ಹೈದರಾಬಾದ್ನಲ್ಲಿ ತೆಲಗು ಸ್ಟಾರ್ ಜೊತೆ ಸಿನಿಮಾ ಘೋಷಿಸಿದ ಶಿವರಾಜ್ ಕುಮಾರ್
Shivraj Kumar announced a movie with a Telugu star in Hyderabad
ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ನೆರೆಹೊರೆ ಚಿತ್ರರಂಗದವರ ಸ್ನೇಹಕ್ಕೆ ಕಟ್ಟುಬಿದ್ದು ಕೆಲ ಅನ್ಯಭಾಷೆ ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ಇದೀಗ ಮತ್ತೊಂದು ತೆಲುಗು ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದು ಈ ಬಗ್ಗೆ ಹೈದರಾಬಾದ್ನ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದಾರೆ.
ಕನ್ನಡ ಸಿನಿಮಾಗಳ ಹೊರತಾಗಿ ಬೇರೆ ಭಾಷೆಗಳಲ್ಲಿ ನಟಿಸದೇ ಇದ್ದ ಶಿವಣ್ಣ , ನೆರೆ ಚಿತ್ರರಂಗದವರ ಪ್ರೀತಿ, ಸ್ನೇಹಕ್ಕೆ ಕಟ್ಟುಬಿದ್ದು ಇತ್ತೀಚೆಗೆ ಕೆಲವು ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗೆ ನೆರೆ ಚಿತ್ರರಂಗದವರ ಸ್ನೇಹಕ್ಕೆ ಕಟ್ಟುಬಿದ್ದು ಮೊದಲು ನಟಿಸಿದ ಪರಭಾಷೆ ಸಿನಿಮಾ ಗೌತಮಿಪುತ್ರ ಶಾತಕರ್ಣಿ. ನಂದಮೂರಿ ಬಾಲಕೃಷ್ಣ ನಾಯಕರಾಗಿ ನಟಿಸಿದ್ದ ಈ ತೆಲುಗು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಈಗ ತಮಿಳಿನ ಎರಡು ಸಿನಿಮಾಗಳಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಈ ನಡುವೆ ನಿನ್ನೆಯಷ್ಟೆ ಹೈದರಾಬಾದ್ನಲ್ಲಿ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿವಣ್ಣ, ವೇದಿಕೆ ಮೇಲೆ ನಿಂತುಕೊಂಡೆ ತೆಲುಗಿನ ಸ್ಟಾರ್ ನಟರೊಟ್ಟಿಗೆ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
ತೆಲುಗು ಚಿತ್ರರಂಗದ ದಂತಕತೆ ಎನ್ಟಿಆರ್ ಅವರ ನೂರನೇ ಜಯಂತಿ ಕಾರ್ಯಕ್ರಮವನ್ನು ನಂದಮೂರಿ ಕುಟುಂಬದವರು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ನಂದಮೂರಿ ಬಾಲಕೃಷ್ಣ, ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಚಿರಂಜೀವಿ ಪುತ್ರ ರಾಮ್ ಚರಣ್, ವಿಕ್ಟರಿ ವೆಂಕಟೇಶ್ ಇನ್ನೂ ಹಲವರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಶಿವರಾಜ್ ಕುಮಾರ್ ಎನ್ಟಿಆರ್ ಅವರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಜೊತೆಗೆ ತಾವು ಮತ್ತೊಂದು ಪೂರ್ಣಪ್ರಮಾಣದ ತೆಲುಗು ಸಿನಿಮಾವನ್ನು ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
