ರಾಜಕೀಯರಾಜ್ಯ

ನಾಮಪತ್ರ ಹಿಂತೆಗೆದುಕೊಳ್ಳುವಿಕೆ ಅಂತ್ಯ, ಚುನಾವಣಾ ಕಣದಿಂದ ಹಿಂದೆ ಸರಿದ 517 ಅಭ್ಯರ್ಥಿಗಳು, ಇಲ್ಲಿದೆ ಅಂತಿಮ ಲೆಕ್ಕ

Withdrawal of nomination papers is over, 517 candidates have withdrawn from the fray, here is the final tally

ಬೆಂಗಳೂರು: ಮೇ 10ರಂದು ಕರ್ನಾಟಕದಲ್ಲಿ (Karnataka Election Date) ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ 517 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಅಂತಿಮವಾಗಿ 2,613 ಚುನಾವಣಾ ಕಣದಲ್ಲಿದ್ದು, ತಮ್ಮ ಚುನಾವಣಾ ಭವಿಷ್ಯವನ್ನು ಮತದಾರರ ಕೈಯಲ್ಲಿಟ್ಟಿದ್ದಾರೆ.

ಹಲವು ಪಕ್ಷಗಳು ಬಂಡಾಯದ ಬಿಸಿ ಅನುಭವಿಸುತ್ತಿದ್ದರೂ, ಒಟ್ಟು 517 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಚುನಾವಣಾ ಕಣದಲ್ಲಿರುವ 2,613 ಅಭ್ಯರ್ಥಿಗಳ ಪೈಕಿ 2,427 ಪುರುಷರು, 184 ಮಹಿಳೆಯರು ಮತ್ತು 2 ಇತರರು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.

ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ- ಬಿಜೆಪಿಯಿಂದ 224, ಕಾಂಗ್ರೆಸ್ 223 (ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷಕ್ಕೆ ಬೆಂಬಲ), ಜೆಡಿ (ಎಸ್)ನಿಂದ 207 , ಎಎಪಿಯಿಂದ 209 , ಬಿಎಸ್‌ಪಿಯಿಂದ 133, ಸಿಪಿಐ(ಎಂ)ನಿಂದ 4, ಜೆಡಿಯು ಪಕ್ಷದಿಂದ 8 ಮತ್ತು ಎನ್‌ಪಿಪಿ ಪಕ್ಷದಿಂದ 2 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

685 ನೋಂದಾಯಿತ ಗುರುತಿಸಲಾಗದ ರಾಜಕೀಯ ಪಕ್ಷಗಳಿಂದ (RUPP) 918 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 16 ಕ್ಷೇತ್ರಗಳಲ್ಲಿ 15 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ, ಇಂತಹ ಕ್ಷೇತ್ರಗಳಲ್ಲಿ ಮತದಾನದ ದಿನ ಎರಡು ಬ್ಯಾಲೆಟ್‌ ಯೂನಿಟ್‌ ಬಳಕೆ ಮಾಡಬೇಕಿದೆ.

ಆಯಾ ಪಕ್ಷಗಳಿಂದ ಟಿಕೆಟ್ ನಿರಾಕರಿಸಿದ್ದರಿಂದ ಅತೃಪ್ತರಾಗಿ ನಾಮಪತ್ರ ಸಲ್ಲಿಸಿದ್ದ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ರಾಜಕೀಯ ಪಕ್ಷಗಳು ಕೊನೆಯ ಕ್ಷಣದವರೆಗೂ ಪ್ರಯತ್ನ ನಡೆಸಿದ್ದವು.

ಈ ರೀತಿ ಅತೃಪ್ತರಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಮನವೊಲಿಕೆ ಕೆಲವು ಕಡೆಗಳಲ್ಲಿ ಯಶಸ್ವಿಯಾಗಿವೆ. ಆದರೆ, ಬಹುತೇಕ ಕಡೆ ಬಂಡಾಯ ಅಭ್ಯರ್ಥಿಗಳು ತಮ್ಮ ಪಟು ಸಡಿಲಿಸಿದೆ ಚುನಾವಣೆಯಲ್ಲಿ ಪಾಠ ಕಲಿಸಲು ಮುಂದಾಗಿದ್ದಾರೆ. ಇತರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೆಚ್ಚು ಬಂಡಾಯದ ಬಿಸಿ ತಟ್ಟಿದೆ.

 

ಇದನ್ನೂ ಓದಿ...

Back to top button
>