ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: 2013ರ ನಂತರ ಇದೀಗ 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಪೂರ್ಣ ಬಹುಮತದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ (Karnataka CM) ತೀವ್ರ ಪೈಪೋಟಿ ಏರ್ಪಟ್ಟಿದೆ.
ಹಲವು ಹಿರಿಯ ನಾಯಕರು ಸಿಎಂ ಆಕಾಂಕ್ಷಿಯಾಗಿದ್ದರೂ, ರೇಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ. ಇದೀಗ ಕೈ ಹೈಕಮಾಂಡ್‌ಗೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಇದೇ ವೇಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಬಣದ ಬೆಂಬಲಿಗರು ರಹಸ್ಯ ಸಭೆ ನಡೆಸಿದ್ದು, ಸಿದ್ದರಾಮಯ್ಯಗೆ ಸಿಎಂ ಹುದ್ದೆ ಸಿಗುವಂತೆ ಮಾಡಲು ರಣತಂತ್ರ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಶಾಸಕ ಭೈರತಿ ಸುರೇಶ್ ಅಪಾರ್ಟ್‌ಮೆಂಟ್‌ನಲ್ಲಿ ರಹಸ್ಯ ಮೀಟಿಂಗ್ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಂಬಿ ಪಾಟೀಲ್, ದಿನೇಶ್ ಗುಂಡೂರಾವ್, ಕೆಜೆ ಜಾರ್ಜ್, ಭೈರತಿ ಸುರೇಶ್, ಜಮೀರ್ ಅಹ್ಮದ್ ಸೇರಿ ಹಲವರು ನಾಯಕರು ಭಾಗಿಯಾಗಿದ್ದರು. ತಮ್ಮ ನಾಯಕ ಸಿದ್ದರಾಮಯ್ಯ ಅವರನ್ನೇ ಮುಂದಿನ ಮುಖ್ಯಮಂತ್ರಿ ಮಾಡುವಂತೆ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಬಾರಿಯ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರ ಸಭೆ ಇಂದು ಸಂಜೆ (ಭಾನುವಾರ, ಮೇ 14) 5.30ಕ್ಕೆ ನಡೆಯಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಭಾನುವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನೂತನ ಸಿಎಂ ಅನ್ನು ಆಯ್ಕೆ ಮಾಡಲಿದ್ದು, ಆಯ್ಕೆಯಾದ ನಾಯಕ ನೂತನ ಮುಖ್ಯಮಂತ್ರಿಯಾಗಿ ನಾಳೆ (ಸೋಮವಾರ, ಮೇ 15) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಸಕರ ಬೆಂಬಲ ಪಡೆಯಲು ಸಿದ್ದರಾಮಯ್ಯ ಕಸರತ್ತು
ನೂತನ ಕಾಂಗ್ರೆಸ್ ಶಾಸಕರ ಬೆಂಬಲ ಸಿದ್ದರಾಮಯ್ಯ ಸೇರಿದಂತೆ ಅವರ ಬಣ ಭಾರೀ ಕಸರತ್ತು ನಡೆಸುತ್ತಿದೆ. ಸಿದ್ದರಾಮಯ್ಯ ಸಿಎಂ ಆಗಲು ಬೆಂಬಲಕ್ಕಾಗಿ 100 ಶಾಸಕರನ್ನು ಸಂಪರ್ಕಿಸಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಮುಂದೆ ಸಂಖ್ಯಾಬಲ ಪ್ರದರ್ಶಿಸಲು ಸಿದ್ದರಾಮಯ್ಯ ಬಣ ಪ್ರಯತ್ನಿಸುತ್ತಿದೆ.ಹೀಗಾಗಿ ತಮಗೆ 100ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ತೋರಿಸಲು ಸಿದ್ದರಾಮಯ್ಯ ಬಣದ ನಾಯಕರು ಈಗಾಗಲೇ ಶಾಸಕರ ಬಳಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ಕೆಲ ಪಕ್ಷೇತರ ಶಾಸಕರನ್ನು ಕಾಂಗ್ರೆಸ್‌ಗೆ ತರಲು ಯತ್ನಿಸುತ್ತಿದ್ದಾರೆ.
ಸಿದ್ದರಾಮಯ್ಯ ಮನೆಗೆ ಭದ್ರತೆ
ಕಾಂಗ್ರೆಸ್ ಬಹುಮತ ಗಳಿಸುತ್ತಿದ್ದಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈಗಾಗಲೇ ಸಿದ್ದರಾಮಯ್ಯ ಮನೆ ಮುಂದೆ ಅವರ ಬೆಂಬಲಿಗರು ಮುಂದಿನ ಸಿಎಂ ಎಂದು ಪೋಸ್ಟರ್ ಹಾಕಲಾಗಿದೆ. ಮತ್ತೊಂದೆಡೆ ಸಿದ್ದರಾಮಯ್ಯ ನಿವಾಸದತ್ತ ಆಪ್ತ ಶಾಸಕರ ದಂಡೇ ಬರುತ್ತಿದೆ. ಶಾಸಕ ಕೃಷ್ಣ ಭೈರೇಗೌಡ, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವರು ಆಗಮಿಸಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ.