ಪ್ರಿಯಲಚ್ಛಿ sambramaprabha
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು (ಏಪ್ರಿಲ್ 27, ಗುರುವಾರ) ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಮಾತಿನ ವೇಳೆ ಕಾಂಗ್ರೆಸ್ ಗ್ಯಾರಂಟಿ ಪ್ರನಾಳಿಕೆ ಕುರಿತು ಪ್ರಧಾನಿ ಪ್ರಸ್ತಾಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಕಾಂಗ್ರೆಸ್ ಯೋಜನೆಗಳ ಬಗ್ಗೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಮಾತನಾಡಿರುವುದು ತಮಗೆ ಖುಷಿ ತಂದಿದೆ ಎಂದಿದ್ದಾರೆ.
ವರ್ಚುವಲ್ ಸಂವಾದದ ವೇಳೆ ಮಾತನಾಡಿದ ಮೋದಿ, ಕಾಂಗ್ರೆಸ್ ಪಕ್ಷದ ಪ್ರನಾಳಿಕೆಯ ಪ್ರಮುಖ ಅಂಶವಾದ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಉಲ್ಲೇಖಿಸಿ ಟೀಕಿಸಿದ್ದರು. “ಕಾಂಗ್ರೆಸ್ ಎಂದರೆ ಸುಳ್ಳು ಭರವಸೆ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗ್ಯಾರಂಟಿ. ಯಾವ ಗ್ಯಾರಂಟಿಯನ್ನೂ ಕೊಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ನಿಜಾರ್ಥದಲ್ಲಿ ಅವರ ವಾರಂಟಿ ಕೂಡ ಮುಗಿದಿದೆ,” ಎಂದು ಟೀಕಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, “ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಪ್ರಧಾನಿಯವರ ಗಮನಕ್ಕೆ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆದರೆ ಪ್ರಧಾನಿಯವರು ಕಳೆದ ವರ್ಷ ಬಿಜೆಪಿ ನೀಡಿದ ಪ್ರಣಾಳಿಕೆಗಳತ್ತ ಒಮ್ಮೆ ಕಣ್ಣುಹಾಯಿಸಬೇಕು. ಅವರಿಗೆ ಅದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಗ್ಯಾರಂಟಿ ಬಿಜೆಪಿಯಂತಲ್ಲ. ಶೇ.95ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ 2014ರ ಮೊದಲು ಒಂದು ಮನೆ ನಿರ್ಮಾಣ ಆಗಬೇಕೆಂದರೆ ಕನಿಷ್ಠ 300 ದಿನಗಳು ಬೇಕಿತ್ತು. ಆದರೆ, ಬಿಜೆಪಿ ಬಂದ ಮೇಲೆ ಅದು 100 ದಿನಗಳಿಗೆ ಬಂದು ನಿಂತಿದೆ. ದೇಶದಲ್ಲಿ ಮೆಡಿಕಲ್ ಕಾಲೇಜಿಗಳ ಸಂಖ್ಯೆಯೂ ಹೆಚ್ಚಾಗಿರುವುದೇ ಅಭಿವೃದ್ಧಿಗೆ ಹಿಡಿದ ಕನ್ನಡಿ ಎಂದಿದ್ದಾರೆ.
ಕರ್ನಾಟಕದಲ್ಲಿ ಏಕೆ ಡಬಲ್ ಎಂಜಿನ್ ಸರ್ಕಾರ ಬೇಕು ಎಂಬ ವಿಚಾರದ ಬಗ್ಗೆಯೂ ಮಾತನಾಡಿದ ಮೋದಿ, ದೇಶದಲ್ಲಿ ಎಲ್ಲೆಲ್ಲಿ ಎಬಲ್ ಎಂಜಿನ್ ಸರ್ಕಾರಗಳು ಇವೆಯೋ ಅಲ್ಲಿ ಅಭಿವೃದ್ಧಿಯೇ ಮಾತನಾಡುತ್ತಿವೆ. ಡಬಲ್ ಇಂಜಿನ್ ಸರ್ಕಾರದ ಅರ್ಥ ಅಭಿವೃದ್ಧಿಯ ದುಪ್ಪಟ್ಟು ವೇಗ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳು ಇರುವಲ್ಲಿ, ಕಲ್ಯಾಣ ಯೋಜನೆಗಳು ವೇಗವಾಗಿ ಜಾರಿಗೆ ಬಂದಿವೆ. ಈ ಸಲವೂ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಿ, ರಾಜ್ಯದ ಅಭಿವೃದ್ಧಿಗೆ ಮತ ನೀಡಿ ಎಂದಿದ್ದಾರೆ.
ಕಾರ್ಯಕರ್ತರ ಜತೆ ನಡೆಸಿದ ಈ ಸಂವಾದದಲ್ಲಿ, ನಾನು ಸದಾ ನಿಮ್ಮೊಂದಿಗಿದ್ದೇನೆ. ಒಟ್ಟಿಗೆ ಕೈ ಕೈ ಜೋಡಿಸಿ ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಹುರುಪು ತುಂಬಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಸದಾ ಸಿದ್ಧ. ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯತ್ತ ಮುಖ ಮಾಡಿದೆ. ಮುಂದಿನ 25 ವರ್ಷಗಳ ಅಭಿವೃದ್ಧಿಯ ದೂರದೃಷ್ಟಿಯಿಂದ ಯುವ ತಂಡ ರೂಪಿಸಲಾಗುತ್ತಿದೆ. ಇದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದಿದ್ದಾರೆ.