ಎನ್ಟಿಆರ್ ಹಾಗೂ ಅಪ್ಪಾಜಿ ಡಾ ರಾಜ್ಕುಮಾರ್ ಅವರು ಸಹೋದರರಂತೆ ಇದ್ದರು ಎಂದ ಶಿವರಾಜ್ ಕುಮಾರ್, ಈಗ ನಾನು ಹಾಗೂ ಬಾಲಕೃಷ್ಣ ಅವರು ಸಹೋದರರಂತೆ ಇದ್ದೀವಿ. ನಾನು ಬೇರೆ ಭಾಷೆಗಳಲ್ಲಿ ನಟಿಸಿರಲಿಲ್ಲ ಆದರೆ ಬಾಲಕೃಷ್ಣ ಅವರ 100ನೇ ಸಿನಿಮಾ ಗೌತಮಿ ಪುತ್ರ ಶಾತಕರ್ಣಿ ಸಿನಿಮಾದಲ್ಲಿ ಬಾಲಕೃಷ್ಣ ಅವರಿಗಾಗಿ ನಟಿಸಿದ್ದು ನನಗೆ ಖುಷಿ ಇದೆ. ನನ್ನನ್ನು ತೆಲುಗು ಚಿತ್ರರಂಗಕ್ಕೆ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ಮುಂದುವರೆದು, ”ನಾವು ಮತ್ತೆ ಒಟ್ಟಿಗೆ ಸಿನಿಮಾ ಮಾಡಲಿದ್ದೇವೆ. ಅದು ನನಗೆ ಬಹಳ ಗೌರವದ ವಿಷಯ. ಜನರು ಆ ಸಿನಿಮಾವನ್ನು ಸ್ವಾಗತಿಸುತ್ತೀರ, ಪ್ರೀತಿಸುತ್ತೀರ ಎಂದು ನಂಬಿದ್ದೇನೆ” ಎಂದರು. ಬಾಲಕೃಷ್ಣ ಬಗ್ಗೆ ಮಾತನಾಡುತ್ತಾ, ”ಎನ್ಟಿಆರ್ ಅವರು ಅನ್ಸ್ಟಾಪೆಬಲ್ ಆಗಿದ್ದರು ಹಾಗೆಯೇ ಬಾಲಕೃಷ್ಣ ಸಹ ಅನ್ಸ್ಟಾಪೆಬಲ್ ಆಗಿ ಬಿಟ್ಟಿದ್ದಾರೆ. ವಯಸ್ಸಾದಷ್ಟು ಅವರ ಜೋಶ್ ಹೆಚ್ಚಾಗುತ್ತಿದೆ, ಅವರು ಇನ್ನಷ್ಟು ಯುವಕರಾಗುತ್ತಾ ಸಾಗುತ್ತಿದ್ದಾರೆ. ಅವರು ಹೀಗೆಯೇ ಇರಬೇಕು ಎಂದು ಆಶಿಸುತ್ತೇನೆ” ಎಂದಿದ್ದಾರೆ ಶಿವಣ್ಣ. ಈ ಸಮಯದಲ್ಲಿ ನಟ ಬಾಲಕೃಷ್ಣ ಸಹ ಶಿವರಾಜ್ ಕುಮಾರ್ ಪಕ್ಕದಲ್ಲಿಯೇ ಇದ್ದು ಚಪ್ಪಾಳೆ ತಟ್ಟಿ ಶಿವಣ್ಣನ ಮಾತುಗಳಿಗೆ ಸಮ್ಮತಿಸಿದರು.
ಶಿವರಾಜ್ ಕುಮಾರ್ ನಟಿಸಿರುವ ಏಕೈಕ ತೆಲುಗು ಸಿನಿಮಾ ಬಾಲಕೃಷ್ಣರ ಗೌತಮಿ ಪುತ್ರ ಶಾತಕರ್ಣಿ, ಇದೀಗ ರಜನೀಕಾಂತ್ ಜೊತೆಗೆ ಜೈಲರ್ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಅಳಿಯ ಧನುಶ್ ಜೊತೆಗೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಕನ್ನಡದಲ್ಲಿಯಂತೂ ಶಿವಣ್ಣ ಬಹಳ ಬ್ಯುಸಿ, ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ಉಪೇಂದ್ರ ಜೊತೆ ನಟಿಸುತ್ತಿದ್ದಾರೆ. ಘೋಸ್ಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆರ್ ಚಂದ್ರು ನಿರ್ದೇಶನದ ಕಬ್ಜ 2 ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನೂ ಕೆಲವು ಸಿನಿಮಾಗಳನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ.