು. ಆಗೆಲ್ಲಾ ಅವರ ಪತ್ನಿ ಪಾತ್ರ ಮಾಡುವವರು ತಂಗಿ ಪಾತ್ರದಲ್ಲಿ ಹಾಗೂ ತಂಗಿ ಪಾತ್ರ ಮಾಡುವವರು ಪತ್ನಿ ಮಾತ್ರದಲ್ಲಿ ಮಾಡುತ್ತಿದ್ದರೆ ಸಿನಿಮಾ ಸಕ್ಸಸ್‌ ಆಗುತ್ತಿರಲಿಲ್ಲ. ಅವರು ಯಾವುದೇ ಚಿತ್ರದಲ್ಲಿ ಬೀಡಿ, ಸಿಗರೇಟು ಸೇದುವಂತಿರಲಿಲ್ಲ, ಡ್ರಿಂಕ್ಸ್‌ ಮಾಡುವಂತಿರಲಿಲ್ಲ, ಜನರು ಇದನ್ನು ಸ್ವೀಕರಿಸುತ್ತಿರಲಿಲ್ಲ. ಆದ್ದರಿಂದ ಕ್ರಮೇಣ ಅವರ ಸಿನಿಮಾ ಕಥೆಗಳನ್ನು ಆಯ್ಕೆ ಮಾಡಲು ನಮಗೆ ಬಹಳ ಕಷ್ಟವಾಗುತ್ತಿತ್ತು” ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಅವರು ಇದೇ ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಿಡಿಯೋ ಇಂಟರ್‌ನೈಟ್‌ನಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ...

Back to top button
>