ಮೈಸೂರು: ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಿನ್ನೆ (ಏಪ್ರಿಲ್ 25) ಮೈಸೂರಿಗೆ ಭೇಟಿ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಂದಿಗೂ ಜನರ ನಂಬಿಕೆಯನ್ನು ಮುರಿದಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ʼನಿಮಗೆಲ್ಲಾ ಇಂದಿರಾಗಾಂಧಿ ಗೊತ್ತು, ಅವರ ವಿಶೇಷತೆ ಏನೂ ಎಂದರೆ ಅವರು ಎಂದಿಗೂ ಜನರ ವಿಶ್ವಾಸವನ್ನು ಮುರಿಯಲಿಲ್ಲ. ಇಂದು ನೀವು ನನ್ನನ್ನು ನಂಬಿದರೆ ಅದಕ್ಕೆ ಇಂದಿರಾಗಾಂಧಿ, ರಾಜೀವ್‌ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಕಾರಣ. ಅವರೆಲ್ಲರೂ ನಿಜವಾಗಿಯೂ ಜನರಿಗಾಗಿ ಕೆಲಸ ಮಾಡಿದ್ದಾರೆʼ ಎಂದಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಿಯಾಂಕಾ, ʼರಾಜ್ಯದ ಜನತೆ ಅವರ ಮಾತುಗಳಿಂದ ಪ್ರಭಾವಿತರಾಗದೆ ಮತ ಕೇಳುವ ನಾಯಕರ ಆತ್ಮಸಾಕ್ಷಿಯನ್ನು ನೋಡಬೇಕುʼ ಎಂದು ಮನವಿ ಮಾಡಿದರು.
ಪ್ರಧಾನಿಯ ಮಾತಿಗೆ ಅರ್ಥವಿಲ್ಲ
ʼಪ್ರಧಾನಿ ಇಲ್ಲಿಗೆ ಬಂದು ಪ್ರತಿಪಕ್ಷದ ನಾಯಕರು ಅವರ ಸಮಾಧಿ ತೋಡಲು ಬಯಸುತ್ತಾರೆ ಎಂದು ಹೇಳಿದ್ದರು. ಇದು ಯಾವ ರೀತಿಯ ಮಾತು? ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಧಾನಿಯ ಆರೋಗ್ಯ ಚೆನ್ನಾಗಿರಲಿ ಎಂದು ಬಯಸುತ್ತಾರೆ, ಹೊರತು ಅವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲʼ ಎಂದಿದ್ದಾರೆ.
ಕರ್ನಾಟಕದ ಜನರು ಯಾವುದೇ ನಾಯಕರ ಮಾತಿನ ಆಧಾರದ ಮೇಲೆ ಮತ ಹಾಕದೇ, ತಮ್ಮ ಆತ್ಮಸಾಕ್ಷಿಗೆ ಸರಿ ಎನ್ನಿಸುವ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಅವರು ಹೇಳಿದರು.
ನಂದಿನಿಯನ್ನು ಮುಳುಗಿಸುವ ಹುನ್ನಾರ
ಅಮುಲ್-ನಂದಿನಿ ವಿಷಯವನ್ನು ಪ್ರಸ್ತಾಪಿಸಿದ ಪ್ರಿಯಾಂಕಾ ʼನಂದಿನಿ ಕರ್ನಾಟಕ ಜನರದ್ದು. ಕರ್ನಾಟಕದಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಕಡಿಮೆ ಇದೆ ಎಂಬ ಕಾರಣ ಹೇಳಿ ಗುಜರಾತ್‌ನ ಅಮುಲ್ ಅನ್ನು ತರಲು ಹೊರಟಿದೆ ಬಿಜೆಪಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಇದ್ದಾಗ ಹಾಲು ಹೆಚ್ಚಾಗಿದೆ ಎಂದು ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಹಾಲು ಕೊಟ್ಟಿದ್ದೆವು. ಲೀಟರ್‌ಗೆ 5 ರೂಪಾಯಿಯಂತೆ ಸಬ್ಸಿಡಿ ಕೂಡ ನೀಡಿದ್ದೇವು. ಆದರೆ ಈ ಸರ್ಕಾರ ನಂದಿನಿಯನ್ನು ಮುಳುಗಿಸಿ ಅಮುಲ್ ಅನ್ನು ತರಲು ಹೊರಟಿದೆ. ಬಿಜೆಪಿ ಪ್ರತಿಯೊಂದು ವಿಷಯದಲ್ಲೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆʼ ಎಂದು ದೂರಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಯಾವುದೇ ರೀತಿಯ ಉಪಕಾರವಾಗುವಂತಹ ಕೆಲಸವನ್ನು ಮಾಡದೇ ಭ್ರಷ್ಟ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿರುವ ಇವರು ʼಕರ್ನಾಟಕ ಭ್ರಷ್ಟ ಸರ್ಕಾರ ನಡೆಸುತ್ತಿದ್ದು, ಜನರಿಗಾಗಿ ಏನನ್ನೂ ಮಾಡದ ಸರ್ಕಾರವಾಗಿದೆ. ಜನರಿಗಾಗಿ ಕೆಲಸ ಮಾಡುವ ಸರ್ಕಾರ ನಮಗೆ ಬೇಕು, ಬಿಜೆಪಿ ಕರ್ನಾಟಕದ ಜನರಿಗಾಗಿ ಯಾವುದೇ ಕೆಲಸ ಮಾಡಿಲ್ಲʼ ಎಂದು ದೂರಿದ್ದಾರೆ.