ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಬೆಂಗಳೂರು: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ 2013 ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಕರ್ನಾಕಟಕದಲ್ಲಿ ಅಧಿಕಾರಕ್ಕೆ ಬಂದಿತ್ತು. ಆ ಐದು ವರ್ಷಗಳ ಅವಧಿಯಲ್ಲಿ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು.
ಮೊದಲ ಸಂಪುಟ ಸಭೆಯಲ್ಲಿಯೇ 4,409.80 ಕೋಟಿ ರೂಪಾಯಿಗಳ ಐದು ಯೋಜನೆ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದರ ಮಾಹಿತಿ ಇಲ್ಲಿ ನೀಡಿಲಾಗಿದೆ.
1. ಅನ್ನಭಾಗ್ಯ
2. ವಿದ್ಯುತ್ ಸಂಪರ್ಕ
3. ಹಾಲು ಸಹಾಯಧನ ಏರಿಕೆ
4. ಅಹಿಂದ ವರ್ಗದವರ ಸಾಲ ಮನ್ನಾ
5. ಬಡವರ ಮನೆಗಳ ಸಹಾಯಧನ ಪ್ರಮಾಣ ಏರಿಕೆ
ಇದು 10 ವರ್ಷದ ಹಿಂದಿನ ಬೆಳವಣಿಗೆಗಳು. ಅಂದರೆ 2013 ರಲ್ಲಿ ಇದೇ ರೀತಿ ಬಿಜೆಪಿ ಸರ್ಕಾರವನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆಗಲೂ ದಲಿತರು, ಅಲ್ಪಸಂಖ್ಯಾತರು, ಬಡವರು, ಹಿಂದುಳಿದವರ ಹತ್ತಾರು ಬೇಡಿಕೆಗಳಿಗೆ ಸ್ಪಂದಿಸುವ 168 ಭರವಸೆಗಳನ್ನು ಕಾಂಗ್ರೆಸ್ ತನ್ನಪ್ರಣಾಳಿಕೆಯಲ್ಲಿ ನೀಡಿತ್ತು. ಆಗ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.
2013ರ ಮೇ 13ರ ಬಸವಜಯಂತಿಯಂದು ಸಿದ್ದರಾಮಯ್ಯ ಅವರು ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಧಿಕಾರ ವಹಿಸಿಕೊಂಡ ಎರಡೇ ಗಂಟೆಯಲ್ಲಿ ಸಂಪುಟ ಸಭೆ ನಡೆಸಿ ಹಲವು ಭರವಸೆಗಳನ್ನು ಈಡೇರಿಸಿದ್ದರು. ಒಟ್ಟು 1.38 ಕೋಟಿ ಜನರಿಗೆ ಸಹಾಯವಾಗುವ ಯೋಜನೆಗಳು ಸೇರಿದ್ದು 4,409.80 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಬೀಳುವ ಯೋಜನೆಗಳನ್ನು ಪ್ರಕಟಿಸಿದ್ದರು.
ಅದರಲ್ಲಿ ಅನ್ನಭಾಗ್ಯ ಪ್ರಮುಖ ಯೋಜನೆಯಾಗಿತ್ತು. ರಾಜ್ಯದ 98ಲಕ್ಷ ಬಡವರಿಗೆ 1 ರೂ.,ನಂತೆ 30 ಕೆಜಿ ಅಕ್ಕಿ ನೀಡುವ ಯೋಜನೆ ಇದಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 460 ಕೋಟಿ ರೂ. ಹೊರೆ ಬೀಳಬಹುದು ಎಂದು ಘೋಷಿಸಲಾಗಿತ್ತು.
ಇದಲ್ಲದೇ ಹಾಲು ಉತ್ಪಾದಕರಿಗೆ ಸರ್ಕಾರದಿಂದ ನೀಡುತ್ತಿದ್ದ ಸಹಾಯಧನವನ್ನು ಲೀಟರ್‌ಗೆ 2 ರೂ.ನಿಂದ 4 ರೂ.ಗೆ ಏರಿಕೆ ಮಾಡಲಾಗಿತ್ತು. ಇದರಿಂದ 7.5 ಲಕ್ಷ ಹಾಲು ಉತ್ಪಾದಕರಿಗೆ ಲಾಭವಾಗಿತ್ತು. ಸರ್ಕಾರಕ್ಕೆ ಸಹಾಯಧನ ಹೆಚ್ಚಳದಿಂದ ವಾರ್ಷಿಕ ಹೊರೆಯಾಗಿದ್ದು 498 ಕೋಟಿ ರೂ. ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಕಟ್ಟುವ ಬಡವರಿಗೆ ಇಂದಿರಾ ಆವಾಜ್ ಸೇರಿ ಹಲವು ಯೋಜನೆಗಳಲ್ಲಿ 75 ಸಾವಿರ ರೂ. ಸಹಾಯಧನ ನೀಡಲಾಗುತ್ತಿತ್ತು. ಇದನ್ನು 1.20 ಲಕ್ಷಕ್ಕೆ ಏರಿಸಲಾಯಿತು.
ಇನ್ನು ವಿವಿಧ ವರ್ಗಗಳ ಸಾಲವನ್ನೂ ಅಸಲು ಹಾಗೂ ಬಡ್ಡಿ ಸೇರಿ ಮನ್ನಾ ಮಾಡಲಾಗಿತ್ತು. ಎಸ್ಸಿ ಹಾಗೂ ಎಸ್ಟಿ ವರ್ಗಕ್ಕೆ 349 ಕೋಟಿ ರೂ. ಹಿಂದುಳಿದ ವರ್ಗಗಳ 514.26 ಕೋಟಿ ರೂ. ಅಲ್ಪಸಂಖ್ಯಾತ ವರ್ಗದ 362 ಕೋಟಿ ರೂ. ಸಾಲ ಮನ್ನಾ ಘೋಷಿಸಲಾಗಿತ್ತು.
ಇದರೊಟ್ಟಿಗೆ ಭಾಗ್ಯಜ್ಯೋತಿ ಯೋಜನೆಯಡಿ 20 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್‌ಸಂಪರ್ಕ ನೀಡುವ ಘೋಷಣೆಯನ್ನು ಸಿದ್ದರಾಮಯ್ಯ ಮೊದಲ ದಿನವೇಹೊರಡಿಸಿದ್ದರು. ಇದರಿಂದ 268 ಕೋಟಿ ರೂ. ಬೊಕ್ಕಸಕ್ಕೆ ಹೊರೆ ಬೀಳುವುದಾಗಿ ಪ್ರಕಟಿಸಲಾಗಿತ್ತು.
2023ರ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಸದ್ಯ ಆ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಮಹಿಳೆಯರಿಗೆ ಉಚಿತ ಪ್ರಯಾಣದ ಐದು ಯೋಜನೆಗಳನ್ನು ಮುಂದಿನ ಸಂಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿಕೃತವಾಗಿ ಜಾರಿಗೆ ತರೋದಾಗಿ ಸಿದ್ದರಾಮಯ್ಯ ಇಂದಿನ ಸಚಿವ ಸಂಪುಟ ಸಭೆ ಬಳಿಕ ಸ್ಪಷ್ಟಪಡಿಸಿದ್ದಾರೆ.