ವರದಿ: ಪ್ರಿಯಲಚ್ಛಿ
ಗಂಗಾವತಿ: ಗಂಗಾವತಿಯ ಅಂಜನಾದ್ರಿ, ಅಯೋಧ್ಯೆ ರಾಮಮಂದಿರಗಳು ಉತ್ತರ ಹಾಗೂ ದಕ್ಷಿಣ ಭಾರತದ ನಡುವೆ ಬಾಂಧವ್ಯವನ್ನು ಬೆಸೆಯುತ್ತವೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.
ಭಾನುವಾರ ಗಂಗಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಉತ್ತರ ಭಾರತದ ಆಯೋಧ್ಯೆಯ ರಾಮಮಂದಿರ ಮತ್ತು ದಕ್ಷಿಣ ಭಾರತದ ಗಂಗಾವತಿಯ ಅಂಜನಾದ್ರಿಯ ಆಂಜನೇಯ ಈ ಎರಡೂ ಪವಿತ್ರ ಸ್ಥಳಗಳು ದೇಶವನ್ನು ಒಂದು ಮಾಡುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ಎಕ್ ಭಾರತ್ ಶ್ರೇಷ್ಠ ಭಾರತ್ ಎನ್ನುವ ಪರಿಕಲ್ಪನೆ ಸಾಕಾರಗೊಳಿಸಲು ಇವು ನೆರವಾಗಲಿವೆ ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ ಅವರಿಗೆ ಪಕ್ಷದ ವತಿಯಿಂದ ಆಂಜನೇಯನ ಭಾವಚಿತ್ರ ಮತ್ತು ಬೆಳ್ಳಿ ಗಧೆ ಉಡುಗೊರೆ ನೀಡಲಾಯಿತು.
ಬಳಿಕ ಮಾತನಾಡಿದ ಅವರು, ‘ಅಯೋಧ್ಯೆದಲ್ಲಿ ಶ್ರೀರಾಮಮಂದಿರ ಅಭಿವೃದ್ಧಿಯಾಗುತ್ತಿದೆ. ಕಿಷ್ಕೆಂಧ ಕ್ಷೇತ್ರವಾದ ಅಂಜನಾದ್ರಿ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಈಗಾಗಲೇ 120 ಕೋಟಿ ರೂ ಅನುದಾನ ನೀಡಿದೆ. ಆಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣವಾಗಲಿದೆ. ಅದರ ಉದ್ಘಾಟನೆಗೆ ನೀವೆಲ್ಲರೂ ಬರಬೇಕು. ನಿಮ್ಮ ಸ್ವಾಗತಕ್ಕಾಗಿ ಉತ್ಸಾಹದಿಂದ ಕಾಯುತ್ತಿರುತ್ತೇನೆ. ಅಂಜನಾದ್ರಿ ಹಾಗೂ ರಾಮನ ದರ್ಶನ ಸುಲಭವಾಗಿಸಲು ಗಂಗಾವತಿಯಿಂದ ಆಯೋಧ್ಯಕ್ಕೆ ಕೇಂದ್ರ ಸರ್ಕಾರ ರೈಲು ಸೌಲಭ್ಯ ಕಲ್ಪಿಸಲಿದೆ’ ಎಂದರು.
