ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ತುಮಕೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ, ಛಲವಾದಿ ಮಹಾಸಭಾ, ಡಾ.ಜಿ.ಪರಮೇಶ್ವರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಟೌನ್ಹಾಲ್ ಹಾಲ್ ಸರ್ಕಲ್ನಲ್ಲಿ ಸಮಾವೇಶಗೊಂಡಿದ್ದ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ, ಛಲವಾದಿ ಮಹಾಸಭಾ ಹಾಗೂ ಡಾ.ಜಿ.ಪರಮೇಶ್ವರ್ ಅಭಿಮಾನಿಗಳು, ನಗರ ಪಾಲಿಕೆಯ ಮೇಯರ್, ಸದಸ್ಯರು, ವಿದ್ಯಾವಂತ, ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳಿದ್ದು, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ಬಾರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿದೆ ಎಂಬುದನ್ನು ಸಾಬೀತು ಪಡಿಸುವಂತೆ ಆಗ್ರಹಿಸಿದರು.
ಈ ವೇಳೆ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಜೆ.ಕುಮಾರ್ ಮಾತನಾಡಿ, ಇಂದು ಕಾಂಗ್ರೆಸ್ ಪಕ್ಷ ಅತ್ಯಂತ ಬಹುಮತಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬಂದಿದೆ ಎಂದರೆ ಅದರ ಹಿಂದೆ ಡಾ.ಜಿ.ಪರಮೇಶ್ವರ್ ಅವರ ಶ್ರಮವಿದೆ, ಮಧುಗಿರಿ ಮತ್ತು ಕೊರಟಗೆರೆ ಮೀಸಲು ಕ್ಷೇತ್ರಗಳಲ್ಲಿ ತಲಾ ಮೂರು ಬಾರಿ ಸೇರಿದಂತೆ 6ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಡಾ.ಜಿ.ಪರಮೇಶ್ವರ್ ರೇಷ್ಮೆ ಸಚಿವರಾಗಿ,ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಸಚಿವರಾಗಿ, ಗೃಹ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಸಣ್ಣ ಲೋಪದೋಷವೂ ಇಲ್ಲದೆ ಕಾರ್ಯ ನಿರ್ವಹಿಸಿದ್ದಾರೆ, ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಅತ್ಯಂತ ಉತ್ತಮ ಪ್ರಣಾಳಿಕೆ ನೀಡಿ ಅದು ರಾಜ್ಯದ ಮತದಾರರ ಮನೆ ಮತ್ತು ಮನಗಳನ್ನು ತಲುಪುವಂತೆ ಮಾಡಿದ್ದಾರೆ, ಹಾಗಾಗಿ ಈ ಬಾರಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯಾಗಿ ನೇಮಿಸುವ ಮೂಲಕ ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ರಾಜ್ಯಾಧ್ಯಕ್ಷ ನಗುತಾ ರಂಗನಾಥ್ ಮಾತನಾಡಿ, ಕರ್ನಾಟಕದಲ್ಲಿ ಇಂದು ಕಾಂಗ್ರೆಸ್ 136 ಸೀಟು ಪಡೆದಿದೆ ಎಂದರೆ ಅದಕ್ಕೆ ಡಾ.ಜಿ.ಪರಮೇಶ್ವರ್ ಅವರು ಸಹ ಕಾರಣರು, ಎಲ್ಲಾ ಸಮುದಾಯದವರು, ಅದರಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸುವAತೆ ಐದು ಗ್ಯಾರಂಟಿಗಳ ಜೊತೆಗೆ ಸುಮಾರು 500ಕ್ಕು ಹೆಚ್ಚು ಭರವಸೆ ಒಳಗೊಂಡ ಸರ್ವವ್ಯಾಪಿ ಪ್ರಣಾಳಿಕೆ ನೀಡಿz್ದೆÃ ಕಾರಣ, ಅಲ್ಲದೆ ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಸಹ ಶೇ.17ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ದೊರೆತ್ತಿಲ್ಲ, ಅತ್ಯಂತ ಸಣ್ಣ ಸಮುದಾಯಗಳು ಸಹ ಮುಖ್ಯಮಂತ್ರಿ ಹುದ್ದೆ ಅನುಭವಿಸಿವೆ, ಹಾಗಾಗಿ ಈ ಬಾರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದೆ ಎಂಬ ಸಂದೇಶವನ್ನು ದೇಶಕ್ಕೆ ಮುಟ್ಟಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅತೀಕ್ ಅಹಮದ್ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಎಲ್ಲಾ ಸಮುದಾಯಗಳಿಗೂ ಬೇಕಾದ ವ್ಯಕ್ತಿ, ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಅವರ ಕಾಲದಲ್ಲಿ ಒಮ್ಮೆ ಪೂರ್ಣ ಪ್ರಮಾಣದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರಕಾರದಲ್ಲಿ ಅಧಿಕಾರಕ್ಕೆ ತಂದವರು, ಅಲ್ಲದೆ ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಐದು ಗ್ಯಾರಂಟಿಗಳ ಜೊತೆಗೆ, ರಾಜ್ಯದ ಆರ್ಥಿಕ ಸ್ಥಿತಿ, ಗತಿ ಅಧ್ಯಯನ ಮಾಡಿ, ಹಲವಾರು ಭರವಸೆ ನೀಡಿದ್ದರ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಪಕ್ಷಕ್ಕೆ ನಿಷ್ಟರಾಗಿ ಕೆಲಸ ಮಾಡಿರುವ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.