ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಹೊಸ ದಿಲ್ಲಿ: ಜಗತ್ತಿನ ಇತರೆ ದೇಶಗಳು ಭಾರತದ ಕುರಿತು ಏನು ಯೋಚಿಸುತ್ತಿರಬಹುದು, ಭಾರತದ ಮುಂದಿನ ಚಿಂತನೆಗಳು ಹೇಗಿರಬಹುದು ಎನ್ನುವ ಕುತೂಹಲ ಹೊಂದಿರಬಹುದು?
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಬೇರೆ ಬೇರೆ ದೇಶಗಳು ಭಾರತದ ಕುರಿತು ಹೊಂದಿರುವ ಅಭಿಪ್ರಾಯಗಳನ್ನು ಮೂರು ದೇಶಗಳ ಪ್ರವಾಸ ಮುಗಿಸಿ ಗುರುವಾರ ಬೆಳಗ್ಗೆ ಭಾರತಕ್ಕೆ ಹಿಂದಿರುಗಿದ ವೇಳೆ ಹಂಚಿಕೊಂಡರು.
ದಿಲ್ಲಿನ ಪಾಲಂ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸಿದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನೀವು ಭಾರತದ ಎಲ್ಲ ಜನರಿಗೆ ಕೋವಿಡ್ ಲಸಿಕೆಗಳನ್ನು ಏಕೆ ನೀಡಿದಿರಿ ಎಂದು ಪ್ರವಾಸ ಕೈಗೊಂಡ ದೇಶಗಳಲ್ಲಿ ಜನ ನನ್ನನ್ನು ಕೇಳಿದರು. ನಮ್ಮದು ಬುದ್ದ, ಗಾಂಧಿಯ ನಾಡು. ಇಲ್ಲಿ ಎದುರಾಳಿಯನ್ನು ಆರೈಕೆ ಮಾಡುವ ದೊಡ್ಡಗುಣವಿದೆ ಎನ್ನುವ ಉತ್ತರ ನೀಡಿದೆ. ಇದೇ ಕಾರಣದಿಂದಲೇ ಇಡೀ ವಿಶ್ವವು ಭಾರತದ ಯೋಚನೆ ಏನಿರಬಹುದು ಎನ್ನುವುದನ್ನು ತಿಳಿಯಬಯಸುತ್ತಿದೆ ಎಂದು ಹೇಳಿದರು.
ಹೊರ ದೇಶಗಳಲ್ಲಿ ಭಾರತದ ಸಂಸ್ಕೃತಿಯ ಬಗ್ಗೆ ನಾನು ಮಾತನಾಡುವಾಗ ಜಗತ್ತಿನ ಬೇರೆ ದೇಶಗಳ ಕಣ್ಣುಗಳನ್ನು ನೋಡುತ್ತೇನೆ. ಇಂತಹ ಆತ್ವವಿಶ್ವಾಸ ನನ್ನಲ್ಲಿ ಬರಲು ನೀವು ಸಂಪೂರ್ಣ ಬಹುಮತದ ಸರ್ಕಾರವನ್ನು ತಂದಿದ್ದೀರಿ. ಈಗಲೂ ಇಲ್ಲಿ ನನ್ನನ್ನು ನೋಡಲು ಬಂದಿರುವ ಅಭಿಮಾನವೂ ಅದನ್ನು ತೋರಿಸುತ್ತದೆ ಎಂದು ನುಡಿದರು.
ಪಪುವಾ ನ್ಯೂ ಗ್ಯುನಿಯಾದಲ್ಲಿ ತಮಿಳು ಭಾಷೆಯಿಂದ ಅನುವಾದಗೊಂಡಿರುವ ತಿರುಕ್ಕರಲ್ ಪುಸ್ತಕ ಟಾಕ್ ಪಿಸಿನ್ ಬಿಡುಗಡೆ ಮಾಡುವ ಅವಕಾಶ ಲಭಿಸಿತು. ತಮಿಳು ಭಾಷೆ ನಮ್ಮ ಭಾಷೆ. ಇದು ಭಾರತದ ಪ್ರತಿಯೊಬ್ಬರ ಭಾಷೆ ಮಾತ್ರವಲ್ಲ. ಜಗತ್ತಿನ ಪುರಾತನ ಭಾಷೆಯೂ ಹೌದು ಎಂದು ತಿಳಿಸಿದರು.
ಪ್ರಧಾನಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಿದೆ. ಅಮೆರಿಕಾದ ಅಧ್ಯಕ್ಷರೇ ಭಾರತದ ಪ್ರಧಾನಿ ಆಟೋಗ್ರಾಫ್ ಪಡೆಯುವ ಹಂತಕ್ಕೆ ಹೋಗುತ್ತಿರುವುದು ಇದಕ್ಕೆ ಸಾಕ್ಷಿ. ಪಪುವಾ ನ್ಯೂ ಗ್ಯುನಿಯಾ ದೇಶದ ಪ್ರಮುಖರೇ ನಮ್ಮ ಪ್ರಧಾನಿ ಪಾದಮುಟ್ಟಿ ನಮಸ್ಕರಿಸುವ ಹಂತಕ್ಕೆ ಹೋಗಿರುವುದು ನಮ್ಮ ಗೌರವ ಎಂದು ತಿಳಿಸಿದರು.
ಜಿ ೭ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಜಪಾನ್, ಪಪುವಾ ನ್ಯೂ ಗ್ಯುನಿಯಾ ಹಾಗೂ ಆಸ್ಟ್ರೇಲಿಯಾ ದೇಶಗಳ ಪ್ರವಾಸವನ್ನು ಮೋದಿ ಕೈಗೊಂಡಿದ್ದರು.
.