ಪ್ರಿಯಲಚ್ಛಿ sambramaprabha
ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲೀಗ ದೂರು ನೀಡುವ ಪರ್ವ ಆರಂಭವಾಗಿದ್ದು, ದ್ವೇಷ ಭಾಷಣದ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ದಾಖಲಿಸಿದೆ. ಇದೇ ವೇಳೆ ವರುಣ ಮತ್ತು ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ವಿರುದ್ಧವೂ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದ್ದಾರೆ.ʼʼ
ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿ. ಸೋಮಣ್ಣ, ನಾಮಪತ್ರ ವಾಪಸ್ ಪಡೆಯುವಂತೆ ಅದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೇಲೆ ಒತ್ತಡ ಹೇರಿದ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತಾದ ಆಡಿಯೋ ವೈರಲ್ ಆಗಿದ್ದು, ನಾಮಪತ್ರ ಹಿಂಪಡೆಯುವಂತೆ ಸೋಮಣ್ಣ ನನ್ನ ಮೇಲೆ ಒತ್ತಡ ಹೇರದ್ದರು ಎಂದು ಸ್ವತಃ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ(ಆಲುರು ಮಲ್ಲು) ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿಸ್ಪರ್ಧಿಗೆ ಆಮೀಷವೊಡ್ಡಿದ ಆರೋಪದ ಮೇಲೆ ವಿ. ಸೋಮಣ್ಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಕಾಂಗ್ರೆಸ್ ನಾಯಕರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದ ನಿಯೋಗ, ಹೈಗ್ರೌಂಡ್ ಪೊಲೀಸ್ ಠಾಣೆಗೆ ತೆರಳಿ ವಿ.ಸೋಮಣ್ಣ ದೂರು ದಾಖಲಿಸಿದೆ.
ದೂರಿನಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲುರು ಮಲ್ಲು) ಜೊತೆಗೆ ನಡೆಸಿದ ಸಂಭಾಷಣೆಯ ಮಾಹಿತಿಯನ್ನು ಕೂಡ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಎಲ್ಲರ ಹಕ್ಕಾಗಿದ್ದು, ಸೋಮಣ್ಣ ಅವರು ಜೆಡಿಎಸ್ ಅಭ್ಯರ್ಥಿಗೆ ಒತ್ತಡ ಹಾಕುವ ಮೂಲಕ, ಪ್ರಜಾಪ್ರಭುತ್ವದ ನೀತಿಗೆ ಪೆಟ್ಟು ನೀಡಿದ್ದಾರೆ ಎಂದು ಕಾಂಗ್ರೆಸ್ ಗುಡುಗಿದೆ.
ಮಲ್ಲಿಕಾರ್ಜುನ ಸ್ವಾಮಿಗೆ ದೂರವಾಣಿ ಕರೆ ಮಾಡಿದ್ದ ಸೋಮಣ್ಣ, ನಾಮಪತ್ರ ಹಿಂಪಡೆದರೆ 50 ಲಕ್ಷ ರೂ. ಹಣ ಹಾಗೂ ಗೂಟದ ಕಾರನ್ನು ನೀಡುವ ಆಶ್ವಾಸನೆ ನೀಡಿದ್ದಾರೆ. ಸೋಮಣ್ಣ ಅವರಿಂದ ತಮಗೆ ಕರೆ ಬಂದಿದ್ದನ್ನು ಸ್ವತಃ ಮಲ್ಲಿಕಾರ್ಜುನ ಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಇದು ಐಪಿಸಿ ಸೆಕ್ಷನ್ ( 171ಸಿ, 171 F) ಪ್ರಕಾರ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಸಚಿವ ಸೋಮಣ್ಣ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ವಿವಾದ ಏನು?
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ವಿ. ಸೋಮಣ್ಣ ಅವರು, ಅದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಎಂಬುವವರಿಗೆ ಫೋನ್ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು. ಅಲ್ಲದೇ ಹಣ ಸೇರಿದಂತೆ ಸಕಲ ರೀತಿಯ ನೆರವು ನೀಡುವುದಾಗಿಯೂ ಆಮೀಷವೊಡ್ಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾದ ಆಡಿಯೋ ಒಂದು ವೈರಲ್ ಕೂಡ ಆಗಿದೆ.ಈ ಆಡಿಯೋವನ್ನು ಟ್ವೀಟ್ ಮಾಡಿದ್ದ ಪ್ರತಿಪಕ್ಷ ಕಾಂಗ್ರೆಸ್, ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಕಸಿದುಕೊಳ್ಳುವ ಯತ್ನ ಇದು ಎಂದು ತೀವ್ರ ಆಕ್ರೋಶ ಹೊರಹಾಕಿತ್ತು. ಇದೀಗ ಕಾಂಗ್ರೆಸ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವಿ. ಸೋಮಣ್ಣ ವಿರುದ್ಧ ದೂರು ದಾಖಲಿಸಿದೆ.
ರಾಹುಲ್ ಗಾಂಧಿ ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ತಿರುಗಾಡಲಿ. ಅವರು ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಅವರು ಬಂದರೆ ನಮಗೆ ಲಾಭವೇ ಹೊರತು ಯಾವುದೇ ತೊಂದರೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.