
ಧಾರಾವಾಹಿ, ವೆಬ್ ಸೀರಿಸ್ ಜೊತೆಗೆ ಸಿನಿಮಾ ನಿರ್ಮಾಣಕ್ಕೆ ಇಳಿದ ಶಿವ ರಾಜ್‌ಕುಮಾರ್ ಪುತ್ರಿ ನಿವೇದಿತಾ
Siva Rajkumar's daughter Nivedita, who has gone into film production along with serials and web series.
ವರದಿ: ಪ್ರಿಯಲಚ್ಛಿ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ತಾವೊಬ್ಬ ಸ್ಟಾರ್ ಆದರೂ ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈ ಯುವ ಪ್ರತಿಭೆಗಳಲ್ಲಿ ಅವರ ಪುತ್ರಿ ನಿವೇದಿತಾ ಕೂಡಾ ಇದ್ದಾರೆ. ಬಾಲನಟಿಯಾಗಿ ಅಪ್ಪನೊಂದಿಗೆ ಅಂಡಮಾನ್ ಚಿತ್ರದಲ್ಲಿ ನಟಿಸಿದ್ದ ನಿವೇದಿತಾ ಈಗ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಇದುವರೆಗೂ ವೆಬ್ ಸೀರೀಸ್, ಧಾರಾವಾಹಿಗಳನ್ನು ನಿರ್ಮಿಸಿರುವ ನಿವೇದಿತಾ ಶಿವರಾಜ್‌ಕುಮಾರ್ ಈಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಡಾ. ರಾಜ್‌ಕುಮಾರ್ ಕುಟುಂಬದ ಎಲ್ಲರಿಗೂ ಕಲೆ ರಕ್ತಗತವಾಗಿ ಬಂದಿದೆ. ಇಡೀ ಕುಟುಂಬವೇ ಕಲಾಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಅಂದು ಅಣ್ಣಾವ್ರು ತೆರೆ ಮೇಲೆ ರಾರಾಜಿಸುತ್ತಿದ್ದರೆ, ತೆರೆ ಹಿಂದೆ ಅವರ ಬೆನ್ನೆಲುಬಾಗಿ ನಿಂತಿದ್ದವರು ಅವರ ಪತ್ನಿ ಪಾರ್ವತಮ್ಮನವರು. ಪೂರ್ಣಿಮಾ ಎಂಟರ್‌ಪ್ರೈಸನ್ ಬ್ಯಾನರ್ ಅಡಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅದೇ ಲೆಗಸಿ ಈಗ ಮುಂದುವರೆದಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ಗೀತಾ ಶಿವರಾಜ್ ಕುಮಾರ್, ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ದುಡಿಯುತ್ತಿದ್ದಾರೆ. ಈಗ ಶಿವಣ್ಣನ ಎರಡನೇ ಪುತ್ರಿ ನಿವೇದಿತಾ ಶಿವ ರಾಜ್‌ಕುಮಾರ್ ಕೂಡಾ ತಮ್ಮ ಸ್ವಂತ ಬ್ಯಾನರ್ ಶ್ರೀ ಮುತ್ತು ಸಿನಿ ಸರ್ವಿಸ್ ಅಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಶ್ರೀ ಮುತ್ತು ಸಿನಿ ಸರ್ವಿಸ್, ನಿವೇದಿತಾ ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ವೇದಿಕೆ ನೀಡಲೆಂದು ಸೃಷ್ಟಿಯಾಗಿರುವ ನಿರ್ಮಾಣ ಸಂಸ್ಥೆ ಇದು. ಈ ಸಂಸ್ಥೆ ಮೂಲಕ ನಿವೇದಿತಾ ಈಗಾಗಲೇ ಒಂದು ಧಾರಾವಾಹಿ ಹಾಗೂ ಮೂರು ವೆಬ್ ಸೀರೀಸ್‌ಗಳನ್ನು ನಿರ್ಮಿಸಿದ್ದಾರೆ. ಈಗ ಇದೇ ಬ್ಯಾನರ್ ಅಡಿ ನಿವೇದಿತಾ ಶಿವರಾಜ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೊಂಬಿಸಿಲ ಕಿರಣಗಳಲ್ಲಿ ತಂಗಾಳಿಯೊಂದು ಮೂಡಿದೆ, ಹುಟ್ಟು ಸಾವಿನ ಸ್ವಾರಸ್ಯವನ್ನು ಅನ್ವೇಷಿಸಲು ಹೊರಟಿದೆ. ಒಂದು ಹೊಸ ಅಧ್ಯಾಯದೊಂದಿಗೆ ನಿಮ್ಮ ಮುಂದೆ ಎಂಬ ಪೋಸ್ಟರ್ ಮೂಲಕ ತಮ್ಮ ಹೊಸ ಹೆಜ್ಜೆಯ ಬಗ್ಗೆ ತಿಳಿಸಿದ್ದಾರೆ.
ನಿವೇದಿತಾ ಶಿವರಾಜ್ ಕುಮಾರ್ ಒಡೆತನದ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ಮೊದಲ ಸಿನಿಮಾಗೆ ವಂಶಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಂಶಿ, ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವುದು ಅಲ್ಲದೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪಿಆರ್‌ಕೆ ನಿರ್ಮಾಣ ಸಂಸ್ಥೆ ಅಡಿ ತಯಾರಾದ ಮಾಯಾ ಬಜಾರ್ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವ ಇವರಿಗೆ ಇದೆ. ಜೊತೆಗೆ ಐದು ಕಥೆಗಳ ಪೆಂಟಗನ್ ಸಿನಿಮಾದಲ್ಲಿ ಕೂಡಾ ವಂಶಿ ನಟಿಸಿದ್ದಾರೆ.
ಲೈಫ್ ಡ್ರಾಮಾ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಬಾನ ದಾರಿಯಲಿ ಸಿನಿಮಾ ಛಾಯಾಗ್ರಹಕ ಅಭಿಲಾಷ್ ಕಲ್ಲಟ್ಟಿ ಕ್ಯಾಮೆರಾ ಕೆಲಸ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಇದ್ದು, ರಘು ನಿಡುವಳ್ಳಿ ಸಂಭಾಷಣೆ ಇದೆ. ಜಯ್ ರಾಮ್ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ. ನಿವೇದಿತಾ ಶಿವರಾಜ್‌ಕುಮಾರ್ ಹಾಗೂ ವಂಶಿ ಅವರ ಹೊಸ ಜರ್ನಿಗೆ ಸಿನಿಪ್ರಿಯರು ಶುಭ ಹಾರೈಸುತ್ತಿದ್ದಾರೆ.