ವರದಿ: ಪ್ರಿಯಲಚ್ಛಿ ಗಂಧನಹಳ್ಳಿ
ಮೈಸೂರು: ಕೊಟ್ಟ ಮಾತಿನಂತೆಯೇ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಇದು ವಿರೋಧ ಪಕ್ಷಗಳನ್ನು ಕೆರಳಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು,
ಸಂಪುಟ ರಚನೆಯಾದ ನಂತರದಲ್ಲಿ ನಡೆದ ಮೊದಲ ಸಂಪುಟದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐತಿಹಾಸಿಕ ತೀರ್ಮಾನ ಪ್ರಕಟಿಸಿದರು. ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಗಳು ಅಧಿಕಾರದಲ್ಲಿದ್ದ ಸಮಯದಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದಾಗ ಮುಕ್ತವಾಗಿ ಅಭಿನಂದಿಸುವ, ಒಳ್ಳೆಯ ಮಾತುಗಳನ್ನಾಡುವ ಸೌಜನ್ಯವನ್ನೂ ಪ್ರದರ್ಶಿಸದೆ ಹೀಯಾಳಿಸುವುದು ಸರಿಯೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರಿಂದ ಈ ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವೇ ಇಲ್ಲ. ಇದು ಯಾರೂ ಜಾರಿ ಮಾಡಲಾಗದ ತೀರ್ಮಾನ ಎಂದು ಅವರು ಭಾವಿಸಿದ್ದರು. ಜನರ ಮುಂದೆ ಅವಮಾನಕ್ಕೊಳಗಾಗುವ ಕ್ಷಣಗಳಿಗೆ ಎದುರು ನೋಡುತ್ತಿದ್ದರು. ಆದರೆ, ಕಾಂಗ್ರೆಸ್ ಅವರ ನುಡಿದಂತೆ ನಡೆಯುವ ಮೂಲಕ ಕರ್ನಾಟಕದ ಮಾದರಿಯನ್ನು ದೇಶಕ್ಕೆ ಹಾಕಿಕೊಟ್ಟಿದ್ದೇವೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಆಹಾರ ಧಾನ್ಯಗಳ ಪ್ರಮಾಣವನ್ನು ಕಡಿತಗೊಳಿಸಿದರೆ, ಜೆಡಿಎಸ್ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಿಲ್ಲ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿ ಅದನ್ನೂ ಮಾಡಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರ ಅನ್ನಭಾಗ್ಯಕ್ಕೆ ಕತ್ತರಿ ಹಾಕಿತು. ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಿತು. 40 ಪರ್ಸೆಂಟ್ ಸರ್ಕಾರ ಎಂಬ ಹಣೆಪಟ್ಟಿಕಟ್ಟಿಕೊಂಡಿತು. ಅಭಿವೃದ್ಧಿಯಲ್ಲಿ ಶೂನ್ಯ ಆವರಿಸಿದ್ದ ಐದು ವರ್ಷಗಳ ಸರ್ಕಾರವನ್ನು ತೆಗೆದು ಕಾಂಗ್ರೆಸ್‌ಗೆ ಪೂರ್ಣ ಬಹುಮತ ನೀಡಿ ಜನರು ಅಧಿಕಾರ ಕೊಟ್ಟಿದ್ದಾರೆ. ಅದಕ್ಕಾಗಿಯೇ ಜನರಿಗೆ ಕೊಟ್ಟಮಾತಿನಂತೆ ನಡೆಯುತ್ತಿದ್ದೇವೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಮೈಷುಗರ್ ಕಾರ್ಖಾನೆಯನ್ನು ನಡೆಸಲಾಗದೆ ಖಾಸಗೀರಣಕ್ಕೆ ಮುಂದಾಗಿದ್ದಾಗ, ನಿಮ್ಮ ಕೈಲಾದರೆ ನಡೆಸಿ. ಇಲ್ಲದಿದ್ದರೆ ಇನ್ನೊಂದು ವರ್ಷ ಬಿಡಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 15 ದಿನದಲ್ಲೇ ಅನುದಾನ ಕೊಟ್ಟು ಕಾರ್ಖಾನೆ ಆರಂಭಿಸುವುದಾಗಿ ಹೇಳಿದ್ದೆ. ಸಿದ್ದರಾಮಯ್ಯನವರು ಸದನದಲ್ಲೂ ಇದೇ ಮಾತನ್ನೇ ಹೇಳಿದ್ದರು. ಅದೇ ರೀತಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಹತ್ತೇ ದಿನದಲ್ಲಿ ಮೈಷುಗರ್‌ಗೆ 50 ಕೋಟಿ ರು. ಹಣ ನೀಡಿ ಕಾರ್ಖಾನೆ ಉಳಿವಿಗೆ ಬದ್ಧರಾಗಿದ್ದೇವೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಮಂಡ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸುವ ಜತೆಗೆ ಯುವಕರಿಗೆ ಉದ್ಯೋಗ ಕಲ್ಪಿಸುವತ್ತ ಗಮನ ಹರಿಸುವ ಭರವಸೆಯನ್ನು ಸಚಿವರು ನೀಡಿದರು.