ವರದಿ: ಪ್ರಿಯಲಚ್ಛಿ
ಧಾರವಾಡ (ಕಲಘಟಗಿ): ನಾಗರಾಜ ಛಬ್ಬಿಯ ಜನ ಶಕ್ತಿ ಹಾಗೂ ಎದುರಾಳಿಯ ಹಣ ಶಕ್ತಿಯ ನಡುವೆ ಸಂಘರ್ಷ ನಡೆಯುತ್ತಿದೆ. ಕಲಘಟಗಿ ಜನರು ಹಣಕ್ಕಾಗಿ ಮತ ಮಾರಾಟ ಮಾಡುವುದಿಲ್ಲ ಅಂತ ತೀರ್ಮಾನ ಮಾಡಿ. ಮೇ 10 ಕ್ಕೆ ಜನ ಶಕ್ತಿಯ ಎದುರು ಹಣ ಶಕ್ತಿ ಸೋಲಲಿದೆ ಅಂತ ತೋರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಲಘಟಗಿಯಲ್ಲಿ ಕ್ಷೇತ್ರದ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಪ್ರಚಾರ ನಡೆಸಿದ ಬಳಿಕ ಅವರು ಮಾತನಾಡಿದರು. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಚುನಾವಣೆ ಅಂತಿಮ ಘಟ್ಟ ತಲುಪಿದೆ. ಈ ಕ್ಷೇತ್ರದ ಜನರು ಅತ್ಯಂತ ಸಜ್ಜನರು. ಈ ಕ್ಷೇತ್ರದ ಜನರನ್ನು ಉಳಿಸಿ, ಬೆಳಿಸಿಕೊಂಡು ಹೋಗಬೇಕಿದೆ. ಕಳೆದ ಐದು ವರ್ಷ ನಮ್ಮ ಶಾಸಕರು ಉತ್ತಮ ಅಡಿಪಾಯ ಹಾಕಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಅಭಿವೃದ್ಧಿ ಮಾಡಬೇಕಿದೆ. ಆ ಕಾರಣಕ್ಕೆ ನಮ್ಮ ರಾಷ್ಟ್ರೀಯ ನಾಯಕರು ಅವರನ್ನು ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಕರೆತಂದು ಟಿಕೆಟ್ ಕೊಟ್ಟಿದ್ದಾರೆ. ನಾಗರಾಜ ಛಬ್ಬಿ ಆಯ್ಕೆಯಾದ ಮೇಲೆ ಇಲ್ಲಿನ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಬಿಜೆಪಿಗೆ ಯಾಕೆ ಬೆಂಬಲ ದೊರೆಯುತ್ತಿದೆ ಎಂದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ತುಷ್ಟೀಕರಣ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ರೈತನ ದುಸ್ಥಿತಿಯನ್ನು ಕೇಳುವವರಿರಲಿಲ್ಲ. ದುಡಿಯುವ ವರ್ಗ ನಿರಾಶರಾಗಿದ್ದರು. ವಿದ್ಯಾರ್ಥಿಗಳಿಗೆ ಕೆಲಸ ಸಿಗುವ ಭರವಸೆ ಇರಲಿಲ್ಲ. ಇವರು ಮಾತ್ರ ಭಾಗ್ಯದ ಮೇಲೆ ಭಾಗ್ಯ ಕೊಡುತ್ತ ಬಂದಿದ್ದಾರೆ ಎಂದು ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ.
ಅಕ್ಕಿ ಇವರು ಬಂದ ಮೇಲೆ ರೇಷನ್ ಕೊಟ್ಟಿದ್ದೇನೆ ಅನ್ನುವ ತರಹ ಹೇಳುತ್ತಿದ್ದಾರೆ. ಮೋದಿ ಅಕ್ಕಿಗೆ ಸಿದ್ದರಾಮಯ್ಯ ಅವರ ಖಾಲಿ ಚೀಲ ಮಾತ್ರ. ಸ್ವಾತಂತ್ರ್ಯ ಬಂದಾಗಿನಿಂದಲೂ ರೇಷನ್ ಕೊಡಲಾಗುತ್ತಿದೆ. ಈಗ ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಅಂತ ಹೇಳುತ್ತಿದ್ದಾರೆ ಎಂದು ಅಣಕಿಸಿದರು.
200 ಯೂನಿಟ್ ವಿದ್ಯುತ್ ಕೊಡುತ್ತೇನೆ ಅಂತ ಹೇಳುತ್ತಾರೆ. ಜನರು ಉಪಯೋಗ ಮಾಡುವುದೇ 75 ಯೂನಿಟ್ ಉಪಯೋಗ ಮಾಡುತ್ತಾರೆ. ಮೇ 10 ರವರೆಗೂ ಇವರ ಗ್ಯಾರಂಟಿ, ಆ ಮೇಲೆ ಗಳಗಂಟಿ. ರೈತರಿಗೆ ನೇರವಾಗಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 54 ಲಕ್ಷ ರೈತರಿಗೆ ನೇರವಾಗಿ ತಲುಪಲಿದೆ. ರೈತರ ಮಕ್ಕಳಿಗೆ ಕಿಸಾನ್ ಸಮ್ಮಾನ ಯೋಜನೆ ಜಾರಿಗೆ ತಂದಿದ್ದೇವೆ. ಎಸ್ಸಿ ಎಸ್ಟಿ, ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಆಂತರಿಕ ಮೀಸಲಾತಿ ಹೆಚ್ಚಳ ಮಾಡಿದ್ದೇನೆ ಎಂದು ತನ್ನ ಸರ್ಕಾರದ ಯೋಜನೆಗಳ ಕುರಿತು ವಿವರಿಸಿದರು.
ಕಾಂಗ್ರೆಸ್ ಪಕ್ಷವು ಎಸ್ಡಿಪಿಐ, ಪಿಎಫ್ ಐ ಜೊತೆ ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. ಬಜರಂಗದಳ ನಿಷೇಧ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಬಜರಂಗದಳ ದೇಶಾದ್ಯಂತ ಇರುವ ಸಂಘಟನೆ. ಅದನ್ನು ನಿಷೇಧ ಮಾಡುವ ಅಧಿಕಾರ ಇವರಿಗಿಲ್ಲ. ಈ ಬಾರಿ ಕಲಘಟಗಿಯಲ್ಲಿ ಜನ ಬಲ ಗೆಲ್ಲುವಂತೆ ಮಾಡಿ. ನಾಗರಾಜ ಛಬ್ಬಿಯವರನ್ನು ಗೆಲ್ಲಿಸಿಕೊಂಡು ಬನ್ನಿ. ಈ ಕ್ಷೇತ್ರಕ್ಕೆ ಬೇಕಾದ ಅನುದಾನ ನಾನು ಕೊಡುತ್ತೇನೆ ಎಂದು ಮತ್ತೊಮ್ಮೆ ತಾವೇ ಮುಖ್ಯಮಂತ್ರಿ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.