
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಅಹಂಕಾರದಿಂದ ಯಾರು ಏನೇ ಮಾತನಾಡಿದರೂ ಅದು ನಡೆಯದು. ಪ್ರಜಾಪ್ರಭುತ್ವದಲ್ಲಿ ಜನರ ನೋವನ್ನು ಅರ್ಥಮಾಡಿಕೊಂಡು ತಗ್ಗಿ ಬಗ್ಗಿ ನಡೆದುಕೊಂಡು ಜನಸೇವೆ ಮಾಡಿದರೆ ಮಾತ್ರವೇ ಸಫಲರಾಗುವುದು ಸಾಧ್ಯ. ಕಾಂಗ್ರೆಸ್ ಮುಕ್ತ ಭಾರತ ಅಂತ ಹೇಳುತ್ತಿದ್ದರು. ಆದರೆ ದಕ್ಷಿಣ ಭಾರತ ಮುಕ್ತ ಬಿಜೆಪಿ ಆಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಭರ್ಜರಿ ಗೆಲುವು ಬಳಿಕ ಕೆಪಿಸಿಸಿ ಕಚೇರಿಯಲ್ಲಿಂದು ನಡೆಯುತ್ತಿರುವ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕನ್ನಡಿಗರ ವಿಜಯವೇ ಹೊರತು, ವ್ಯಕ್ತಿಯ ವಿಜಯವಲ್ಲ. ಇದು ಸಾಮೂಹಿಕ ನಾಯಕತ್ವದ ಫಲ ಎಂದಿದ್ದಾರೆ.
ಎಲ್ಲರೂ ಬಿಡಿ ಬಿಡಿಯಾಗಿ ದೂರ ಇದ್ದಿದ್ದರೆ ಕಳೆದ ಚುನಾವಣೆಯ ಫಲಿತಾಂಶವೇ ಬರುತ್ತಿತ್ತು. ಕನ್ನಡಿಗರಿಗೆ ನಾನು ನಮಸ್ಕಾರ ಮಾಡ್ತೇನೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಸಂವಿಧಾನದ ರಕ್ಷಣೆಗಾಗಿ ಒಟ್ಟಾಗಿ ಬಂದು ಮತದಾನ ಮಾಡಿದ್ದಕ್ಕಾಗಿ ನಿಮ್ಮೆಲ್ಲರಿಗೆ ನಮಸ್ಕಾರ ಮಾಡುತ್ತೇನೆ. ಒಂದೊಮ್ಮೆ ಇದು ತಪ್ಪಿ ಹೋಗಿದ್ದರೆ ಡಿಕ್ಟೇಟರ್ ಶಿಪ್ ಆಗ್ತಿತ್ತು. ಜನರಿಗೆ, ಕನ್ನಡಿಗರಿಗೆ ಇದು ಅರ್ಥ ಆಗಿತ್ತು. ಡಿಕ್ಟೇಟರ್ ಶಿಪ್ ಬರಬಾರದು ಅಂಥಾನೇ ಮತದಾನ ಮಾಡಿ ಹೊಸ ಬೆಳಕು ತೋರಿದ್ದಾರೆ. ಇದಕ್ಕಾಗಿ ನಾನು ಕನ್ನಡಿಗರಿಗೆ, ಮತದಾರರಿಗೆ 100 ಸಲ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ 600 ಕಿ.ಮೀ. ಭಾರತ್ ಜೋಡೋ ಕೊಟ್ಟ ಫಲ ಇದು
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಫಲ ಇದು. ಯಾತ್ರೆ ಹೋದ ಪ್ರದೇಶದಲ್ಲೆಲ್ಲ ಪಕ್ಷ ಗೆಲುವು ಕಂಡಿದೆ. ಎಲ್ಲ ಟೀಕೆಗಳನ್ನು, ವಾಗ್ದಾಳಿಗಳನ್ನು ಎದುರಿಸಿದ ರಾಹುಲ್ ಗಾಂಧಿಯವರ ಪ್ರಯತ್ನವನ್ನು ಮರೆಯುವಂತಿಲ್ಲ. ಅದೇ ರೀತಿ ಸೋನಿಯಾ ಗಾಂಧಿ ಅವರು ಅನಾರೋಗ್ಯದಲ್ಲಿದ್ದರೂ, ಎಲ್ಲರ ಜತೆಗೆ ಸಂಪರ್ಕದಲ್ಲಿದ್ದು ಪಕ್ಷದ ಗೆಲುವಿಗೆ ಹುರಿದುಂಬಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ಕನ್ನಡಿಗರ ಜತೆಗೂಡಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಐತಿಹಾಸಿಕ. ಈ ಗೆಲುವಿನ ವಿಚಾರವನ್ನು ಪದೇಪದೆ ನಾವು ಹೇಳುತ್ತ ಬಂದಿದ್ದೆವು. ಒಂದು ದೊಡ್ಡ ವಿಜಯ ಸಿಕ್ಕಿದೆ ನಮಗೆ. ದೇಶದಲ್ಲೇ ಒಂದು ಹೊಸ ಉತ್ಸಾಹ ಬಂದಿದೆ. ವಿಶೇಷವಾಗಿ ನಮಗೆ ಪ್ರತಿಸಲ ಕೆಣಕಿ ಮಾತನಾಡುತ್ತಿದ್ದ ಬಿಜೆಪಿಯವರಿಗೆ ಸಿಕ್ಕ ಹೊಡೆತ ಇದು. ಕಾಂಗ್ರೆಸ್ ಪಾರ್ಟಿಗೆ ಟಾಂಟ್ ಹೊಡೆದು, ಬಾಗಿಲು ಬಂದ್ ಆಯಿತು ಎಂದು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಮಾಡುವುದಾಗಿ ಹೇಳಿದ್ದರು. ಈಗ ಬಿಜೆಪಿ ಮುಕ್ತ ದಕ್ಷಿಣ ಭಾರತ ಆಗಿದೆ ಎಂದು ತಿಳಿಸಿದ್ದಾರೆ.
ನೀವು ಗುಜರಾತಿನ ಭೂಮಿ ಪುತ್ರ, ನಾನು ಕರ್ನಾಟಕದ ಭೂಮಿ ಪುತ್ರ
ಭಾರತ್ ಜೋಡೋ ಯಾತ್ರೆ ಮೂಲಕ ರಾಜ್ಯದ ಬಹುತೇಕ ಕಡೆಗೆ ಪಕ್ಷ ಸಂಘಟನೆ ಆಗಿದೆ. ಪಕ್ಷದ ಅಧ್ಯಕ್ಷನಾಗಿ ನನಗೂ ಹೆಮ್ಮೆ ಇದು. ಇದರ ಕ್ರೆಡಿಟ್ ರಾಹುಲ್ ಗಾಂಧಿಗೆ ಸಲ್ಲಬೇಕು. ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಐಸಿಸಿ ಅಧ್ಯಕ್ಷನಾಗಿದ್ದ ಹೊಸದರಲ್ಲಿ ಗುಜರಾತ್‌ಗೆ ಹೋಗಿದ್ದೆ. ಆಗ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಇತ್ತು. ಅವರು ರೋಡ್ ಶೋ ಮಾಡಿ ಒಂದು ಕಾರ್ನರ್‌ನಲ್ಲಿ ಮೀಟಿಂಗ್ ಮಾಡ್ತಾ ಇದ್ರು. ಅಲ್ಲಿ ಹೋಗಿ, ನಾನು ಗುಜರಾತ್‌ನ ಸುಪುತ್ರ, ನಾನು ಭೂಮಿ ಪುತ್ರ. ನೀವು ನನ್ನನ್ನು ತಲೆತಗ್ಗಿಸುವಂತೆ ಮಾಡಬಾರದು. ನನಗೆ ಮತ ನೀಡಿ ದೇಶದಲ್ಲಿ, ದೆಹಲಿಯಲ್ಲಿ ನಿಂತು ನಿಮ್ಮನ್ನು ಮಾದರಿಯಾಗಿ ತೋರಿಸುವಂತೆ ಮಾಡಬೇಕು ನೀವು ಎಂದು ಹೇಳುತ್ತಿದ್ದರು.