ಶ್ರೀರಾಮನ ಭಕ್ತ ಹುಟ್ಟಿದ ನಾಡು, ಆಂಜನೇಯನ ಭಕ್ತರ ನೆಲೆವೀಡು ಗಂಗಾವತಿ ಜನರಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿ ಆದಿತ್ಯನಾಥ ಮಾತು ಆರಂಭಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಮೊಳಗಿಸಿದರು. ಶಬರಿಯ ಹಣ್ಣು ತಿಂದ ರಾಮನ ಪುಣ್ಯ ಭೂಮಿ ಇದು. ಇಂಥ ಪುಣ್ಯಭೂಮಿಯಿಂದ ನೀವು ಆಯೋಧ್ಯೆಗೆ ಬಂದು ರಾಮನ ದರ್ಶನ ಮಾಡಬೇಕು. ಆಯೋಧ್ಯೆದಲ್ಲೂ ಬೃಹತ್ ಹನುಮನ ಮಂದಿರ ಇದೆ. ರಾಮಮಂದಿರ ನಿರ್ಮಾಣ ಕಾರ್ಯವು 2024ರ ಜನವರಿಯಲ್ಲಿ ಮುಗಿಯುತ್ತದೆ. ಹೊಸ ಅಯೋಧ್ಯೆ ದರ್ಶನ ನಿಮಗೆ ಸಿಗಲಿದೆ. ರಾಮನೇ ಇಲ್ಲವೆಂದು ಹೇಳುವವರೇ ಈಗ ರಾಮನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ಹಿಂದೂತ್ವದ ಮಂತ್ರ ಜಪಿಸಿದ ಅವರು ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದರು. ಡಬಲ್ ಎಂಜಿನ್ ಸರ್ಕಾರದಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದ ಸರ್ಕಾರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಮತ ನೀಡಿದರೆ ರಾಮನ ಭಕ್ತನ ಕ್ಷೇತ್ರ ವೇಗವಾಗಿ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್ ತುಷ್ಠೀಕರಣದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಸಶಕ್ತೀಕರಣ ಹಾಗೂ ಅಭಿವೃದ್ಧಿಗೆ ಒತ್ತು ಕೊಟ್ಟು ಆಡಳಿತ ನಡೆಸುತ್ತಿದೆ. ಆದರೆನಮ್ಮ ಡಬಲ್ ಎಂಜಿನ್ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಡೆಸುವ ಸರ್ಕಾರವಾಗಿದೆ. ಕೊರೊನಾ ಕಾಲದಲ್ಲಿ 200 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ. 4 ಕೋಟಿ ಜನರಿಗೆ ಪಿಎಂ ಆವಾಸ್ ಅಡಿಯಲ್ಲಿ ಮನೆ ನೀಡಿದ್ದೇವೆ. ಕಾಂಗ್ರೆಸ್ ರಿವರ್ಸ್ ಗೇರ್ ಆಗಿತ್ತು. ಟೀಂ ಇಂಡಿಯಾದ ಕ್ಯಾಪ್ಟನ್ ತರ ಮೋದಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಯುವ ಜನತೆ ಜೊತೆಗೆ ಭೇದ ಭಾವ ಮಾಡುತ್ತಿದೆ ಎಂದು ಆರೋಪಿಸಿದರು.
ತುಂಗಾ, ಕೃಷ್ಣ ನದಿ ಹರಿಯುವ ಹರಿದಾಸರ ನಾಡಿನ ಜನರಿಗೆ ನಮಸ್ಕಾರ ಎಂದು ಯೋಗಿ ಕನ್ನಡದಲ್ಲಿ ಭಾಷಣ ಆರಂಭಿಸಿದರು. ಇದು ಹರಿದಾಸರ ಭೂಮಿ ಭಾರತದ ಸನಾತನ ಧರ್ಮದ ಸಂದೇಶ ನಾಡಿನ ತುಂಬಾ ಹರಡಿದ್ದಾರೆ. ನಿಜಾಮರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ನಾಗರಿಕರಿಗೆ ನಮನ ಸಲ್ಲಿಸುತ್ತೇನೆ. ನಾನು ಅಯೋಧ್ಯೆ ಪುಣ್ಯ ಭೂಮಿಯಿಂದ ಇಲ್ಲಿಗೆ ಬಂದಿದ್ದೇನೆ. ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೆ ರಾಮ – ಹನುಮಂತ ಸಂಬಂಧ ಇದೆ. ನಾನು ಇವತ್ತು ಹನುಮಂತನ ಭೂಮಿಗೆ ಬಂದಿದ್ದಕ್ಕೆ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.