ನಾನು ಅದನ್ನೆ ಹೇಳಿದೆ. ನೀವು ಗುಜರಾತಿನ ಭೂಮಿಪುತ್ರ, ನಾನು ಕರ್ನಾಟಕದ ಭೂಮಿ ಪುತ್ರ. ಅದಕ್ಕಾಗಿ ನಿಮಗೇನು ಸ್ವಾಭಿಮಾನದಿಂದ ಜನ ಮತ ಹಾಕಿದ್ರೋ ಈಗ ನನ್ನ ಸರದಿಯಲ್ಲಿ ಕರ್ನಾಟಕ ಜನತೆ ನನಗೆ ವೋಟ್ ಹಾಕುತ್ತಾರೆಯೇ ಹೊರತು ನಿಮಗಲ್ಲ ಎಂಬುದನ್ನು ನಾನು ಹೇಳಿದೆ. ಒಬ್ಬ ಪ್ರಧಾನಿಯಾಗಿ ಅವರು ಆ ರೀತಿ ಅಭಿಯಾನ ಮಾಡಬಾರದಿತ್ತು. ಹಾಗೆ ಹೇಳಿದ ಮೇಲೆ ನಾವು ಉತ್ತರ ಕೊಡಲೇ ಬೇಕು. ಇಲ್ಲಾಂದ್ರೆ ನೀವು ತಪ್ಪು ತಿಳಿದುಕೊಳ್ಳುತ್ತೀರಿ ಎಂದು ಹೇಳಿದ್ದಾರೆ.
ನನ್ನನ್ನು ನೋಡಿ ಮತ ಕೊಡಿ ಎಂದರೆ ಕನ್ನಡಿಗರು ಎಷ್ಟು ಸಲ ನಿಮ್ಮನ್ನು ನೋಡಬೇಕು
ಪ್ರಧಾನಮಂತ್ರಿಯವರಿಗೆ ನೀಡಬೇಕಾದ ಗೌರವ ಕೊಡುತ್ತೇವೆ. ಅದನ್ನು ನಾವು ಹೆದರಿಕೊಂಡು ಗೌರವ ಕೊಡುತ್ತೇವೆ ಎಂದು ಬಿಂಬಿಸಿದರೆ ತಪ್ಪಾಗುವುದಿಲ್ಲವೇ? ಆದದ್ದೂ ಅದುವೇ. ಪ್ರಧಾನ ಮಂತ್ರಿಯವರು ಕರ್ನಾಟಕಕ್ಕೆ ಬಂದು ನನ್ನನ್ನು ನೋಡಿ ಮತ ಕೊಡಿ, ನನ್ನನ್ನು ನೋಡಿ ಮತ ಕೊಡಿ ಎಂದು ಎಲ್ಲ ಕಡೆ ಓಡಾಡಿದರೆ ಜನ ಎಷ್ಟು ಅಂತ ನೋಡಿಯಾರು? ಅವರಿಗೂ ವಾಕರಿಕೆ ಬುವುದಿಲ್ಲವೆ?. ಅದಕ್ಕೇ ಈ ಸಲ ಕನ್ನಡಿಗರು ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದಾರೆ. ಡಿಕೆಶಿವಕುಮಾರ್, ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಮನ್ನಣೆ ಕೊಟ್ಟಿದ್ಧಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವಿವರಿಸಿದ್ದಾರೆ.